ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಆಕೆ ಆತ್ಮಹತ್ಯೆ

By Web DeskFirst Published Nov 25, 2018, 12:24 PM IST
Highlights

ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ಸಾವು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

ಬೆಂಗಳೂರು :  ಹೈಕೋರ್ಟ್‌ ವಕೀಲರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿ ದೂರು ನೀಡಿದ್ದ ಅಂಡಮಾನ್‌ ನಿಕೋಬಾರ್‌ ಮೂಲದ ಯುವತಿ ಪ್ರಕರಣದ ತನಿಖೆಗೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

ಮಲ್ಲೇಶ್ವರದ ಲುಕುಸೋಮ್‌ ಪಿ.ಜಿ.ಯಲ್ಲಿ (ಪೇಯಿಂಗ್‌ ಗೆಸ್ಟ್‌) ಪುಷ್ಪಾ ಅರ್ಚನಾ ಲಾಲ್‌ (26) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೈಕೋರ್ಟ್‌ ಸರ್ಕಾರಿ ವಕೀಲ ಚೇತನ್‌ ದೇಸಾಯಿ ಹಾಗೂ ಟಿ.ಚಂದ್ರನಾಯ್ಕ್ ವಿರುದ್ಧ ಯುವತಿ ಲೈಂಗಿಕ ಕಿರುಕುಳ ಆರೋಪದ ದೂರು ನೀಡಿದ್ದರು. ವಕೀಲರ ಮೇಲಿನ ದೂರು ಹಿಂಪಡೆದು ಅಂಡಮಾನ್‌ ನಿಕೋಬಾರ್‌ಗೆ ವಾಪಸ್‌ ಬರುವಂತೆ ತಂದೆಯೇ ಯುವತಿ ಮೇಲೆ ಒತ್ತಡ ಹಾಕಿದ್ದರು. ಬೆಂಗಳೂರು ಬಿಟ್ಟು ಹೋಗಲು ಮನಸ್ಸಿಲ್ಲದ ಯುವತಿ ಆತ್ಮಹತ್ಯೆ ಮಾಡಿಕೊಂಡಿರಬಹುದು. ಯುವತಿ ದೇಹದ ಮೇಲೆ ಗಾಯದ ಗುರುತುಗಳಿಲ್ಲ. ವಕೀಲರ ಒತ್ತಡದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಮೂಲತಃ ಅಂಡಮಾನ್‌ ನಿಕೋಬಾರ್‌ನ ಪುಷ್ಪಾ 4 ವರ್ಷಗಳ ಹಿಂದೆ ನಗರದ ಪ್ರತಿಷ್ಠಿತ ಕಾಲೇಜಿನಲ್ಲಿ ಕಾನೂನು ಪದವಿ ವ್ಯಾಸಂಗ ಮಾಡಿದ್ದರು. 2017ರಲ್ಲಿ ಇನ್ಫೆಂಟ್ರಿ ರಸ್ತೆಯಲ್ಲಿರುವ ಜಯಂತ್‌ ಎಂ.ಪಟ್ಟಣಶೆಟ್ಟಿಆ್ಯಂಡ್‌ ಅಸೋಸಿಯೇಟ್ಸ್‌ನಲ್ಲಿ ಇಂಟರ್ನ್‌ಷಿಪ್‌ಗೆ ಸೇರಿದ್ದರು. ಚಂದ್ರನಾಯ್ಕ್ ಅವರ ಬಳಿ ಕೆಲಸ ಮಾಡುವಾಗ ಸರ್ಕಾರಿ ವಕೀಲ ಚೇತನ್‌ ದೇಸಾಯಿ ಅವರ ಪರಿಚಯವಾಗಿತ್ತು. ಇಬ್ಬರು ವಕೀಲರು ತನಗೆ ಒತ್ತಾಯ ಮಾಡಿ ಮದ್ಯ ಕುಡಿಸಿ, ವೈಯಕ್ತಿಕ ವಿಚಾರಗಳ ಬಗ್ಗೆ ಕೇಳುತ್ತಿದ್ದರು. ಪ್ರಕರಣಗಳ ಬಗ್ಗೆ ಮಾತನಾಡುವ ನೆಪದಲ್ಲಿ ಇಬ್ಬರು ವಕೀಲರು ತಮ್ಮ ಮೈ-ಕೈ ಮುಟ್ಟಿತಬ್ಬಿಕೊಂಡು ಅಸಭ್ಯವಾಗಿ ವರ್ತಿಸುತ್ತಿದ್ದರು. ಅಲ್ಲದೆ, ಆಗಾಗ್ಗೆ ಮೊಬೈಲ್‌ಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕುತ್ತಿದ್ದರು ಎಂದು ಆರೋಪಿಸಿ ಯುವತಿ ನ.20ರಂದು ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಗೆ ದೂರು ನೀಡಿದ್ದರು.

ಪುಷ್ಪಾ ಅವರ ತಂದೆ ತುಳಸಿ ಲಾಲ್‌ ಅವರು ಅಂಡಮಾನ್‌ ನಿಕೋಬಾರ್‌ನಲ್ಲಿ ಹಿರಿಯ ವಕೀಲರಾಗಿದ್ದು, ಅನ್ಯಾಯದ ಬಗ್ಗೆ ತಂದೆ ಗಮನಕ್ಕೆ ತಂದಿದ್ದರು. ಇತ್ತ ಸರ್ಕಾರಿ ಅಭಿಯೋಜಕರೊಬ್ಬರು ಪ್ರಕರಣವನ್ನು ಹಿಂಪಡೆಯುವಂತೆ ತುಳಸಿಲಾಲ್‌ರನ್ನು ಫೋನ್‌ ಮೂಲಕ ಸಂಪರ್ಕಿಸಿ ಒತ್ತಡ ಹಾಕಿದ್ದರು. ಪುತ್ರಿಗೆ ಪ್ರಕರಣ ಹಿಂಪಡೆಯುವಂತೆ ಹೇಳಿದ್ದರು. ತಂದೆ ಮಾತು ಕೇಳದ ಯುವತಿ ವಕೀಲರ ವಿರುದ್ಧ ಹೋರಾಟ ಮಾಡುವುದಾಗಿ ಹೇಳಿದ್ದಳು. ತಂದೆಯಿಂದಲೇ ದೂರು ಹಿಂಪಡೆಯುವಂತೆ ಒತ್ತಡ ಬಂದಿದ್ದ ಕಾರಣ ಯುವತಿ ನೊಂದಿದ್ದಳು. ಇತ್ತ ನ.20ರಂದು ತುಳಸಿಲಾಲ್‌ ಕೊಲ್ಕತ್ತಾದಲ್ಲಿ ಎಂಜಿನಿಯರ್‌ ಆಗಿರುವ ಪುತ್ರನ ಜತೆ ಬೆಂಗಳೂರಿಗೆ ಬಂದಿದ್ದರು. ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬಗ್ಗೆ ಚರ್ಚೆ ನಡೆಸಲು ಶನಿವಾರ ಬೆಳಗ್ಗೆ 11ಕ್ಕೆ ಈಶಾನ್ಯ ವಿಭಾಗದ ಡಿಸಿಪಿ ಅವರನ್ನು ಭೇಟಿಯಾಗಲು ಕಾಲಾವಕಾಶ ಕೇಳಿದ್ದರು.

ಆತ್ಮಹತ್ಯೆ: ಇನ್ನು ಯುವತಿ ಉಳಿದುಕೊಂಡಿದ್ದ ಪಿ.ಜಿ.ಯ ಕೊಠಡಿ ಶುಚಿಗೊಳಿಸಲು ಮಹಿಳಾ ಸಿಬ್ಬಂದಿ ಶನಿವಾರ ಬೆಳಗ್ಗೆ 11.15ರ ಸುಮಾರಿಗೆ ಪುಷ್ಪಾ ಕೊಠಡಿ ಬಳಿ ತೆರಳಿದಾಗ ಪುಷ್ಪಾ ಬಾಗಿಲು ತೆರೆಯಲಿಲ್ಲ. ಕಿಟಕಿಯಿಂದ ನೋಡಿದಾಗ ಪುಷ್ಪಾ ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡು ಬಂದಿತ್ತು. ಪಿ.ಜಿ. ಮಾಲಿಕ ಪುಷ್ಪಾರನ್ನು ಕೆ.ಸಿ.ಜನರಲ್‌ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಯುವತಿ ಮೃತಪಟ್ಟಿದ್ದಳು.

ಪುಷ್ಪಾಳ ಕೈಯಲ್ಲಿ ಸಣ್ಣ ತರಚಿದ ಗಾಯ ಬಿಟ್ಟರೆ, ದೇಹದಲ್ಲಿ ಬೇರೆ ಗಾಯಗಳು ಕಂಡು ಬಂದಿಲ್ಲ. ಮೇಲ್ನೋಟಕ್ಕೆ ಆತ್ಮಹತ್ಯೆ ಎಂಬುದು ತಿಳಿದು ಬಂದಿದೆ. ವೈಯಾಲಿಕಾವಲ್‌ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ಡಿಸಿಪಿಗೆ ಸರ್ಕಾರಿ ಅಭಿಯೋಜ ಧಮ್ಕಿ?

ಪುಷ್ಪಾ ಅವರು ದೂರು ದಾಖಲಿಸಿದ ನಂತರ ಡಿಸಿಪಿ ರಾಹುಲ್‌ ಅವರ ಮೇಲೆ ಎಫ್‌ಐಆರ್‌ ದಾಖಲಿಸದಂತೆ ಭಾರಿ ಒತ್ತಡ ಇತ್ತು. ಆದರೂ ದೂರು ಬಂದ ತಕ್ಷಣ ಎಫ್‌ಐಆರ್‌ ದಾಖಲಿಸುವಂತೆ ಠಾಣಾಕಾರಿಗಳಿಗೆ ಸೂಚಿಸಿದ್ದ ಕಾರಣಕ್ಕೇ ಡಿಸಿಪಿ ಅವರಿಗೂ ಸರಕಾರಿ ಅಭಿಯೋಜಕರೊಬ್ಬರು ಬೆದರಿಸಿದ್ದರು ಎನ್ನುವ ಆರೋಪವೂ ಕೇಳಿ ಬಂದಿದೆ.

ಇನ್ನು ಪುಷ್ಪಾ ಅವರ ದೂರಿನ ಮೇಲೆ ಎಫ್‌ಐಆರ್‌ ದಾಖಲಾಗುತ್ತಿದ್ದಂತೆ ಡಿಸಿಪಿ ಅವರಿಗೆ ಬೆದರಿಕೆ ಹಾಕಿದ್ದ ಸರ್ಕಾರಿ ಅಭಿಯೋಜನರೊಬ್ಬರು ಸಂತ್ರಸ್ತೆಯ ತಂದೆಗೂ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದ್ದರು. ಶನಿವಾರ ಸಂಜೆ ಮಗಳನ್ನು ಒಪ್ಪಿಸಿ ದೂರು ವಾಪಾಸ್‌ ಪಡೆಯಲು ನ್ಯಾಯಾಲಯಕ್ಕೆ ಕರೆದುಕೊಂಡು ಬರುವುದಾಗಿ ತಂದೆ ಹೇಳಿದ್ದರು. ಆದರೆ ಅನ್ಯಾಯವಾಗಿದ್ದ ಕಾರಣ ಪ್ರಕರಣ ಹಿಂಪಡೆಯಲು ಮನಸ್ಸಿಲ್ಲದ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್‌ ಇಲಾಖೆ ವಿಶ್ವಾಸರ್ಹ ಮೂಲಗಳು ತಿಳಿಸಿವೆ.

click me!