
ವಾಷಿಂಗ್ಟನ್: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನ ಮಟ್ಟಹಾಕಲೆಂದು ತನಿಖೆ ನಡೆಸಬೇಕಿದ್ದವಳು ಅದೇ ಉಗ್ರನನ್ನು ವಿವಾಹವಾದರೆ ಹೇಗಿದ್ದೀತು? ಯಾವುದೋ ಹಾಲಿವುಡ್ ಥ್ರಿಲ್ಲರ್ ಸಿನಿಮಾದ ಕಥೆಯ ಎಳೆಯಲ್ಲ. ಅಮೆರಿಕದ ಎಫ್'ಬಿಐ ಅಧಿಕಾರಿಯೊಬ್ಬಳ ಜೀವನದ ಕಥೆ ಇದು. 38 ವರ್ಷದ ಡೇನಿಯೆಲಾ ಗ್ರೀನ್ ಇದೀಗ ಬಂಧಮುಕ್ತಳಾಗಿ ಪಶ್ಚಾತಾಪದಿಂದ ಹಿಂದಿನ ಘಟನೆಗಳನ್ನು ಮೆಲುಕು ಹಾಕುತ್ತಿದ್ದಾಳೆ.
ಮೂರು ವರ್ಷಗಳ ಹಿಂದಿನವರೆಗೂ ಡೇನಿಯೆಲಾ ಗ್ರೀನ್ ಅಮೆರಿಕದ ತನಿಖಾ ಸಂಸ್ಥೆ ಎಫ್'ಬಿಐನಲ್ಲಿ ಟ್ರಾನ್ಸ್'ಲೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಅದೇ ವೇಳೆ ಜರ್ಮನಿಯ ಮ್ಯುಸಿಶಿಯನ್ ಡೆನಿಸ್ ಕಸ್ಪರ್ಟ್ ಐಸಿಸ್ ಸಂಘಟನೆ ಸೇರಿಕೊಂಡು ಪ್ರಮುಖ ಆಯಕಟ್ಟಿನ ಸ್ಥಾನದಲ್ಲಿದ್ದ. ಈಗ ಆನ್'ಲೈನ್'ನಲ್ಲಿ ಜಿಹಾದಿಗಳ ನೇಮಕಾತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ. ಡೆನಿಸ್ ಕಸ್ಪರ್ಟ್ ಬಗ್ಗೆ ತನಿಖೆ ನಡೆಸಲು ಎಫ್'ಬಿಐ ಡೇನಿಯೆಲಾ ಗ್ರೀನ್'ಗೆ ಜವಾಬ್ದಾರಿ ವಹಿಸಿತು.
ಡೇನಿಯೆಲಾ ಗ್ರೀನ್ 2014ರಲ್ಲಿ ತಾನು ಅಪ್ಪ-ಅಮ್ಮನನ್ನು ನೋಡಲು ಕೆಲ ವಾರಗಳ ಕಾಲ ಜರ್ಮನಿಗೆ ಹೋಗುತ್ತಿರುವುದಾಗಿ ಹೇಳಿ ರಜೆ ಹಾಕುತ್ತಾಳೆ. ಆದರೆ, ಈ ಮಹಿಳೆ ಜರ್ಮನಿಗೆ ಹೋಗದೇ ನೇರ ಟರ್ಕಿಗೆ ಹೋಗಿ ಅಲ್ಲಿಂದ ಗಡಿ ಮೂಲಕ ಸಿರಿಯಾಗೆ ತೆರಳಿ ಡೆನಿಸ್ ಕಸ್ಪರ್ಟ್'ನನ್ನು ಭೇಟಿಯಾಗುತ್ತಾಳೆ. ಅಮೆರಿಕನ್ ಸೈನಿಕನನ್ನು ಈ ಮೊದಲೇ ವಿವಾಹವಾಗಿದ್ದ ಡೇನಿಯೆಲಾ, ಈಗ ಉಗ್ರಗಾಮಿಯನ್ನೂ ವರಿಸುತ್ತಾಳೆ.
ಇಷ್ಟೇ ಆಗಿದ್ದರೆ, ಡೇನಿಯೆಲಾ ಗ್ರೀನ್ ಇಷ್ಟೊತ್ತಿಗಾಗಲೇ ಮಹಿಳಾ ಉಗ್ರಳಾಗಿಬಿಡುತ್ತಿದ್ದಳು. ಆದರೆ, ಡೆನಿಸ್ ಕಸ್ಪರ್ಟ್ ಜೊತೆ ಮದುವೆಯಾದ ಕೆಲವೇ ದಿನಗಳಲ್ಲಿ ಗ್ರೀನ್'ಗೆ ಭ್ರಮನಿರಸನವಾಗುತ್ತದೆ. ತಾನು ದೊಡ್ಡ ಪ್ರಮಾದ ಮಾಡಿಬಿಟ್ಟೆ ಎಂಬ ಅರಿವುಂಟಾಗುತ್ತದೆ. ನಂತರ ಆಕೆ ಹಾಗೂ ಹೀಗೂ ಸಿರಿಯಾದಿಂದ ತಪ್ಪಿಸಿಕೊಂಡು ಅಮೆರಿಕಕ್ಕೆ ಬರುತ್ತಾಳೆ.
ಸುಳ್ಳು ಹೇಳಿ ಭದ್ರತೆಗೆ ಧಕ್ಕೆ ತಂದ ಆರೋಪದ ಮೇಲೆ ಎಫ್'ಬಿಐ ಈಕೆಯನ್ನು ಬಂಧಿಸುತ್ತದೆ. 2 ವರ್ಷಗಳ ಕಾಲ ಸೆರೆಮನೆವಾಸದ ಶಿಕ್ಷೆ ಪಡೆಯುತ್ತಾಳೆ. ಇತ್ತೀಚೆಗಷ್ಟೇ ಆಕೆ ಜೈಲಿನಿಂದ ಬಿಡುಗಡೆಯಾಗುತ್ತಾಳೆ.
(ಮಾಹಿತಿ: ಸಿಎನ್'ಎನ್)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.