ರೈಲು ದುರಂತದ ಸ್ಥಳದಲ್ಲಿ ಸಂತ್ರಸ್ತರಿಗೆ ನಿಷೇಧಿತ ನೋಟುಗಳ ಹಂಚಿಕೆ?

By Suvarna Web DeskFirst Published Nov 21, 2016, 5:38 AM IST
Highlights

ಕೆಲ ಪ್ರಯಾಣಿಕರಿಗೆ ನಿಷೇಧಿತ 500 ಮುಖಬೆಲೆಯ ನೋಟುಗಳನ್ನು ಅಪರಿಚಿತರು ವಿತರಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕಾನಪುರ್(ನ. 21): ಮೋದಿ ಸರಕಾರ ಹೊರಡಿಸಿದ ನೋಟ್ ಬ್ಯಾನ್ ನಿರ್ಧಾರದ ಬಳಿಕ ಸಾಕಷ್ಟು ಕಪ್ಪುಹಣಗಳು ದೇವಸ್ಥಾನದ ಹುಂಡಿ ಸೇರುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಇದೀಗ ನಿನ್ನೆ ಅಪಘಾತಕ್ಕೀಡಾದ ರೈಲಿನ ಕೆಲ ಪ್ರಯಾಣಿಕರಿಗೆ ನಿಷೇಧಿತ 500 ಮುಖಬೆಲೆಯ ನೋಟುಗಳನ್ನು ಅಪರಿಚಿತರು ವಿತರಿಸಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಯಾಣಿಕರು ಹೇಳುವ ಪ್ರಕಾರ ಆ ಹಣವನ್ನು ರೈಲ್ವೆ ಅಧಿಕಾರಿಗಳೆಂದು ಹೇಳಿಕೊಂಡ ವ್ಯಕ್ತಿಗಳು ನೀಡಿದರಂತೆ. ಆದರೆ, ರೈಲ್ವೆ ಇಲಾಖೆಯಿಂದ ಈ ಬಗ್ಗೆ ಸ್ಪಷ್ಟನೆ ಬಂದಿಲ್ಲ. ರೈಲ್ವೆ ಸಚಿವ ಸುರೇಶ್ ಪ್ರಭು ಅವರ ಗಮನಕ್ಕೆ ಈ ಘಟನೆಯನ್ನು ತರಲಾಗಿದೆ.

"ಇದು ನಿಜಕ್ಕೂ ದುರದೃಷ್ಟಕರ. ರಾಜಕೀಯ ಪಕ್ಷವೋ ಅಥವಾ ರೈಲ್ವೆ ಉದ್ಯೋಗಿಗಳೋ ಅಥವಾ ಇನ್ಯಾರು ಈ ಹಣವನ್ನು ವಿತರಿಸಿದರೆಂಬುದು ಗೊತ್ತಿಲ್ಲ. ರೈಲ್ವೆ ಅಧಿಕಾರಿಗಳು ಈ ಕೆಲಸ ಮಾಡಿದ್ದರೆ ಅದು ತಪ್ಪೇ. ರಾಜಕಾರಣಿಯಿಂದ ಇದಾಗಿದ್ದರೆ ಜನರ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ" ಎಂದು ಬಿಜೆಪಿ ನಾಯಕ ಆರ್.ಪಿ.ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ನಿನ್ನೆ ಭಾನುವಾರ ನಸುಕಿನ ಜಾವದಲ್ಲಿ ಇಂದೋರ್-ಪಾಟ್ನಾ ಎಕ್ಸ್'ಪ್ರೆಸ್ ರೈಲು ಹಳಿ ತಪ್ಪಿ ಭೀಕರ ಅಪಘಾತಕ್ಕೀಡಾಗಿತ್ತು. ಆ ದುರ್ಘಟನೆಯಲ್ಲಿ 130ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದೆ.

click me!