
ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬೆಂಗಳೂರಿನಲ್ಲಿ ಮೋದಿ ಹೆಸರಿನ ಮಸೀದಿಯೊಂದನ್ನು ಉದ್ಘಾಟಿಸಲಾಗಿದೆ ಎಂಬ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬೆಂಗಳೂರಿನ ಶಿವಾಜಿನಗರದಲ್ಲಿರುವ ಈ ಮಸೀದಿಯನ್ನು ಮೋದಿ ಪ್ರಧಾನಿಯಾದ ಬಳಿಕ ಉದ್ಘಾಟನೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಮೋದಿ ಮಸೀದಿ ಎಂಬ ನಾಮಫಲಕ ಮತ್ತು ಮೋದಿ ಇಸ್ಲಾಮಿಕ್ ಕಾರ‍್ಯಕ್ರಮವೊಂದರಲ್ಲಿ ಭಾಗವಹಿಸಿದ ಫ್ಲೆಕ್ಸ್ ಅಂಟಿಸಿರುವ ಮಸೀದಿಯ ಒಳಾಂಗಣ ಚಿತ್ರವನ್ನು ಲಗತ್ತಿಸಿರುವ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಆದರೆ ನಿಜಕ್ಕೂ ಮೋದಿ ಪ್ರಧಾನಿಯಾದ ಬಳಿಕ ಬೆಂಗಳೂರಿನಲ್ಲಿ ಮೋದಿ ಹೆಸರಿನ ಮಸೀದಿ ಉದ್ಘಾಟಿಸಲಾಗಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಬೂಮ್‌ಲೈವ್ ಸುದ್ದಿ ಸಂಸ್ಥೆಯು ‘ಮೋದಿ ಮಸೀದಿ ಬೆಂಗಳೂರು’ ಎಂದು ಯುಟ್ಯೂಬ್‌ನಲ್ಲಿ ಹುಡುಕಿದಾಗ ಬೆಂಗಳೂರಿನ ಮೋದಿ ಮಸೀದಿಯ ಪುನರ್‌ನಿರ್ಮಾಣದ ಬಳಿಕ ನಡೆದ ಉದ್ಘಾಟನಾ ಸಮಾರಂಭದ ವಿಡಿಯೋ ಲಭ್ಯವಾಗಿದೆ.
ಆ ವಿಡಿಯೋದಲ್ಲಿ ಮೋದಿ ಮಸೀದಿಯ ಅಧ್ಯಕ್ಷ ಸೈಯದ್ ಅಲ್ತಾಫ್ ಅಹ್ಮೆದ್ ಮಾತನಾಡುವಾಗ, ‘ಮಸೀದಿಯು 170 ವರ್ಷ ಪುರಾತನವಾದುದು. ಹಜರತ್ ಮೋದಿ ಅಬ್ದುಲ್ ಗಫäರ್ ಖಾನ್ ಅವರು ಮಸೀದಿ ನಿರ್ಮಾಣಕ್ಕೆ ಕೊಡುಗೆ ನೀಡಿದ್ದರು. ಇವರಿಗೆ ಮೋದಿ ಎಂಬ ಹೆಸರನ್ನು ಬ್ರಿಟಿಷರು ನೀಡಿದ್ದರು’ ಎಂದಿದ್ದಾರೆ. ಅಲ್ಲಿಗೆ ಮಸೀದಿಗೆ ನರೇಂದ್ರ ಮೋದಿ ಹೆಸರಿಡಲಾಗಿದೆ ಎಂಬುದು ಸುಳ್ಳುಸುದ್ದಿ ಎಂಬುದು ಸ್ಪಷ್ಟ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.