
ಬೆಂಗಳೂರು(ಮಾ.24): ಮಹಿಳೆಯೊಬ್ಬರು ತಾವೇ ಅಪಘಾತ ಎಸಗಿ ಬಳಿಕ ವ್ಯಕ್ತಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಡಿ ಕುಮಾರಸ್ವಾಮಿ ಲೇಔಟ್ ಠಾಣೆಗೆ ದೂರು ನೀಡಿ, ಬಳಿಕ ದೂರು ಹಿಂಪಡೆದಿರುವ ಘಟನೆ ನಡೆದಿದೆ.
ಮಾಚ್‌ರ್ 9ರಂದು ಘಟನೆ ನಡೆದಿದ್ದು, ದೂರು ನೀಡಿದ ಮರು ದಿನವೇ ಮಹಿಳೆ ಪ್ರಕರಣ ಹಿಂಪಡೆದಿದ್ದಾರೆ. ನನ್ನ ಮೇಲೆ ಯಾರು ದೌರ್ಜನ್ಯ ಎಸಗಿಲ್ಲ, ಪ್ರಕರಣ ಮುಂದುವರಿಸಲು ಇಷ್ಟವಿಲ್ಲ. ಉದ್ವೇಗದಲ್ಲಿ ದೂರು ನೀಡಿದ್ದೇನೆ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಅಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ವೇಗವಾಗಿ ಬಂದು ಮುಂದೆ ಹೋಗುತ್ತಿದ್ದ ಕಾರೊಂದಕ್ಕೆ ಡಿಕ್ಕಿ ಹೊಡೆದಿದ್ದಾರೆ. ಕಾರಿನ ಮಾಲೀಕ ಕೆಳಗಿಳಿದು ಮಹಿಳೆಯನ್ನು ಪ್ರಶ್ನಿಸಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಮಹಿಳೆಯ ತಪ್ಪನ್ನು ನೋಡಿದ್ದ ಕೆಲ ಸಾರ್ವಜನಿಕರು ಮಹಿಳೆಯ ಕಾರು ಜಖಂಗೊಳಿಸಿದ್ದರು. ಈ ಸಂಬಂಧ ಮಹಿಳೆಯು ಕಾರಿನ ಮಾಲೀಕನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಮಹಿಳೆಯ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕಾರು ಚಾಲಕ ಹಾಗೂ ದೂರು ನೀಡಿದ್ದ ಮಹಿಳೆಯನ್ನು ವಿಚಾರಣೆಗೊಳಪಡಿಸಿದ್ದರು. ಒತ್ತಡದಿಂದ ದೂರು ನೀಡಿದ್ದೇನೆ. ನನ್ನ ಮೇಲೆ ದೌರ್ಜನ್ಯ ನಡೆದಿಲ್ಲ. ದೂರು ವಾಪಸ್ ಪಡೆಯುತ್ತೇನೆ ಎಂದು ಮುಚ್ಚಳಿಕೆ ಬರೆದುಕೊಟ್ಟರು ಎಂದು ಪೊಲೀಸ್ ಅಧಿಕಾರಿಗಳು ‘ಕನ್ನಡಪ್ರಭ'ಕ್ಕೆ ಹೇಳಿದ್ದಾರೆ.
ಎಂ.ಜಿ. ರಸ್ತೆಯ ಮಾಲ್‌ವೊಂದರ ಬಳಿ ಕ್ಯಾಬ್‌ಗೆ ಕಾಯುತ್ತಿದ್ದ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬ್ಯಾಗ್ ಕಸಿದು ಅನುಚಿತ ವರ್ತನೆ ತೋರಿದ್ದಾರೆ ಎಂದು ಯುವತಿಯೊಬ್ಬರು ತಮ್ಮ ‘ಫೇಸ್‌ಬುಕ್' ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಈ ಸಂಬಂಧ ಪೊಲೀಸರು ಯುವತಿಯನ್ನು ಸಂಪರ್ಕಿಸಿದ್ದು, ಘಟನೆ ನಡೆದಿಲ್ಲ. ಫೇಸ್‌ಬುಕ್‌ನಲ್ಲಿ ಆ ರೀತಿಯಾಗಿ ನಾನು ಹಾಕಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ರಾತ್ರಿ ಇಬ್ಬರು ಸ್ನೇಹಿತೆಯರೊಂದಿಗೆ ರೆಸ್ಟೋರೆಂಟ್‌ಗೆ ಪಾರ್ಟಿಗೆ ತೆರಳಿದ್ದೆ. ಪಾರ್ಟಿ ಮುಗಿಸಿ ಮನೆಗೆ ತೆರಳಲು ರಾತ್ರಿ 12 ಗಂಟೆ ಸುಮಾರಿಗೆ ಕ್ಯಾಬ್‌ಗಾಗಿ ಎಂ.ಜಿ.ರಸ್ತೆಯ ಸಾಯಿ ಟೆರೇಸ್ ಹೋಟೆಲ್ ಬಳಿ ಕಾಯುತ್ತ ನಿಂತಿದ್ದೆವು. ಈ ವೇಳೆ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ನನ್ನ ಬ್ಯಾಗ್ ಕಸಿಯಲು ಯತ್ನಿಸಿದರು. ಪ್ರತಿರೋಧ ಒಡ್ಡಿದಾಗ ನನ್ನನ್ನು ಎಳೆದಾಡಿ ಕೆಳಗೆ ಬೀಳಿಸಿ ಬ್ಯಾಗ್ ಕಸಿದು ಪರಾರಿಯಾದರು. ಬ್ಯಾಗ್‌ನಲ್ಲಿ ಐಫೋನ್ 7, ಎಟಿಎಂ ಕಾರ್ಡ್ ಇನ್ನಿತರ ವಸ್ತುಗಳಿದ್ದವು. ಕೂಡಲೇ ಸ್ಥಳೀಯ ಹಲಸೂರು ಠಾಣೆಗೆ ತೆರಳಿ ದೂರು ದಾಖಲಿಸಿದ್ದೇವೆ. ಬೆಂಗಳೂರು ಎಂದರೆ ತುಂಬ ರಕ್ಷಣೆಯುಳ್ಳ ಸ್ಥಳ ಎಂಬ ಭಾವನೆ ಇತ್ತು. ಆದರೆ ಈ ರೀತಿ ಆಗಿದ್ದು, ನಮಗೆ ಭಯ ತರಿಸಿದೆ. ಪೊಲೀಸರು ಶೀಘ್ರ ಆರೋಪಿಗಳನ್ನು ಬಂಧಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಯುವತಿ ಫೇಸ್‌ಬುಕ್ ಖಾತೆಯಲ್ಲಿ ಹಾಕಿಕೊಂಡಿದ್ದರು.
ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪೊಲೀಸರು ಯುವತಿಯನ್ನು ಸಂಪರ್ಕಿಸಿದ್ದಾರೆ. ಆಗ ಅಂತಹ ಘಟನೆ ನಡೆದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಅಲ್ಲದೇ ಅಂತಹ ಘಟನೆ ನಡೆದೂ ಇಲ್ಲ ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ'ಕ್ಕೆ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.