ಫ್ಯಾಕ್ಟ್ ಚೆಕ್: ಏಕಕಾಲದಲ್ಲಿ 17 ಮಕ್ಕಳಿಗೆ ಜನ್ಮ ನೀಡಿದ್ರಾ ಅಮೆರಿಕಾ ಮಹಿಳೆ?

By Web DeskFirst Published Jun 22, 2019, 8:45 AM IST
Highlights

ಅಮೆರಿಕದ ಮಹಿಳೆಯೊಬ್ಬರು ಏಕಕಾಲದಲ್ಲಿ 17 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
 

ಅಮೆರಿಕದ ಮಹಿಳೆಯೊಬ್ಬರು ಏಕಕಾಲದಲ್ಲಿ 17 ಮಕ್ಕಳಿಗೆ ಜನ್ಮ ನೀಡಿದ್ದಾರೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವೈರಲ್‌ ಪೋಸ್ಟ್‌ನೊಟ್ಟಿಗೆ 3 ಫೋಟೋಗಳಿವೆ. ಒಂದು; ಅಸಾಮಾನ್ಯವಾಗಿ ಊದಿಕೊಂಡಿರುವ ಹೊಟ್ಟೆ, ಮತ್ತೊಂದು ಮಕ್ಕಳ ಫೋಟೋ, ಮೂರನೆಯದು ವ್ಯಕ್ತಿಯೊಂದಿಗೆ ಮಕ್ಕಳು ಆಟವಾಡುತ್ತಿರುವುದು.

ನಿಜಕ್ಕೂ ಮಹಿಳೆಯೊಬ್ಬರು ಏಕಕಾಲಕ್ಕೆ 17 ಮಕ್ಕಳಿಗೆ ಜನ್ಮ ನೀಡಿದರೇ ಎಂದು ಇಂಡಿಯಾ ಟುಡೇ ಆ್ಯಂಟಿ ಫೇಕ್‌ನ್ಯೂಸ್‌ ವಾರ್‌ ರೂಮ್‌ ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ‘ವಲ್ಡ್‌ರ್‍ ನ್ಯೂಸ್‌ ಡೈಲಿ ರಿಪೋರ್ಟ್‌’ ಎಂಬ ವಿಡಂಬನಾತ್ಮಕ ವೆಬ್‌ಸೈಟ್‌ನಲ್ಲಿ ಇದನ್ನು ಮೊದಲಿಗೆ ವರದಿ ಮಾಡಲಾಗಿದೆ. ಅನಂತರ ‘ವುಮನ್‌ ಡೈಲಿ ಮ್ಯಾಗಜೀನ್‌’ ನಲ್ಲೂ ಇದನ್ನೇ ವರದಿ ಮಾಡಿದ್ದು ಕಂಡುಬಂದಿದೆ. ಆದರೆ ಇಲ್ಲಿ ಈ ಲೇಖನವು ಕಲ್ಪಾನಾಧಾರಿತವಾದುದು ಎಂದು ಸ್ಪಷ್ಟವಾಗಿ ಉಲ್ಲೇಖ ಮಾಡಲಾಗಿದೆ.

ಇಲ್ಲಿ ಕಾಣುವ ಮಹಿಳೆಯ ಫೋಟೋವು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿರುವಂಥದ್ದು. ಅಲ್ಲದೆ ವ್ಯಕ್ತಿಯೊಟ್ಟಿಗಿರುವ 17 ಮಕ್ಕಳ ಪೋಟೋವು ಕನಿಷ್ಠ 7 ವರ್ಷ ಹಳೆಯದು. ಚಿತ್ರದಲ್ಲಿರುವ ವ್ಯಕ್ತಿ ಅಮೆರಿಕದ ಸ್ತ್ರೀ ರೋಗ ತಜ್ಞ ರಾಬರ್ಟ್‌ ಎಂ ಬಿಟರ್‌. ಇವರ ಫೇಸ್‌ಬುಕ್‌ ಪ್ರೊಫೈಲ್‌ನ ಕವರ್‌ಪೋಟೋ ಇದೇ ಇದೆ. ಅಲ್ಲದೆ ಅಮೆರಿಕ ಇತಿಹಾಸದಲ್ಲಿಯೇ ಯಾವೊಬ್ಬ ಮಹಿಳೆಯೂ ಏಕಕಾಲದಲ್ಲಿ 17 ಮಕ್ಕಳಿಗೆ ಜನ್ಮ ನೀಡಿಲ್ಲ. ಒಬ್ಬರೇ ಒಬ್ಬ ಮಹಿಳೆ 8 ಮಕ್ಕಳಿಗೆ ಜನ್ಮ ನೀಡಿದ್ದಾರಷ್ಟೆ.

- ವೈರಲ್ ಚೆಕ್ 

click me!