
ಕೆ.ಆರ್. ನಗರ[ಅ.25]: ಸಚಿವರ ವಿರುದ್ಧ ದೂರು ನೀಡಿದ ಜಿಪಂ ಪ್ರತಿಪಕ್ಷ ನಾಯಕ ಡಿ. ರವಿಶಂಕರ್, ಮಾಜಿ ಮುಖ್ಯಮಂತ್ರಿಗಳ ಭಾಷಣಕ್ಕೆ ಅಡ್ಡಿಪಡಿಸಿದ ಕಾರ್ಯಕರ್ತರು, ತಮ್ಮ ಅಧಿಕಾರವಧಿಯಲ್ಲಿ ಮಂಜೂರು ಮಾಡಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ಹೊತ್ತು ಕಾರ್ಯಕರ್ತರನ್ನು ಸಮಾಧಾನಪಡಿಸಿದ ಸಿದ್ದರಾಮಯ್ಯ. ಇವು ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಚುನಾವಣಾ ಸಭೆಯಲ್ಲಿ ಕಂಡು ಬಂದ ದೃಶ್ಯಗಳು.
ಮಂಡ್ಯ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿ ಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎಲ್.ಆರ್. ಶಿವರಾಮೇ ಗೌಡರ ಪರವಾಗಿ ಮತಯಾಚಿಸಲು ನಡೆದ ಕಾಂಗ್ರೆಸ್ ಕಾರ್ಯ ಕರ್ತರ ಸಭೆಯಲ್ಲಿ ಜಿಪಂ ಪ್ರತಿಪಕ್ಷ ನಾಯಕ ಡಿ. ರವಿಶಂಕರ್ ಮಾತನಾಡಿ, ಕ್ಷೇತ್ರದ ಶಾಸಕರು ಆಗಿರುವ ಪ್ರವಾಸೋದ್ಯಮ ಸಚಿವ ಸಾ. ರಾ. ಮಹೇಶ್ ಅಭಿವೃದ್ಧಿ ವಿಚಾರದಲ್ಲಿ ತಾರ ತಮ್ಯ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಕೆ.ಆರ್. ನಗರ ತಾಲೂಕಿನ ಅಭಿವೃದ್ಧಿಗೆ 30 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಆ ಕಾಮಗಾರಿಗಳು ಆರಂಭವಾಗದಂತೆ ಸಾ.ರಾ. ಮಹೇಶ್ ತಡೆಹಿಡಿದಿದ್ದು, ರಾಜಕೀಯ ಹಗೆತನ ಸಾಧಿಸುತ್ತಿದ್ದಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಆನಂತರ ಸಿದ್ದರಾಮಯ್ಯನವರು ಸಭೆಯನ್ನುದೇಶಿಸಿ ಮಾತನಾಡಿ, ಇದಕ್ಕೆ ಅಡ್ಡಿಪಡಿಸಿದ ಕೆಲವು ಕಾಂಗ್ರೆಸ್ ಕಾರ್ಯಕರ್ತರು ನಮ್ಮನ್ನು ಹೀನಾಯವಾಗಿ ಕಾಣುವ ಶಾಸಕ ಸಾ.ರಾ. ಮಹೇಶ್ ಮತ್ತು ಜೆಡಿಎಸ್ ಪರವಾಗಿ ನಾವು ಹೇಗೆ ಮತ ಚಲಾಯಿಸಲಿ ಎಂದು ಪ್ರಶ್ನಿಸಿದರಲ್ಲದೆ, ನಿಮ್ಮ ಅವಧಿಯಲ್ಲಿ ಬಿಡುಗಡೆಯಾಗಿರುವ ಅನುದಾನ ವನ್ನು ಅಭಿವೃದ್ಧಿಗೆ ಬಳಸಬೇಕೆಂದು ಆಗ್ರಹಿಸಿದರು.
ಇದಕ್ಕೆ ಉತ್ತರಿಸಿದ ಮಾಜಿ ಮುಖ್ಯಮಂತ್ರಿಗಳು ನಾನು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷನಾಗಿದ್ದು, ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಜತೆ ಮಾತನಾಡಿ, ಇದರ ಜತೆಗೆ ಮತ್ತಷ್ಟು ಅನು ದಾನ ಬಿಡುಗಡೆ ಮಾಡಿಸಿ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸುತ್ತೇನೆ. ಆದ್ದರಿಂದ ನಾನು ಮಂಜೂರು ಮಾಡಿರುವ ಕೆಲಸವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ ನಂತರ ಕಾರ್ಯಕರ್ತರು ಸಮಾಧಾನಿತರಾದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.