ವಿಶ್ವಾದ್ಯಂತ 5 ಕೋಟಿ ಫೇಸ್ಬುಕ್‌ ಖಾತೆ ಹ್ಯಾಕ್‌!

By Web DeskFirst Published Sep 29, 2018, 8:33 AM IST
Highlights

  ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮತ್ತೆ ಹ್ಯಾಕರ್‌ಗಳ ದಾಳಿಗೆ ತುತ್ತಾಗಿದೆ. ತನ್ನ 5 ಕೋಟಿ ಬಳಕೆದಾರರ ಖಾತೆಗಳನ್ನು ಹ್ಯಾಕರ್‌ಗಳು ಭೇದಿಸಿದ್ದಾರೆ ಎಂದು ಫೇಸ್‌ಬುಕ್‌ ಶುಕ್ರವಾರ ಪ್ರಕಟಿಸಿದೆ. ಆದರೆ ಈ ವಿಷಯ ಗಮನಕ್ಕೆ ಬರುತ್ತಲೇ ದೋಷ ಸರಿಪಡಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಸ್ಯಾನ್‌ಫ್ರಾನ್ಸಿಸ್ಕೋ :  ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಮತ್ತೆ ಹ್ಯಾಕರ್‌ಗಳ ದಾಳಿಗೆ ತುತ್ತಾಗಿದೆ. ತನ್ನ 5 ಕೋಟಿ ಬಳಕೆದಾರರ ಖಾತೆಗಳನ್ನು ಹ್ಯಾಕರ್‌ಗಳು ಭೇದಿಸಿದ್ದಾರೆ ಎಂದು ಫೇಸ್‌ಬುಕ್‌ ಶುಕ್ರವಾರ ಪ್ರಕಟಿಸಿದೆ. ಆದರೆ ಇಂಥದ್ದೊಂದು ವಿಷಯ ಗಮನಕ್ಕೆ ಬರುತ್ತಲೇ ದೋಷವನ್ನು ಸರಿಪಡಿಸಲಾಗಿದೆ. ಈ ಬಗ್ಗೆ ತನಿಖಾ ಸಂಸ್ಥೆಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.

ಬಳಕೆದಾರರ ಖಾತೆಗಳು ಸೋರಿಕೆಯಾಗಿರುವ ವಿಷಯ ಸೆ.25ರಂದು ಬೆಳಕಿಗೆ ಬಂದಿತ್ತು. ಬಳಕೆದಾರರ ಖಾತೆಗಳನ್ನು ತೆರೆಯಲು ಅವಶ್ಯವಾಗಿರುವ ಡಿಜಿಟಲ್‌ ಕೀ ಎಂದು ಕರೆಯಲಾಗುವ ಆ್ಯಕ್ಸೆಸ್‌ ಟೋಕನ್‌ಗಳನ್ನು ದಾಳಿ ಮೂಲಕ ಕದಿಯುವಲ್ಲಿ ಹ್ಯಾಕರ್‌ಗಳು ಯಶಸ್ವಿಯಾಗಿದ್ದಾರೆ. ಫೇಸ್‌ಬುಕ್‌ನ ಭದ್ರತಾ ವ್ಯವಸ್ಥೆಯ ಕೋಡ್‌ಗಳಲ್ಲಿನ ಲೋಪವನ್ನು ಬಳಸಿಕೊಂಡು ಹ್ಯಾಕರ್‌ಗಳು ಈ ಕೃತ್ಯ ಎಸಗಿದ್ದಾರೆ ಎಂದು ಕಂಪನಿಯ ಪ್ರಾಡಕ್ಟ್ ಮ್ಯಾನೇಜ್‌ಮೆಂಟ್‌ ವಿಭಾಗದ ಉಪಾಧ್ಯಕ್ಷ ಗಯ್‌ ರೋಸೆನ್‌ ಹೇಳಿದ್ದಾರೆ.

ಈ ನಡುವೆ ಹ್ಯಾಕರ್‌ಗಳ ದಾಳಿಯ ಕಳೆದ ಮಂಗವಾರ ಈ ವಿಷಯ ನಮ್ಮ ಗಮನಕ್ಕೆ ಬಂದಿತ್ತು. ಗುರುವಾರ ರಾತ್ರಿ ವೇಳೆಗೆ ಲೋಪ ಸರಿಪಡಿಸಲಾಗಿದೆ ಎಂದು ಫೇಸ್‌ಬುಕ್‌ ಸಿಇಒ ಮಾರ್ಕ್ ಜುಕರ್‌ಬರ್ಗ್‌ ಪ್ರಕಟಿಸಿದ್ದಾರೆ. ಇದು ನಿಜಕ್ಕೂ ಗಂಭೀರ ವಿಷಯ. ಆದರೆ ಹ್ಯಾಕರ್‌ಗಳು ಬಳಕೆದಾರರ ಮಾಹಿತಿಯನ್ನು ಕದ್ದು ಅದನ್ನು ದುರ್ಬಳಕೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕ ಕ್ರಮವಾಗಿ ಬಳಕೆದಾರರಿಗೆ ನೀಡಲಾಗಿದ್ದ ‘ವ್ಯೂ ಆ್ಯಸ್‌’ ಎಂಬ ಫೀಚರ್‌ ಅನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಫೇಸ್‌ಬುಕ್‌ನಲ್ಲಿ ಬೇರೆಯವರಿಗೆ ತಮ್ಮ ಪ್ರೊಫೈಲ್‌ ಹೇಗೆ ಕಾಣಬೇಕು ಎನ್ನುವುದನ್ನು ತೋರಿಸುವ ಅವಕಾಶವನ್ನು ‘ವ್ಯೂ ಆ್ಯಸ್‌’ ಎಂಬ ಫೀಚರ್‌ ಮಾಡಿಕೊಡುತ್ತದೆ. ಇದರಲ್ಲಿನ ಕೋಡ್‌ನ ಲೋಪವನ್ನೇ ಹ್ಯಾಕರ್‌ಗಳು ಬಳಕೆ ಮಾಡಿಕೊಂಡು ಈ ಕೃತ್ಯ ಎಸಗಿರುವುದು ಬೆಳಕಿಗೆ ಬಂದಿದೆ.

ಈ ನಡುವೆ, ಹಲವಾರು ಫೇಸ್‌ಬುಕ್‌ ಬಳಕೆದಾರರ ಆ್ಯಪ್‌ಗಳನ್ನು ಅಪ್‌ಡೇಟ್‌ ಮಾಡಿಕೊಳ್ಳುವಂತೆ ಹಾಗೂ ಪಾಸ್‌ವರ್ಡ್‌ ರೀಸೆಟ್‌ ಮಾಡಿಕೊಳ್ಳುವಂತೆ ಕೂಡ ಕಂಪನಿ ಕೋರಿದೆ.

click me!