
ಬೆಂಗಳೂರು: ಅಮೆರಿಕಾ ಚುನಾವಣೆಗಳಲ್ಲಿ ’ರಷ್ಯಾ’ ವು ಎಷ್ಟು ಮಹತ್ವಕಾರಿಯೋ, ಹಾಗೆಯೇ ’ಪಾಕಿಸ್ತಾನ’ವು ಭಾರತದ ಚುನಾವಣೆಗಳಿಗೆ ಮುಖ್ಯವಾಗುತ್ತದೆ. ಅಂತಹದ್ದೊಂದು ಪ್ರಯತ್ನ ಇದೀಗ ಕರ್ನಾಟಕದ ಚುನಾವಣೆಯಲ್ಲಿ ನಡೆದಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್ ಖಾನ್, ಕಳೆದ ಏ.13ರಂದು ಒಂದು ದಿವಸದ ಮಟ್ಟಿಗೆ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು, ಕರ್ನಾಟಕ ಚುನಾವಣೆ ಗೆಲ್ಲಲು ಐಎಸ್‌ಐ ಸಹಾಯ ಪಡೆಯುವ ಉದ್ದೇಶವೇ? ಕರಾಚಿಗೆ ಭೇಟಿ ನೀಡಿರುವ ಉದ್ದೇಶವೇನು ಎಂದು, ಸುಮಾರು 1ಲಕ್ಷ ಫಾಲೋವರ್ಸ್’ಗಳಿರುವ ಡಾ. ಗೌರವ್ ಪ್ರಧಾನ್ ಎಂಬವರು ಟ್ವೀಟಿಸಿದ್ದರು.
ಅದನ್ನು ಬಿಜೆಪಿ ನಾಯಕಿ ಶಿಲ್ಪಾ ಗಣೇಶ್ ಸೇರಿದಂತೆ ಹಲವು ಮಂದಿ ರೀಟ್ವೀಟ್ ಮಾಡಿದ್ದಾರೆ.
ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ, ಅದು ಸುಳ್ಳು ಎಂದು ತಿಳಿದ ಕೂಡಲೇ ಆತ ಟ್ವೀಟನ್ನು ಡಿಲೀಟ್ ಮಾಡಿದ್ದಾನೆ. ಬಳಿಕ ವರಸೆ ಬದಲಾಯಿಸಿ ಈ ರಿತಿ ಟ್ವೀಟ್ ಮಾಡಿದ್ದಾನೆ.
ಈ ಕುಕೃತ್ಯಕ್ಕೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಚುನಾವಣೆಯನ್ನು ಪಾಕಿಸ್ತಾನದೊಂದಿಗೆ ನಂಟು ಕಲ್ಪಿಸುವ ಹತಾಶೆ ಕೆಲವರಿಗಿದೆ. ನಾನು ವಿದೇಶ ಪ್ರವಾಸಗಳನ್ನು ಇಷ್ಟಪಡುವುದಿಲ್ಲ. ಕಳೆದ 2 ವರ್ಷಗಳಲ್ಲಿ ಕೇವಲ ೨ ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದೇನೆ. ಒಮ್ಮೆ ರಾಕೇಶ್ ಮೃತಪಟ್ಟಾಗ ಬೆಲ್ಜಿಯಂಗೆ, ಇನ್ನೊಮ್ಮೆ ಅನಿವಾಸಿ ಭಾರತೀರ ಸಂಘದ ಉದ್ಘಾಟನೆಗೆ ದುಬೈಗೆ ಹೋಗಿದ್ದೆ ಎಂದು ನೆನಪಿಸಿಕೊಂಡಿದ್ದಾರೆ.
ಅದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ವಕ್ತಾರ ಬೃಜೇಶ್ ಕಾಳಪ್ಪ, ಇದು ಬಿಜೆಪಿಗರ ಕೊಳಕು ಕುತಂತ್ರವೆಂದು ಹೇಳಿದ್ದಾರೆ. ಸಿಐಡಿ ಈ ಬಗ್ಗೆ ತನಿಖೆ ನಡೆಸಿ ಸುಳ್ಳು ದಾಖಲೆಗಳನ್ನು ಸೃಷ್ಟಿಸುವವರನ್ನು ಕಂಬಿ ಹಿಂದೆ ತಳ್ಳಬೇಕೆಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.