
ಮುಂಬೈ: ಕೇಂದ್ರ ಸರ್ಕಾರ ಮತ್ತೆ 2000 ರು. ಮುಖ ಬೆಲೆಯ ನೋಟುಗಳನ್ನು ರದ್ದು ಮಾಡಲಿದೆ ಎಂಬ ಊಹಾಪೋಹಗಳ ಬೆನ್ನಲ್ಲೇ, ಆರ್‌ಬಿಐ ಕೇವಲ 500 ರು. ಮುಖಬೆಲೆಯ ನೋಟುಗಳನ್ನು ಮಾತ್ರ ಬ್ಯಾಂಕ್‌ಗಳಿಗೆ ವಿತರಣೆ ಮಾಡುತ್ತಿದೆ ಎಂಬ ಮಾಹಿತಿ ಇದೀಗ ಬೆಳಕಿಗೆ ಬಂದಿದೆ. ಇತ್ತೀಚಿನ ದಿನಗಳಲ್ಲಿ 2000 ರು ನೋಟುಗಳ ಅಭಾವವು ಬ್ಯಾಂಕ್ ನೌಕರರು ಮತ್ತು ಎಟಿಎಂ ನಿರ್ವಾಹಕರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕೆಲವು ವಾರಗಳಿಂದ 2000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಆರ್‌ಬಿಐ ಇಳಿಮುಖಗೊಳಿಸಿದೆ. ಇದು ದೊಡ್ಡ ಮೌಲ್ಯದ ನೋಟುಗಳ ರದ್ದು ಮಾಡುವ ಪೂರ್ವ ನಿಯೋಜಿತ ಯೋಜನೆಯಾಗಿರಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಮಾತನಾಡಿದ ಭಾರತೀಯ ಸ್ಟೇಟ್ ಬ್ಯಾಂಕ್ ಉದ್ಯೋಗಿ ನೀರಜ್ ವ್ಯಾಸ್, ‘ಆರ್‌ಬಿಐ 500 ರು. ನೋಟುಗಳನ್ನು ಮಾತ್ರ ವಿತರಿಸುತ್ತಿದೆ. ಈಗಾಗಲೇ ಗ್ರಾಹಕರ ಕೈಸೇರಿದ 2000 ರು. ಮುಖಬೆಲೆಯ ನೋಟುಗಳು ಮಾತ್ರವೇ ಮರು ಚಲಾವಣೆಯಾಗುತ್ತಿವೆ,’ ಎಂದಿದ್ದಾರೆ. ಈ ಬಗ್ಗೆ ಪ್ರಶ್ನೆ ಕೇಳಿ ಇ-ಮೇಲ್ ಮಾಡಲಾಗಿತ್ತಾದರೂ, ಆರ್'ಬಿಐ ಉತ್ತರ ನೀಡಿಲ್ಲ. ಆದರೆ, ಕಳೆದ ವರ್ಷ ನೋಟು ರದ್ದು ಮಾಡಿದಾಗ ಎದುರಾದ ನಗದು ಸಮಸ್ಯೆ ತಲೆದೋರದಂತೆ 500 ರು. ನೋಟುಗಳನ್ನು ನಿರಂತರವಾಗಿ ಆರ್‌ಬಿಐ ಕಳುಹಿಸಿಕೊಡುತ್ತಿದೆ ಎಂದು ಅವರು ಹೇಳಿದ್ದಾರೆ.
ಹೆಚ್ಚು ಮೌಲ್ಯ ಹೊಂದಿರುವ ನೋಟುಗಳನ್ನು ರದ್ದು ಮಾಡಬೇಕೆಂಬ ಉದ್ದೇಶದ ಭಾಗವಾಗಿಯೇ ಆರ್'ಬಿಐ 2000 ನೋಟುಗಳನ್ನು ಪೂರೈಕೆ ಮಾಡುತ್ತಿಲ್ಲ ಎಂದು ಬ್ಯಾಂಕ್ ನೌಕರರು ಅಭಿಪ್ರಾಯಪಟ್ಟಿದ್ದಾರೆ. ‘2000 ರು. ನೋಟುಗಳು ಅಭಾವದ ಸೃಷ್ಟಿಯಾದಂತೆ, ತಮ್ಮ ವ್ಯವಹಾರಕ್ಕೆ ಸುಲಭವಾಗುವ 500 ರು. ನೋಟಿನ ಮೇಲೆ ಸರ್ವೇಸಾಮಾನ್ಯವಾಗಿ ಗ್ರಾಹಕರು ಅವಲಂಬಿತರಾಗುತ್ತಾರೆ,’ ದೇಶದಲ್ಲಿ ಬ್ಯಾಂಕ್‌ಗಳ ಪರವಾಗಿ 60 ಸಾವಿರ ಎಟಿಎಂಗಳನ್ನು ನಿರ್ವಹಿಸುವ ಎಜಿಎಸ್ ಟ್ರಾನ್ಸಾಕ್ಟ್ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕ ರವಿ ಗೋಯಲ್ ಹೇಳಿದ್ದಾರೆ.
epaperkannadaprabha.com
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.