ಬಿಜೆಪಿಯಿಂದ ಸರ್ಕಾರದ ಬಗ್ಗೆ ವಿಚಾರ ಬಹಿರಂಗ

By Web DeskFirst Published Nov 25, 2018, 12:10 PM IST
Highlights

ಸರ್ಕಾರ ರಚನೆಯಾದ ಮೇಲೆ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸುವಂತೆ ಹಲವು ಬಾರಿ ಒತ್ತಾಯ ಮಾಡಿದರೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿಯೇ ಸರ್ಕಾರದ ಸಾಧನೆಯ ಮಾಹಿತಿಯನ್ನು ಕಲೆಹಾಕಿ ಬಹಿರಂಗ ಪಡಿಸಿದೆ.

ಬೆಂಗಳೂರು :  ಮೈತ್ರಿ ಸರ್ಕಾರ ರಚನೆಯಾದ ಬಳಿಕ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸುವಂತೆ ಹಲವು ಬಾರಿ ಒತ್ತಾಯ ಮಾಡಿದರೂ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಬಿಜೆಪಿಯೇ ಸರ್ಕಾರದ ಸಾಧನೆಯ ಮಾಹಿತಿಯನ್ನು ಕಲೆಹಾಕಿ ಬಹಿರಂಗ ಪಡಿಸಿದೆ.

ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರವು ಕಳೆದ ಆರು ತಿಂಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಿಲ್ಲ. ಎಲ್ಲಾ ಇಲಾಖೆಗಳು ಸಹ ಕಳಪೆ ಮಟ್ಟದ ಸಾಧನೆಯನ್ನು ತೋರಿದ್ದು, ಒಟ್ಟಾರೆ ಕೇವಲ ಶೇ.39ರಷ್ಟುಮಾತ್ರ ಪ್ರಗತಿಯಾಗಿದೆ. ಅಲ್ಲದೇ, ಕೇಂದ್ರ ಸರ್ಕಾರದ ಅನುದಾನವನ್ನು ಸಹ ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿ​ದ್ದಾ​ರೆ.

ಮಲ್ಲೇಶ್ವರದಲ್ಲಿನ ಬಿಜೆಪಿ ಕಚೇರಿಯಲ್ಲಿ ಶನಿವಾರ ಸರ್ಕಾರದ ಸಾಧನೆಯ ವಿವರವನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡಿ ಮಾತನಾಡಿದ ಅವರು, ತಾವು ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲಿ ದೋಷವಿದ್ದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸ್ಪಷ್ಟನೆ ನೀಡಬೇಕು. ಇಲಾಖೆಗಳಿಂದಲೇ ಪಡೆದುಕೊಂಡ ಮಾಹಿತಿ ಇದಾಗಿದ್ದು, ಈಗಲಾದರೂ ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಸತ್ಯವನ್ನು ಹೇಳಬೇಕು ಎಂದು ಆಗ್ರಹಿಸಿದರು.

ರಾಜ್ಯದ ಒಟ್ಟಾರೆ ಬಜೆಟ್‌ ಅನುದಾನವು 1,87,996 ಕೋಟಿ ರು. ಆಗಿದ್ದು, ಈ ಪೈಕಿ ಶೇ. 39ರಷ್ಟುಮಾತ್ರ ಪ್ರಗತಿಯಾಗಿದೆ. ಏ.1ರಿಂದ ಅಕ್ಟೋಬರ್‌ ತಿಂಗಳವರೆಗೆ 73,440 ಕೋಟಿ ರು. ಅನುದಾನ ಬಳಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.42.40ರಷ್ಟುಪ್ರಗತಿ ಸಾಧನೆ ಮಾಡಲಾಗಿತ್ತು. ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಸತ್ಯಾಂಶವನ್ನು ಬಚ್ಚಿಟ್ಟು ಜನರಿಗೆ ಸುಳ್ಳು ಮಾಹಿತಿ ನೀಡಲಾಗುತ್ತಿದೆ. ಸಹಕಾರ ಸಂಘಗಳಿಗೆ 547 ಕೋಟಿ ರು. ಬಡ್ಡಿ ಕಟ್ಟಬೇಕಾಗಿದೆ. 400 ಕೋಟಿ ರು. ಹಾಲು ಉತ್ಪಾದಕರಿಗೆ ಪಾವತಿಯಾಗಿಲ್ಲ. ಗಂಗಾಕಲ್ಯಾಣ ಯೋಜನೆಯಡಿ ಒಂದೇ ಒಂದು ಬೋರ್‌ವೇಲ್‌ ತೆಗೆಸಿಲ್ಲ. ಇನ್ನು ಬರಗಾಲ ಪೀಡಿತ ತಾಲೂಕುಗಳಿಗೆ 50 ಲಕ್ಷ ರು. ಬಿಡುಗಡೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆಯಾದರೂ ಹಣ ಮಾತ್ರ ಖರ್ಚು ಮಾಡಿಲ್ಲ ಎಂದು ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಸಣ್ಣ ನೀರಾವರಿ ಇಲಾಖೆಯು ಶೇ.29ರಷ್ಟು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶೇ.26ರಷ್ಟು, ಸಮಾಜ ಕಲ್ಯಾಣ ಇಲಾಖೆ ಶೇ.24ರಷ್ಟು, ಲೋಕೋಪಯೋಗಿ ಇಲಾಖೆ ಶೇ.24ರಷ್ಟು, ಪರಿಶಿಷ್ಟವರ್ಗಗಳ ಇಲಾಖೆ ಶೇ.17ರಷ್ಟುಮತ್ತು ಕಂದಾಯ ಇಲಾಖೆ ಶೇ.15ರಷ್ಟು ಪ್ರಗತಿಯಾಗಿರುವುದು ಅಂಕಿ-ಅಂಶಗಳಿಗೆ ತಿಳಿದು ಬಂದಿದೆ ಇದೇ ರೀತಿ ಎಲ್ಲಾ ಇಲಾಖೆಗಳಲ್ಲಿಯೂ ಕಳಪೆ ಸಾಧನೆ ಮಾಡಲಾಗಿದೆ. ಮೀನುಗಾರಿಕೆ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಬಳಕೆ ಪತ್ರಗಳನ್ನು ಕಳುಹಿಸಿಲ್ಲ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಗತಿಯಲ್ಲಿ ಶೂನ್ಯ ಇದೆ. ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) 3ನೇ ಹಂತದ ಪ್ರಗತಿ ಕೇವಲ ಶೇ.18ರಷ್ಟುಆಗಿದೆ. 3253 ಕೊಟಿ ರು. ಅನುದಾನದಲ್ಲಿ 606 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಗೋವಿಂದ ಕಾರಜೋಳ, ಮಾಜಿ ವಿಧಾನಪರಿಷತ್‌ ಸದಸ್ಯ ಡಿ.ಎಸ್‌.ವೀರಯ್ಯ, ವಿಧಾನಪರಿಷತ್‌ ಸದಸ್ಯ ಲೇಹರ್‌ ಸಿಂಗ್‌ ಇತರರು ಉಪಸ್ಥಿತರಿದ್ದರು.

click me!