ಇಸ್ರೋ ಗೂಢಚಾರಿಕೆ: 24 ವರ್ಷಗಳ ಬಳಿಕ ಹಿರಿಯ ವಿಜ್ಞಾನಿಗೆ ‘ಸುಪ್ರೀಂ ನ್ಯಾಯ’!

By Web DeskFirst Published Sep 14, 2018, 2:05 PM IST
Highlights

24 ವರ್ಷಗಳ ಹಳೆಯ ಇಸ್ರೋ ಗೂಢಚಾರಿಕೆ ಪ್ರಕರಣ! ಹಿರಿಯ ವಿಜ್ಞಾನಿ ನಂಬಿ ನಾರಾಯಣ್ ಪರ ಸುಪ್ರೀಂ ತೀರ್ಪು! ವಿಜ್ಞಾನಿಗೆ ಕೇರಳ ಪೊಲೀಸರಿಂದ ಅನಗತ್ಯ ಕಿರುಕುಳ ಎಂದ ಸುಪ್ರೀಂ! ವಿಜ್ಞಾನಿ ನಾರಾಯಣ್ ಗೆ  50 ಲಕ್ಷ ರೂ.  ಪರಿಹಾರ ನೀಡುವಂತೆ ಸೂಚನೆ

ನವದೆಹಲಿ(ಸೆ.14): ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ವಿರುದ್ಧದ ಗೂಢಚಾರಿಕೆ ಪ್ರಕರಣದ ತೀರ್ಪು ಹೊರಬಂದಿದೆ. ಕೇರಳ ಪೊಲೀಸರು ನಂಬಿ ನಾರಾಯಣ್ ಅವರಿಗೆ ಅನಗತ್ಯ ಕಿರುಕುಳ ನೀಡಿದ್ದು, ಅವರಿಗೆ 50 ಲಕ್ಷ ರೂ.  ಪರಿಹಾರ ನೀಡುವಂತೆ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. 

ನಂಬಿ ನಾರಾಯಣ್ ಅವರ ಬಂಧನ ಅನಗತ್ಯ ಎಂದು ಹೇಳಿರುವ ಸುಪ್ರೀಂ ಕೋರ್ಟ್, ವಿಜ್ಞಾನಿಗೆ ಕಿರುಕುಳ ನೀಡಿದ ಕೇರಳ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಇಸ್ರೋ ಗೂಢಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದರೆಂದು ವಿಜ್ಞಾನಿ ನಂಬಿ ನಾರಾಯಣನ್ ವಿರುದ್ಧ ದೋಷಾರೋಪಣೆ ಮಾಡಿದ್ದ ಕೇರಳ ಪೋಲೀಸರು, 24 ವರ್ಷಗಳ ಹಿಂದೆ ಅವರನ್ನು ಬಂಧಿಸಿದ್ದರು. ಆದರೆ ನಂಬಿ ನಾರಾಯಣನ್  ವಿರುದ್ದ ಯಾವುದೇ ಸಾಕ್ಷ್ಯಾಧಾರಗಳನ್ನು ಒಟ್ಟುಗೂಡಿಸುವಲ್ಲಿ ಕೇರಳ ಪೊಲೀಸರು ವಿಫಲವಾಗಿದ್ದಾರೆ ಎನ್ನಲಾಗಿದೆ. 

ನಂಬಿ ನಾರಾಯಣನ್  ಕೇರಳ ಪೋಲೀಸರಿಂದ ಅನಗತ್ಯ ಬಂಧನಕ್ಕೊಳಗಾಗಿ ಕಿರುಕುಳ ಅನುಭವಿಸಿದ್ದಾರೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಇದಕ್ಕೆ ಮುನ್ನ ಸುಪ್ರೀಂ ಕೋರ್ಟ್. ನ್ಯಾಯಮೂರ್ತಿ ಡಿ.ಕೆ.ಜೈನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ತನಿಖೆ ಕೈಗೊಂಡಿತ್ತು.

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ,  ಎ.ಎಂ. ಖಾನ್ವಿಲ್ಕರ್ ಮತ್ತು ಡಿ ವೈ ಚಂದ್ರಚೂಡ್ ಅವರನ್ನೊಳಗೊಂಡ ಪೀಠ, ಈ ಮುನ್ನ ಜುಲೈನಲ್ಲಿ ಪ್ರಕರಣದ ವಿಚಾರಣೆ ನಡೆಸಿತ್ತು. ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಗೆ ಸಿಬಿಐ ಸಿದ್ದವಿದೆ ಎಂದು ತನಿಖಾ ಸಂಸ್ಥೆ ಒಪ್ಪಿಕೊಂಡಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ತನ್ನ ಅಂತಿಮ ಆದೇಶವನ್ನು ಕಾಯ್ದಿರಿಸಿತ್ತು. ಇಸ್ರೋ ವಿಜ್ಞಾನಿ ನಾರಾಯಣನ್  ಅವರನ್ನು ಬೇಹುಗಾರಿಕೆ ಆರೋಪದಡಿ  ನವೆಂಬರ್ 30, 1994 ರಂದು ಬಂಧಿಸಲಾಗಿತ್ತು.

click me!