
ಹೈದರಾಬಾದ್ (ಮಾ.14): ಕಳೆದ ತಿಂಗಳು ದೆಹಲಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಟಿಎಮ್ ಯಂತ್ರದಲ್ಲಿ ಹೊಸ ರೂ,2000 ನೋಟುಗಳನ್ನು ಹೋಲುವ ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ದ ನೊಟುಗಳು ಹೊರಬಂದಿದ್ದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.
ಹೈದರಾಬಾದಿನಲ್ಲಿ ಇಂದು ವ್ಯಕ್ತಿಯೊಬ್ಬ ಅದೇ ‘ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ’ದ ರೂ.9.9 ಲಕ್ಷ ಡಿಪಾಸಿಟ್ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ.
ಸಣ್ಣ ಸ್ಟೇಷನರಿ ಅಂಗಡಿ ಇಟ್ಟುಕೊಂಡಿರುವ ಶೇಖ್ ಯೂಸುಫ್ ಎಂಬಾತ ಏಎಸ್ ರಾವ್ ನಗರದಲ್ಲಿರುವ ಅಲಹಾಬಾದ್ ಬ್ಯಾಂಕ್’ ಬ್ರಾಂಚ್’ನಲ್ಲಿ ಹೊಸ ರೂ.2000 ಹಾಗೂ ರೂ.500 ಮಾದರಿಯ ನೋಟುಗಳಿಂದ ಕೂಡಿದ ರೂ.9.9 ಲಕ್ಷ ರೂ.ವನ್ನು ಡಿಪಾಸಿಟ್ ಮಾಡಲು ಕ್ಯಾಶಿಯರ್;ಗೆ ಕೊಟ್ಟಿದ್ದಾನೆ. ನಕಲಿ ನೋಟುಗಳನ್ನು ಗಮನಿಸಿದ ಸಿಬ್ಬಂದಿ, ಕೂಡಲೇ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಧಾವಿಸಿದ ಕುಶಾಯಿಗುಡ ಪೊಲೀಸರು ಶೇಖ್ ಯೂಸುಫ್’ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಬಂಧಿತನು ನೀಡಿದ ಹಣದಲ್ಲಿ ರೂ.2000ದ 400 ಹಾಗೂ ರೂ.500ರ 380 ನಕಲಿ ನೋಟುಗಳಿದ್ದುವು ಎನ್ನಲಾಗಿದೆ.
ಆ ನೋಟುಗಳು ತನಗಾರೋ ಗ್ರಾಹಕರು ನೀಡಿದ್ದಾಗಿ ಶೇಖ್ ಪೊಲೀಸರಿಗೆ ಹೇಳಿದ್ದಾನೆ. ಪೊಲೀಸರು ಈ ನಕಲಿ ನೋಟುಗಳ ಹಿಂದೆ ದೊಡ್ಡ ಜಾಲವೇ ಇರಬಹುದೆಂದು ಶಂಕಿಸಿದ್ದಾರೆ. ಶೇಕ್ ಕಳೆದ ವರ್ಷವೇ ಈ ಬ್ರಾಂಚಿನಲ್ಲಿ ಉಳಿತಾಯ ಖಾತೆಯನ್ನು ತೆರೆದಿದ್ದಾನೆ. ಸಣ್ಣ ಪುಟ್ಟ ಡಿಪಾಸಿಟ್;ಗಳನ್ನು ಮಾಡುತ್ತಿದ್ದ ಈತ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತವನ್ನು ಡಿಪಾಸಿಟ್ ಮಾಡಲು ಯತ್ನಿಸಿದ್ದಾನೆ. ಇತ್ತೀಚೆಗೆ ಈತ ತನ್ನ ಉದ್ಯಮ-ಸಾಲಕ್ಕಾಗಿ ಬ್ಯಾಂಕನ್ನು ಸಂಪರ್ಕಿಸಿದ್ದನು, ಆದರೆ ಅದು ತಿರಸ್ಕೃತವಾಗಿತ್ತು ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
(ಚಿತ್ರ ಕೃಪೆ: ಹಿಂದೂಸ್ತಾನ್ ಟೈಮ್ಸ್)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.