
ಮುಂಬೈ: 1 ಲೀಟರ್ ಮೊಸರಿಗೆ 40ರಿಂದ 45 ರು. ಆಗಬಹುದು. ಲೀಟರ್ ಖಾದ್ಯ ತೈಲಕ್ಕೆ ಹೆಚ್ಚೆಂದರೆ 90 ರು. ಆಗಬಹುದು. ಆದರೆ ಮಧ್ಯ ರೈಲ್ವೆಯು ತನ್ನ ಉಗ್ರಾಣಗಳಿಗೆ 100 ಗ್ರಾಂ ಮೊಸರಿಗೆ 972 ರು. ಹಾಗೂ ಲೀಟರ್ ರೀಫೈನ್ಡ್ ತೈಲಕ್ಕೆ 1241 ರು. ಪಾವತಿಸಿರುವ ವಿಚಾರ ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಬೆಳಕಿಗೆ ಬಂದಿದ್ದು, ನಾಗರಿಕರನ್ನು ಚಕಿತಗೊಳಿಸಿದೆ.
ಅಮುಲ್ ಕಂಪನಿಯಿಂದ ಕೆ.ಜಿ.ಗೆ 9720 ರು. ನಂತೆ ಮೊಸರು ಖರೀದಿಸಿರುವುದಾಗಿ ಮಧ್ಯ ರೈಲ್ವೆಯು ಆರ್‌ಟಿಐನಡಿ ಉತ್ತರ ನೀಡಿದೆ. ಅಂದರೆ 100 ಗ್ರಾಂಗೆ 972 ರುಪಾಯಿ. ಆದರೆ ಅಮುಲ್ ಕಂಪನಿಯ ವಿಶೇಷ ಮೊಸರಿಗೆ 100 ಗ್ರಾಂಗೆ ಕೇವಲ 25 ರು. ದರವಿದೆ!
58 ಲೀಟರ್ ರೀಫೈನ್ಡ್ ಎಣ್ಣೆಯನ್ನು 72,034 ರು.ಗೆ ಖರೀದಿಸಿರುವುದಾಗಿ ರೈಲ್ವೆ ಲೆಕ್ಕ ಕೊಟ್ಟಿದೆ. ಇದರರ್ಥ ಒಂದು ಲೀಟರ್ ಖಾದ್ಯ ತೈಲಕ್ಕೆ 1241 ರು. ಪಾವತಿಸಿದಂತೆ ಆಗಿದೆ. ಮಾರುಕಟ್ಟೆಯಲ್ಲಿ ಕೆ.ಜಿ.ಗೆ 15 ರು.ನಂತೆ ಲಭ್ಯವಿರುವ ಉಪ್ಪನ್ನು ಪ್ರತಿ ಪ್ಯಾಕೆಟ್‌ಗೆ 49 ರು.ನಂತೆ ಖರೀದಿಸಲಾಗಿದೆ.
ತಂಪು ಪಾನೀಯಗಳಿಗೆ ಪ್ರತಿ ಬಾಟಲ್‌ಗೆ 49 ರು. ಭರಿಸಲಾಗಿದೆ. ರೈಲ್ವೆಯ ಕ್ಯಾಟರಿಂಗ್ ವಿಭಾಗ ಅತ್ಯಂತ ನಷ್ಟದಲ್ಲಿದೆ ಎಂಬುದನ್ನು ತಿಳಿದ ಅಜಯ್ ಬೋಸ್ ಎಂಬುವರು ಆರ್‌ಟಿಐನಡಿ ಅರ್ಜಿ ಸಲ್ಲಿಸಿದಾಗ ಈ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಆರಂಭದಲ್ಲಿ ಈ ಕುರಿತು ಮಾಹಿತಿ ನೀಡಲು ರೈಲ್ವೆ ನಿರಾಕರಿಸಿತ್ತು. ಬೋಸ್ ಅವರು ಮೇಲ್ಮನವಿ ಸಲ್ಲಿಸಿದ್ದರು. ಆದರೂ ಉತ್ತರ ಬರಲಿಲ್ಲ. ಎರಡನೇ ಬಾರಿ ಸಲ್ಲಿಸಿದಾಗ ಉತ್ತರ ಸಿಕ್ಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.