ಅನಿತಾ ಪ್ರಾಮಾಣಿಕರಂತೆ ವರ್ತಿಸುತ್ತಿದ್ದಾರೆ. ಅವರು ಯಾರ್ಯಾರ ಬಳಿ ಎಷ್ಟು ಹಣ ವಸೂಲಿ ಮಾಡಿದ್ದಾರೆಂಬುದು ಗೊತ್ತಿದೆ. ಗುತ್ತಿಗೆದಾರರಿಂದ ಹಣ ಪಡೆಯುತ್ತಿರುವುದೂ ತಿಳಿದಿದೆ. ಹೀಗಿರುವಾಗ ನನ್ನ ಮೇಲೆಯೇ ಆರೋಪ ಮಾಡುತ್ತಿರುವುದು ತಮ್ಮ ನೈತಿಕತೆಯನ್ನು ತಾವೇ ಪ್ರಶ್ನೆ ಮಾಡಿಕೊಂಡಂತಿದೆ - ಸಿ.ಪಿ.ಯೋಗೀಶ್ವರ್
ರಾಮನಗರ[ಅ.28]: ಜಿಲ್ಲೆಯ ಎಲ್ಲಾ ಸರ್ಕಾರಿ ಕೆಲಸಗಳಲ್ಲಿ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಭಾಗಿಯಾಗುತ್ತಿದ್ದಾರೆ. ಅವರ ಕೃಪಾಶೀರ್ವಾದದಿಂದಲೇ ಅಭಿವೃದ್ಧಿ ಕಾಮಗಾರಿಗಳೆಲ್ಲವು ಇಬ್ಬರು ಗುತ್ತಿಗೆದಾರರ ಪಾಲಾಗುತ್ತಿವೆ ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಆರೋಪ ಮಾಡಿದರು.
ರಾಮನಗರ ಕ್ಷೇತ್ರ ವ್ಯಾಪ್ತಿಯ ಅಚ್ಚಲು ಗ್ರಾಮದಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್ ಪರ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಕಾಶ್ ಮತ್ತು ಜಗದೀಶ್ ಎಂಬ ಗುತ್ತಿಗೆದಾರರಿಗೆ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿಯಿವೆ ಎಂದರು.
ಅನಿತಾ ಪ್ರಾಮಾಣಿಕರಂತೆ ವರ್ತಿಸುತ್ತಿದ್ದಾರೆ. ಅವರು ಯಾರ್ಯಾರ ಬಳಿ ಎಷ್ಟು ಹಣ ವಸೂಲಿ ಮಾಡಿದ್ದಾರೆಂಬುದು ಗೊತ್ತಿದೆ. ಗುತ್ತಿಗೆದಾರರಿಂದ ಹಣ ಪಡೆಯುತ್ತಿರುವುದೂ ತಿಳಿದಿದೆ. ಹೀಗಿರುವಾಗ ನನ್ನ ಮೇಲೆಯೇ ಆರೋಪ ಮಾಡುತ್ತಿರುವುದು ತಮ್ಮ ನೈತಿಕತೆಯನ್ನು ತಾವೇ ಪ್ರಶ್ನೆ ಮಾಡಿಕೊಂಡಂತಿದೆ ಎಂದು ತಿರುಗೇಟು ನೀಡಿದರು.
350 ಕೋಟಿ ರು. ಕಾಮಗಾರಿಗಳ ಗುತ್ತಿಗೆ: ಈ ಉಪಚುನಾವಣೆಯ ಸಂಪೂರ್ಣ ಖರ್ಚು ವೆಚ್ಚವನ್ನು ಆ ಗುತ್ತಿಗೆದಾರರೇ ನೋಡಿಕೊಳ್ಳುತ್ತಿದ್ದಾರೆ. ಇದಕ್ಕಾಗಿಯೇ ಅವರಿಗೆ 350 ಕೋಟಿ ರುಪಾಯಿಗಳ ಅಭಿವೃದ್ಧಿ ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ ಎಂದು ಆರೋಪಿಸಿದರು.
ನಾನು ಸೋಲು ಗೆಲವನ್ನು ಸಮಾನವಾಗಿ ತೆಗೆದುಕೊಳ್ಳುತ್ತೇನೆ. ಚುನಾವಣೆಯಲ್ಲಿ ಫಲಿತಾಂಶ ಬರುವುದಕ್ಕೂ ಮೊದಲೇ ಸೋಲುತ್ತೇನೆ ಎಂದು ಹೇಳಿದ್ದೆ. ನಾನು ಸೋತರು, ಗೆದ್ದರು ಜನರ ಮಧ್ಯೆಯೇ ಇರುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅನಿತಾ ಕುಮಾರಸ್ವಾಮಿ ಅವರಿಗೆ ಜನರ ಕಷ್ಟ ಸುಖಗಳಿಗೆ ಸ್ಪಂದಿಸುವ ವ್ಯಕ್ತಿತ್ವ ಇಲ್ಲ. ಜನರ ನೆರಳನ್ನು ಕೂಡ ಅವರು ತಾಕಿಸಿಕೊಳ್ಳುವುದಿಲ್ಲ. ಆ ಕಾರಣದಿಂದಾಗಿಯೇ ಮಧುಗಿರಿ ಕ್ಷೇತ್ರ ಜನರು ಅಲ್ಲಿಂದ ಓಡಿಸಿದರು. ಅದೇ ಪರಿಸ್ಥಿತಿ ರಾಮನಗರ ಕ್ಷೇತ್ರ ಉಪಚುನಾವಣೆಯಲ್ಲಿಯೂ ಮರುಕಳಿ ಸುತ್ತದೆ ಎಂದು ಯೋಗೇಶ್ವರ್ ಪ್ರತಿಕ್ರಿಯಿಸಿದರು.
ರೇವಣ್ಣಗೆ ಅಧಿಕಾರದ ಮದ ಏರಿದೆ: ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರಿಗೆ ಅಧಿಕಾರದ ಮದ ಏರಿದೆ. ಕೊಡಗು ಸಂತ್ರಸ್ತರಿಗೆ ಬಿಸ್ಕೇಟ್ ಎಸೆದರಲ್ಲಾ, ಅದು ಅವರ ದುರಾಂಕಾರದ ಪರಮಾವಧಿ. ಅಧಿಕಾರದಲ್ಲಿರುವ ಕಾರಣ ದೇವೇಗೌಡರ ಕುಟುಂಬದವರಿಗೆ ಈಗ ನೆಲ ಮಾತ್ರವಲ್ಲ ಪ್ರಪಂಚದಲ್ಲಿ ಏನು ಕಾಣಿಸುತ್ತಿಲ್ಲ ಎಂದು ಟೀಕಿಸಿದರು.
ರಾಮನಗರ ಕ್ಷೇತ್ರದ ಜೆಡಿಎಸ್ ಕಾರ್ಯಕರ್ತರಿಗೆ ಟೋಪಿ ವಿಚಾರ ಹೇಳಿ ಸ್ವಾಭಿಮಾನ ಕೆಣಕಿದ್ದಾರೆ. ಮಾಜಿ ಶಾಸಕ ಕೆ.ರಾಜು ಅವರಿಗೂ ತೇಜೋವಧೆ ಮಾಡಿದ್ದಾರೆ. ರೇವಣ್ಣ ರಾಮನಗರ ಕ್ಷೇತ್ರದ ಜನರಿಗೆ ಅವಮಾನ ಮಾಡುವ ಮಾತುಗಳನ್ನಾಡಿದ್ದಾರೆ ಎಂದು ಯೋಗೇಶ್ವರ್ ವಾಗ್ದಾಳಿ ನಡೆಸಿದರು.