ರಾಜ್ಯದಲ್ಲಿ ಲೋಡ್‌ ಶೆಡ್ಡಿಂಗ್? ಸಭೆ ಬಳಿಕ ಸಿಎಂ ಕೊಟ್ಟ ಸ್ಪಷ್ಟನೆ

By Web DeskFirst Published Oct 25, 2018, 7:36 PM IST
Highlights

ಕಲ್ಲಿದ್ದಲು ಕೊರತೆಯಿಂದ  ಲೋಡ್ ಶೆಡ್ಡಿಂಗ್ ಮತ್ತೆ ಶುರುವಾಗುವುದೇ? ಎಂಬ ಅನುಮಾನ ರಾಜ್ಯದ ಜನರಲ್ಲಿ ಮೂಡಿತ್ತು. ಆದರೆ ಇದೆಲ್ಲದಕ್ಕೆ ಸ್ವತಃ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು[ಅ.25]  ರಾಜ್ಯದ ವಿದ್ಯುತ್ ಪರಿಸ್ಥಿತಿ ಕುರಿತು ಪರಾಮರ್ಶೆ ನಡೆಸಲು ಸಿಎಂ ಕುಮಾರಸ್ವಾಮಿ ಇಂಧನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡಸಿದರು. ಸಭೆಯಲ್ಲಿ ಮುಖ್ಯ ಕಾರ್ಯದರ್ಶಿಗಳು, ಆರ್ಥಿಕ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು, ಕೆಪಿಸಿಎಲ್, ಕೆಪಿಟಿಸಿಎಲ್ ಹಾಗೂ ಎಲ್ಲ ವಿದ್ಯುತ್ ಸರಬರಾಜು ಕಂಪೆನಿಗಳ ವ್ಯವಸ್ಥಾಪಕ ನಿರ್ದೇಶಕರು ಭಾಗವಹಿಸಿದ್ದರು.

ಪ್ರಸ್ತುತ ಯಾವುದೇ ವಿದ್ಯುತ್ ಸರಬರಾಜು ಕಂಪನಿಯೂ ಲೋಡ್‍ಶೆಡ್ಡಿಂಗ್ ಜಾರಿಗೆ ತಂದಿಲ್ಲ. ಮುಂದೆಯೂ ಲೋಡ್‍ಶೆಡ್ಡಿಂಗ್ ಜಾರಿ ಮಾಡದಂತೆ ಸೂಚಿಸಲಾಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಒಪ್ಪಂದದಂತೆ ಕಲ್ಲಿದ್ದಲು ಪೂರೈಕೆಯಾಗಿಲ್ಲ. ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ. ನಿರಂತರವಾಗಿ ಕೇಂದ್ರ ಕಲ್ಲಿದ್ದಲು ಸಚಿವಾಲಯದೊಂದಿಗೆ ಮುಖ್ಯ ಕಾರ್ಯದರ್ಶಿಗಳು ಸಂಪರ್ಕದಲ್ಲಿದ್ದಾರೆ ಎಂದು ಸಿಎಂ ಸಭೆ ನಂತರ ತಿಳಿಸಿದರು.

ಆದಷ್ಟು ಬೇಗನೆ ಕಲ್ಲಿದ್ದಲು ದೊರಕುವ ಭರವಸೆ ದೊರೆತಿದೆ. ಕಲ್ಲಿದ್ದಲು ಸಾಗಾಣಿಕೆಯೂ ಸಮರ್ಪಕವಾಗಿ ಆಗುವುದನ್ನು ಖಾತರಿಪಡಿಸಲು ಇಂದು ಮತ್ತೊಮ್ಮೆ ಕೇಂದ್ರ ಸಚಿವರಿಗೆ ಮನವಿ ಮಾಡಲಾಗುವುದು.  ಕಲ್ಲಿದ್ದಲು ಪೂರೈಕೆಯನ್ನು ಹಾಗೂ ಕಲ್ಲಿದ್ದಲಿನ ಸಾಗಾಣಿಕೆ ಸಕಾಲದಲ್ಲಿ ಆಗುವುದನ್ನು ಖಾತರಿ ಪಡಿಸಲು ಕಲ್ಲಿದ್ದಲು ಸಚಿವಾಲಯ, ರೈಲ್ವೆ ಕೇಂದ್ರ ಕಚೇರಿಯಲ್ಲಿ ಕೆಪಿಟಿಸಿಎಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

ರಾಜ್ಯದಲ್ಲಿ ಇದರಿಂದಾಗಿ ಯಾವುದೇ ತೊಂದರೆಯಾಗದಂತೆ ಎಚ್ಚರ ವಹಿಸಲಾಗಿದೆ. ಪರ್ಯಾಯ ಮೂಲಗಳಿಂದ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಸೌರ ವಿದ್ಯುತ್ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದರಿಂದ ಹಾಗೂ ಜಲ ವಿದ್ಯುತ್ ಮೂಲದಿಂದ ಈ ನಷ್ಟವನ್ನು ಸರಿದೂಗಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿಯೂ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಎಚ್ಚರ ವಹಿಸುವಂತೆ ಎಲ್ಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

 

click me!