
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಮೊಹಮ್ಮದ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ದೇವಚಾ ಗ್ರಾಮದ ಸಾಮಾನ್ಯ ದ್ವಿತಲ ಕಟ್ಟಡವೊಂದು ಈಗ ಇಡೀ ದೇಶದ ಗಮನ ಸೆಳೆದಿದೆ. ಸಾರಿಗೆ ಇಲಾಖೆಯ ನಿವೃತ್ತ ಬಸ್ ಚಾಲಕನೊಬ್ಬನ ಮನೆಯ ಮೇಲೆ ಪೊಲೀಸರು ನಡೆಸಿದ ಭಾರಿ ದಾಳಿಯಲ್ಲಿ ಕೋಟ್ಯಂತರ ರೂಪಾಯಿ ನಗದು ಮತ್ತು ಭಾರಿ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದೆ. ಮಂಗಳವಾರ ತಡರಾತ್ರಿ ಆರಂಭವಾದ ಈ ಜಂಟಿ ಪೊಲೀಸ್ ಕಾರ್ಯಾಚರಣೆಯು ಬುಧವಾರ ಸಂಜೆಯವರೆಗೂ ಮುಂದುವರಿದಿದ್ದು, ಜಪ್ತಿ ಮಾಡಿದ ಹಣವನ್ನು ಎಣಿಸಲು ಬರೋಬ್ಬರಿ ಐದು ಎಣಿಕೆ ಯಂತ್ರಗಳನ್ನು ಬಳಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಳಿಯ ವೇಳೆ 15 ಕೆಜಿ ತೂಕದ ಚಿನ್ನದ ಬಿಸ್ಕತ್‌ಗಳು ಹಾಗೂ ಸುಮಾರು 20 ಕೋಟಿ ರೂಪಾಯಿಗೂ ಅಧಿಕ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದಾಳಿಗೊಳಗಾದ ಮನೆಯು ಮಿನಾರ್ ಮೊಂಡಲ್ ಎಂಬುವವರಿಗೆ ಸೇರಿದ್ದಾಗಿದೆ. ಇವರು ಈ ಹಿಂದೆ ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಬಸ್ ಚಾಲಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಅವರು ಈ ಭಾಗದ ಪ್ರಮುಖ ಕಲ್ಲು ಮತ್ತು ಮರಳು ಉದ್ಯಮಿಯಾದ ಟುಲು ಮೊಂಡಲ್ (ಅಲಿಯಾಸ್ ಮೊಹಮ್ಮದ್ ನಜಿಬುದ್ದೀನ್) ಅವರ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಟುಲು ಮೊಂಡಲ್ ಅವರ ಕಲ್ಲು ಕ್ವಾರಿಗಳು ಮತ್ತು ಸಾರಿಗೆ ವ್ಯವಹಾರದ ಕಂದಾಯ ಸಂಗ್ರಹದ ಜವಾಬ್ದಾರಿಯನ್ನು ಮಿನಾರ್ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈ ಟುಲು ಮೊಂಡಲ್, ಈ ಹಿಂದೆ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ಪ್ರಭಾವಿ ನಾಯಕ ಅನುಬ್ರತಾ ಮೊಂಡಲ್ ಅವರ ಅತ್ಯಂತ ಆಪ್ತನಾಗಿದ್ದರು. ಅನುಬ್ರತಾ ಮೊಂಡಲ್ ಇತ್ತೀಚೆಗಷ್ಟೇ ರೀತಾಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಟಿಎಂಸಿ ಬಣವನ್ನು ಸೇರಿಕೊಂಡಿದ್ದರು.
ಪೊಲೀಸರ ಈ ಭಾರಿ ಯಶಸ್ಸನ್ನು ಶ್ಲಾಘಿಸಿ ಸಾಮಾಜಿಕ ಜಾಲತಾಣ 'X' ನಲ್ಲಿ ಪೋಸ್ಟ್ ಮಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು, ಅಕ್ರಮ ಮರಳು ಮತ್ತು ಕಲ್ಲು ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಂಡಿರುವ ನಮ್ಮ ಕಾನೂನು ಜಾರಿ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ಬಿರ್ಭೂಮ್ ಪೊಲೀಸರು ನಿಖರವಾದ ಮಾಹಿತಿ ಆಧರಿಸಿ ಈ ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ ಎಂದಿದ್ದಾರೆ. ಮುಂದುವರಿದು ಬರೆದಿರುವ ಅವರು, ನಮ್ಮ ಸರ್ಕಾರದ ಭ್ರಷ್ಟಾಚಾರದ ವಿರುದ್ಧದ ಹೋರಾಟವು 'ಶೂನ್ಯ ಸಹಿಷ್ಣುತೆ ನೀತಿ'ಯಡಿ ಮುಂದುವರಿಯಲಿದೆ. ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿ, ಅಂದಿನ ಆಡಳಿತಾರೂಢ ರಾಜಕೀಯ ಪಕ್ಷದ ಬೆಂಬಲದೊಂದಿಗೆ ಅಕ್ರಮ ಆಸ್ತಿ ಗಳಿಸಿದ ಯಾರನ್ನೂ ಬಿಡುವುದಿಲ್ಲ. ಸಾರ್ವಜನಿಕರ ಹಣ ಜನರಿಗೇ ಸೇರಬೇಕಾದದ್ದು. ಲೂಟಿಕೋರರು ಕಠಿಣ ಕಾನೂನು ಕ್ರಮ ಎದುರಿಸಲಿದ್ದಾರೆ" ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.
ಈ ಭಾರಿ ಜಪ್ತಿಯ ನಂತರ ಪಶ್ಚಿಮ ಬಂಗಾಳದ ರಾಜಕೀಯದಲ್ಲಿ ಆಡಳಿತ ಮತ್ತು ವಿರೋಧ ಬಣಗಳ ನಡುವೆ ತೀವ್ರ ಆರೋಪ-ಪ್ರತ್ಯಾರೋಪಗಳು ಆರಂಭವಾಗಿವೆ. ಕೆಲವು ನಾಯಕರು ತಮ್ಮ ಅಕ್ರಮ ಸಂಪತ್ತನ್ನು ರಕ್ಷಿಸಿಕೊಳ್ಳಲು ಈಗ 'ಒಳ್ಳೆಯ ಟಿಎಂಸಿ' ಎನ್ನುವ ಬಂಡಾಯ ಬಣ ಸೇರಿಕೊಳ್ಳುತ್ತಿದ್ದಾರೆ. ಪೊಲೀಸರು ಇಂತಹ ಎಲ್ಲಾ ನಾಯಕರನ್ನು ಸೂಕ್ತ ವಿಚಾರಣೆಗೆ ಒಳಪಡಿಸಬೇಕು ಎಂದು ಟಿಎಂಸಿ ಶಾಸಕ ಕುನಾಲ್ ಘೋಷ್ ಒತ್ತಾಯಿಸಿದ್ದಾರೆ. ಬಿರ್ಭೂಮ್ ಯಾವಾಗಲೂ ಕೆಲವೇ ಕೆಲವು ಪ್ರಭಾವಿ ವ್ಯಕ್ತಿಗಳ ಹಕ್ಕಿನ ಕ್ಷೇತ್ರವಾಗಿತ್ತು. ಮುಖ್ಯಮಂತ್ರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಪ್ರಭಾವಿ ವ್ಯಕ್ತಿಗಳ ಸಂಪರ್ಕವನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕು ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಎಂದಿದ್ದಾರೆ.
ಈ ಭಾರಿ ದಾಳಿಯ ಬೆನ್ನಲ್ಲೇ ಟುಲು ಮೊಂಡಲ್ ಈ ಹಿಂದೆ 2024 ರಲ್ಲಿ ತನ್ನ ಮಗಳ ವಿವಾಹಕ್ಕೆ ಬರೋಬ್ಬರಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿದ್ದ ಅದ್ದೂರಿ ಮದುವೆಯ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಮಾರಂಭಕ್ಕೆ ಬಾಲಿವುಡ್ ನಟರಾದ ಅರ್ಬಾಜ್ ಖಾನ್, ಜರೀನ್ ಖಾನ್ ಸೇರಿದಂತೆ ಚಿತ್ರರಂಗದ ಹಲವು ಪ್ರಮುಖ ಗಣ್ಯರು ಭಾಗವಹಿಸಿದ್ದರು. ಅಂದಿನ ಆಡಂಬರದ ಹಣದ ಮೂಲವೇ ಈ ಅಕ್ರಮ ವ್ಯವಹಾರಗಳು ಎಂಬ ಶಂಕೆ ಈಗ ದಟ್ಟವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಿನಾರ್ ಮೊಂಡಲ್ ಹಾಗೂ ಅವರ ಪುತ್ರನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದು ತನಿಖೆ ಮುಂದುವರಿದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.