ಸಮ್ಮಿಶ್ರ ಸರ್ಕಾರಕ್ಕೆ ಆಯಸ್ಸು ಕಮ್ಮಿ : ಕಾಂಗ್ರೆಸಿಗನ ಹೊಸ ಬಾಂಬ್

By Web DeskFirst Published Jul 23, 2018, 11:10 AM IST
Highlights

ಸಮ್ಮಿಶ್ರ ಸರ್ಕಾರಕ್ಕೆ ಆಯಸ್ಸು ಕಮ್ಮಿ ಎಂದು ಕಾಂಗ್ರೆಸ್ ಮುಖಂಡರೋರ್ವರು ಇದೀಗ ಮತ್ತೊಂದು ಹೊಸ ಬಾಂಬ್ ಸಿಡಿಸಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬೆಂಗಳೂರು :  ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕಣ್ಣೀರು ಹಾಕಿರುವುದು ನಾಚಿಕೆಗೇಡಿನ ಸಂಗತಿ. ಒಬ್ಬ ಮುಖ್ಯಮಂತ್ರಿ ಹೆಂಗಸರ ರೀತಿಯಲ್ಲಿ ಅತ್ತರೆ ಹೇಗೆ’ ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ತರಾಟೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಜೆಡಿಎಸ್ ಮೈತ್ರಿ ಧರ್ಮ ಪಾಲನೆ ಮಾಡುತ್ತಿಲ್ಲ. 

ಹೀಗಾಗಿ ಈ ಸಮ್ಮಿಶ್ರ ಸರ್ಕಾರಕ್ಕೆ ಆಯಸ್ಸು ಕಡಿಮೆ ಎಂದೂ ಅವರು ಹೊಸ ಬಾಂಬ್ ಸಿಡಿಸಿದ್ದಾರೆ.  ಭಾನುವಾರ ನಗರದ  ಸದಾಶಿವ ನಗರದಲ್ಲಿರುವ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ  ಜೆಡಿಎಸ್ ಹಾಗೂ ಮುಖ್ಯ ಮಂತ್ರಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದರು. ಚುನಾವಣೆ ವೇಳೆ ಮತಕ್ಕಾಗಿ ಅಳುವುದನ್ನು ನೋಡಿದ್ದೇವೆ. ಆದರೆ, ಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಳುವುದರಲ್ಲಿ ಅರ್ಥವಿಲ್ಲ. ಮುಖ್ಯ ಮಂತ್ರಿಯಾಗಿ ಹೆಣ್ಣು ಮಕ್ಕಳ ರೀತಿಯಲ್ಲಿ ಅಳುತ್ತಾ ಕುಳಿತರೆ ಹೇಗೆ? ಇದು ರಾಜ್ಯಕ್ಕೆ ಮಾಡಿದ ಅವಮಾನ. ಇದೊಂದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.

ಸರ್ಕಾರದ ಆಯಸ್ಸುಕಡಿಮೆ: ಸಮ್ಮಿಶ್ರ ಸರ್ಕಾರದಲ್ಲಿ ಎರಡೂ ಪಕ್ಷಗಳು ಮೈತ್ರಿ ಧರ್ಮವನ್ನು ಪಾಲಿಸಿದರೆ ಒಳ್ಳೆಯದು. ಆದರೆ ಅದು ಆಗುತ್ತಿಲ್ಲ. ಜೆಡಿಎಸ್ ಪಕ್ಷವೊಂದೇ ಮೇಲುಗೈ ಸಾಧಿಸಲು ಯತ್ನಿಸುತ್ತಿದೆ. ಒಬ್ಬರ ಖಾತೆಯಲ್ಲಿ ಮತ್ತೊಬ್ಬರು ಹಸ್ತಕ್ಷೇಪ ಮಾಡುತ್ತಾರೆ ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದರು. ಸಿಎಂ ಕುಮಾರಸ್ವಾಮಿ ಅಧಿಕಾರ ನಡೆಸದೆ ಅಳುತ್ತಾರೆ. ಅದು ಸಂಸತ್ತಿನಲ್ಲಿ ಚರ್ಚೆ ಆಗುತ್ತದೆ. ಜೆಡಿಎಸ್ ವೈಖರಿ ಕಾಂಗ್ರೆಸ್ ಘನತೆಗೆ ಚ್ಯುತಿ ಬರುವ ರೀತಿ ಇದೆ.  ಹೀಗಾಗಿ ಸರ್ಕಾರದ ಆಯಸ್ಸು ಕಡಿಮೆ ಎಂದು ಕೆ.ಎನ್. ರಾಜಣ್ಣ ಹೇಳಿದರು. 

ತುಮಕೂರು ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ಬಂಡಾಯ: ತುಮಕೂರು ಲೋಕಸಭೆ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದ ಸಂಸದ ಮುದ್ದ ಹನುಮೇಗೌಡ ಅವರು ಗೆದ್ದಿದ್ದಾರೆ. ಮುಂದೆಯೂ ಕಾಂಗ್ರೆಸ್ ಪಕ್ಷವೇ ಇಲ್ಲಿ ಗೆಲ್ಲಲಿದೆ. ಹೀಗಾಗಿ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಬಾರದು ಎಂದು ಇದೇ ವೇಳೆ ರಾಜಣ್ಣ ಬಲವಾಗಿ ಪ್ರತಿಪಾದಿಸಿದರು. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ನನ್ನ ಅಭ್ಯಂತರವಿಲ್ಲ. ಆದರೆ, ತುಮಕೂರು ಕಾಂಗ್ರೆಸ್ ಕ್ಷೇತ್ರವಾಗಿದೆ. ಈ ಕ್ಷೇತ್ರವನ್ನು ಬಿಟ್ಟುಕೊಡಲು ನಾನು ಒಪ್ಪುವುದಿಲ್ಲ. ಒಂದು ವೇಳೆ ಜೆಡಿಎಸ್‌ಗೆ ಬಿಟ್ಟುಕೊಟ್ಟರೆ ನಾನು ಯಾವುದೇ ಪಕ್ಷದಿಂದಲಾದರೂ ಸರಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

click me!