
ಬೆಂಗಳೂರು(ಜ.04): ಅಕ್ರಮ ಗಣಿಗಾರಿಕೆಯ ಆಳ-ಅಗಲ ರಹಸ್ಯ ಕೆದಕುತ್ತಿರುವ ವಿಶೇಷ ತನಿಖಾ ತಂಡವು (ಎಸ್'ಐಟಿ) ಜಂತಕಲ್ ಮೈನಿಂಗ್ ಪ್ರಕರಣ ಸಂಬಂಧ ಮುಂಬೈನ ‘ಎನ್'ಕೌಂಟರ್ ಸ್ಪೆಷಲಿಸ್ಟ್’ ಎಂದೇ ಖ್ಯಾತಿಯಾಗಿರುವ ಕನ್ನಡಿಗ ಪೊಲೀಸ್ ಅಧಿಕಾರಿ ದಯಾನಾಯಕ್ ಅವರನ್ನು ಸಾಕ್ಷಿದಾರರನ್ನಾಗಿ ಪರಿಗಣಿಸಿ ವಿಚಾರಣೆಗೆ ಒಳಪಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಗಣಿಕಪ್ಪ ವಿವಾದದ ಸುಳಿಯಲ್ಲಿ ಸಿಲುಕಿರುವ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರಿಗೆ ಒತ್ತಡ ಹೇರಿದ ಆರೋಪದಲ್ಲಿ ಎಸ್‌ಐಟಿ ಅಧಿಕಾರಿಗಳು ದಯಾನಾಯಕ್ ಅವರನ್ನು ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಹಲವು ಮಾಹಿತಿಗಳನ್ನು ಕ್ರೋಢೀಕರಿಸಿದ್ದಾರೆ. ಪ್ರಕರಣದ ವಿಚಾರಣೆ ಎದುರಿಸಲು ಮುಂಬೈನಿಂದ ಬೆಂಗಳೂರಿಗೆ ಆಗಮಿಸಿ ಲಿಖಿತ ಹೇಳಿಕೆ ನೀಡಿ, ಆರೋಪ ನಿರಾಕರಿಸಿ ಸದ್ದಿಲ್ಲದೆ ಹಿಂತಿರುಗಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪ ನಕಾರ: ದಯಾನಾಯಕ್ ಅವರು ತಮ್ಮ ಖಾಕಿ ಅಧಿಕಾರ ಬಳಸಿ ಅದಿರು ಸಾಗಣೆಗಾಗಿ ಜಂತಕಲ್ ಮೈನಿಂಗ್ ಕಂಪನಿಗೆ ಪರವಾನಗಿ ಕೊಡಿಸಿದ್ದರು ಎಂದು ಪ್ರಕರಣದ ಪ್ರಮುಖ ಆರೋಪಿಯಾಗಿರುವ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಆರೋಪಿಸಿದ್ದರು. ತನಿಖಾಧಿಕಾರಿಗಳಿಗೆ ನೀಡಿದ ಟಿಪ್ಪಣಿಯಲ್ಲಿ ನೇರವಾಗಿ ದಯಾನಾಯಕ್ ಹೆಸರನ್ನು ನೇರವಾಗಿ ಪ್ರಸ್ತಾಪಿಸಿದ್ದಾರೆ. ಜಂತಕಲ್ ಮೈನಿಂಗ್ ಪ್ರಕರಣವನ್ನು ತನಿಖೆಗೆ ಕೈಗೆತ್ತಿ ಕೊಂಡ ಬಳಿಕ ಎಸ್‌ಐಟಿ ಅಧಿಕಾರಿಗಳು ಗಂಗಾರಾಮ್ ಬಡೇರಿಯಾ ಆರೋಪ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ದಯಾನಾಯಕ್ ಅವರನ್ನು ಕರೆಸಿದ್ದರು. ಸದ್ದಿಲ್ಲದೆ ಬೆಂಗಳೂರಿಗೆ ಆಗಮಿಸಿದ್ದ ದಯಾನಾಯಕ್ ವಿಚಾರಣೆ ಎದುರಿಸಿ ವಾಪಸ್ ಮುಂಬೈಗೆ ತೆರಳಿದರು ಎಂದು ಉನ್ನತ ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ಗಂಗಾರಾಮ್ ಬಡೇರಿಯಾ ಅವರ ಆರೋಪವನ್ನು ದಯಾನಾಯಕ್ ತಳ್ಳಿಹಾಕಿದ್ದಾರೆ. ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧ ಇಲ್ಲ ಎಂಬುದಾಗಿ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಲಿಖಿತವಾಗಿ ಹೇಳಿಕೆ ನೀಡುವಂತೆ ಎಸ್'ಐಟಿ ಅಧಿಕಾರಿಗಳು ಸೂಚಿಸಿದರು. ಅಧಿಕಾರಿಗಳ ಸೂಚನೆ ಮೇರೆಗೆ ಬರೆದುಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ, ಗಂಗಾರಾಮ್ ಬಡೇರಿಯಾ ಹೇಳಿಕೆಯ ಆಧಾರದ ಮೇಲೆ ದಯಾನಾಯಕ್ ಅವರನ್ನು ಪ್ರಕರಣದ ಸಾಕ್ಷಿದಾರರನ್ನಾಗಿ ಪರಿಗಣಿಸಿ ತನಿಖೆಯನ್ನು ಮುಂದುವರಿಸಲಾಗಿದೆ ಎನ್ನಲಾಗಿದೆ.
ಆರೋಪ ಏನು?: ಜಂತಕಲ್ ಮೈನಿಂಗ್ ಕಂಪನಿ ಮಾಲೀಕ ವಿನೋದ್ ಗೋಯಲ್ ಮುಂಬೈನವರಾಗಿದ್ದು, ದಯಾನಾಯಕ್ ಸಹ ಮುಂಬೈನಲ್ಲಿ ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಇದು ಇವರಿಬ್ಬರ ಸ್ನೇಹಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಗಿದ್ದು, ಈ ಸ್ನೇಹವೇ ಪರವಾನಗಿ ಲಾಬಿಗೆ ಕಾರಣವಾಗಿರುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ. ಮಾಜಿ ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ಅವರು ಅಕ್ರಮ ಗಣಿಗಾರಿಕೆ ಕುರಿತು ನಡೆಸಿದ ತನಿಖೆ ವೇಳೆಯೂ ಗಂಗಾರಾಮ್ ಬಡೇರಿಯಾ ಅವರು ದಯಾನಾಯಕ್ ಹೆಸರನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆಯೂ ಎಸ್'ಐಟಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದರು. ಹೀಗಾಗಿ ದಯಾನಾಯಕ್ ಅವರ ಹೇಳಿಕೆ ಪಡೆಯಲು ಅನಿವಾರ್ಯವಾದ ಕಾರಣ ವಿಚಾರಣೆಗೊಳಪಡಿಸಬೇಕಾಯಿತು. ಮಾತ್ರವಲ್ಲದೇ, ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಹೆಸರು ಸಹ ಕೇಳಿಬಂದಿದೆ.
ಕಳೆದ ಬಾರಿ ವಿಚಾರಣೆ ನಡೆಸಿದಾಗ ಅವರಿಂದಲೂ ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗಿತ್ತು ಎಂದು ಮೂಲಗಳು ಸ್ಪಷ್ಟಪಡಿಸಿವೆ. ಜಂತಕಲ್ ಮೈನಿಂಗ್ ಕಂಪನಿಗೆ ಪರವಾನಿಗೆ ನೀಡುವಂತೆ ದಯಾನಾಯಕ್ ಜತೆಗೆ ಕಂಪನಿ ಮಾಲೀಕ ವಿನೋದ್ ಗೋಯಲ್ ಸಹ ಗಂಗಾರಾಮ್ ಬಡೇರಿಯಾ ಅವರಿಗೆ ತೀವ್ರ ಒತ್ತಡ ಹೇರಿದ್ದರು. ಈ ಕಾರಣದಿಂದಾಗಿ ಬಡೇರಿಯಾ ಅವರು ಕಂಪನಿಗೆ ಪರವಾನಿಗೆ ನೀಡಲು ಸಹಿ ಹಾಕಿದ್ದರು ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಬಡೇರಿಯಾ ಪರವಾನಿಗೆಗೆ ಸಹಿ ಹಾಕಿದ ಬಳಿಕ ಪ್ರತಿಯಾಗಿ ಭಾರೀ ಪ್ರತಿಫಲ ಸಿಕ್ಕಿದೆ ಎನ್ನಲಾಗಿದೆ. ಈ ಬಗ್ಗೆಯೂ ವಿಚಾರಣೆ ನಡೆದಿದೆ ಎನ್ನಲಾಗಿದೆ.
ವರದಿ: ಪ್ರಭುಸ್ವಾಮಿ ನಟೇಕರ್, ಕನ್ನಡಪ್ರಭ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.