‘GRATULA’ ಕೆಂಪು ಬಣ್ಣಕ್ಕೆ ತಿರುಗದಿದ್ದರೆ ನಿಮ್ಮ ಫೇಸ್‌ಬುಕ್ ಹ್ಯಾಕ್!

By Web DeskFirst Published Jul 23, 2018, 11:26 AM IST
Highlights
  • ವಾಸ್ತವವಾಗಿ GRATULA ಎಂದರೆ ಹಂಗೇರಿಯನ್ ಭಾಷೆಯಲ್ಲಿ ‘ಅಭಿನಂದನೆಗಳು’ ಎಂದರ್ಥ
  • ಈ ಫೇಕ್ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ 4000ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ

ಈ ಹಿಂದೆ ಫೇಸ್‌ಬುಕ್ ಕಾಮೆಂಟ್ ಬಾಕ್ಸ್‌ನಲ್ಲಿ BFFಎಂದು ಟೈಪ್ ಮಾಡುವ ಮೂಲಕ ನಿಮ್ಮ ಫೇಸ್ ಬುಕ್ ಖಾತೆ ಭದ್ರವಾಗಿದೆಯೇ ಎಂದು ಪರೀಕ್ಷಿಸಿ ಎಂಬ ಸುಳ್ಳು ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಇದೀಗ ಫೇಸ್‌ಬುಕ್ ಖಾತೆಯ ಭದ್ರತೆ ಬಗ್ಗೆ ಎಚ್ಚರಿಸುವ ಅಂಥದ್ದೇ ಮತ್ತೊಂದು ಸಂದೇಶ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಆ ಸಂದೇಶದಲ್ಲಿ, GRATULA ಎಂದು ಕಾಮೆಂಟ್ ಮಾಡುವ ಮೂಲಕ ನಿಮ್ಮ ಫೇಸ್‌ಬುಕ್ ಖಾತೆ ಭದ್ರವಾಗಿದೆಯೇ ಪರೀಕ್ಷಿಸಿ. ನಿಮ್ಮ ಕಾಮೆಂಟ್ ಕೆಂಪು ಬಣ್ಣದಲ್ಲಿ ಮೂಡಿದರೆ ನಿಮ್ಮ ಖಾತೆ ಭದ್ರವಾಗಿದೆ ಎಂದರ್ಥ. 

ಇಲ್ಲವೇ ತಕ್ಷಣ ಖಾತೆಯಲ್ಲಿ ಕೆಲ ಬದಲಾವಣೆ ಮಾಡುವ ಮೂಲಕ ಫೇಸ್ ಬುಕ್ ಖಾತೆ ಹ್ಯಾಕ್ ಆಗದಂತೆ ನೋಡಿಕೊಳ್ಳಿ’ ಎಂದಿದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ 4000ಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ. ಆದರೆ ನಿಜಕ್ಕೂ GRATULA ಎಂದು ಫೇಸ್‌ಬುಕ್ ಕಾಮೆಂಟ್ ಬಾಕ್ಸ್‌ನಲ್ಲಿ ಟೈಪ್ ಮಾಡಿದಾಗ ಅದು ಹಸಿರು ಬಣ್ಣಕ್ಕೆ ತಿರುಗದಿದ್ದರೆ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಅಂತಲೇ ಎಂದು ಪರಿಶೀಲನೆಗೆ ಮುಂದಾದಾಗ ಹೀಗೆ ವೈರಲ್ ಆಗಿರುವ ಸಂದೇಶದ ಹಿಂದಿನ ವಾಸ್ತವ ಬಯಲಾಗಿದೆ.

ವಾಸ್ತವವಾಗಿ GRATULA ಎಂದರೆ ಹಂಗೇರಿಯನ್ ಭಾಷೆಯಲ್ಲಿ ‘ಅಭಿನಂದನೆಗಳು’ ಎಂದರ್ಥ. ಫೇಸ್‌ಬುಕ್ ಈ ಪದವನ್ನು ಕಾಮೆಂಟ್ ಮಾಡಿದಾಗ ಅದು ಕೆಂಪು ಬಣ್ಣಕ್ಕೆ ಪರಿವರ್ತನೆಯಾಗುವಂತೆ ರೂಪಿಸಿದೆ. ಸಾಮಾನ್ಯವಾಗಿ ‘ಕಂಗ್ರಾಜುಲೇಷನ್ಸ್’ ಎಂಬ ಪದಕ್ಕೆ ವಿಶೇಷ ಅರ್ಥ ಸೂಚಿಸಿ ಅದು ಕೆಂಪು ಬಣ್ಣಕ್ಕೆ ಪರಿವರ್ತನೆಯಾಗುವಂತೆ ಮಾಡಿರುವಂತೆ, GRATULA ಎಂಬ ಪದಕ್ಕೂ ಫೇಸ್‌ಬುಕ್ ವಿಶೇಷತೆಯನ್ನು ನೀಡಿ ಆ ಪದವೂ ಸಹ ಕೆಂಪು ಬಣ್ಣದಲ್ಲಿ ಕಾಣುವಂತೆ ರೂಪಿಸಿದೆ. ಆದರೆ ಇದನ್ನೇ ತಪ್ಪಾಗಿ ಅರ್ಥೈಸಿ ಇದು ಫೇಸ್‌ಬುಕ್ ಖಾತೆ ಭದ್ರತೆಯನ್ನು ಖಾತ್ರಿಪಡಿಸುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿ ಹಬ್ಬಿಸಲಾಗಿದೆ.

[ಕನ್ನಡಪ್ರಭ  ವೈರಲ್ ಚೆಕ್ ಕಾಲಂ]
 

click me!