
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ದುಬೈ ಮೂಲದ ಎಮಿರೇಟ್ಸ್ ಏರ್‌ಲೈನ್ಸ್ ಸರ್ವೇಯೊಂದಕ್ಕೆ ಪ್ರತಿಕ್ರಿಯಿಸಿದವರಿಗೆ ಉಚಿತವಾಗಿ ವಿಮಾನದ ಟಿಕೆಟ್'ಗಳನ್ನು ನೀಡಲಿದೆ. ವಿಮಾನದಲ್ಲಿ ಹೋಗಬೇಕೆಂಬ ಕನಸಿರುವವರು ಬೇರೇನೂ ಮಾಡಬೇಕಾಗಿಲ್ಲ, ಈ ಕೆಳಗಿನ ಲಿಂಕ್ ಒತ್ತಿ ಎಂಬಂತಹ ಸಂದೇಶಗಳು ಹರಿದಾಡುತ್ತಿವೆ. ದುಬೈ ಮೂಲದ ಎಮಿರೇಟ್ಸ್ ಕಂಪನಿ ಯು ತನ್ನ 33 ನೇ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದರಿಂದ ಈ ಕೊಡುಗೆ ನೀಡುತ್ತಿದೆ ಎಂದು ಕೆಲವರು ಹೇಳಿದ್ದಾರೆ. ಆದರೆ ಇನ್ನೂ ಕೆಲವರು ಎಮಿರೇಟ್ಸ್ ತನ್ನ 80ನೇ ವರ್ಷದ ವರ್ಷಾಚರಣೆಯನ್ನು ಆಚರಿಸಿಕೊಳ್ಳುತ್ತಿರುವುದರಿಂದ ಈ ಕೊಡುಗೆ ನೀಡುತ್ತಿದೆ ಎಂದಿದ್ದಾರೆ.
ಆದರೆ ನಿಜಕ್ಕೂ ಎಮಿರೇಟ್ಸ್ ಈ ಕೊಡುಗೆ ನೀಡುತ್ತಿರುವುದು ನಿಜವೇ ಎಂದು ತಿಳಿಯಹೊರಟಾಗ, ಇಂತಹ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲವೆಂಬುದು ತಿಳಿಯಿತು. ಅಲ್ಲದೆ ಈ ಕಂಪನಿಯ ಅಧಿಕೃತ ವೆಬ್'ಸೈಟ್'ನಲ್ಲಿರುವ ಪ್ರಕಾರ ಇದು ಪ್ರಾರಂಭವಾಗಿದ್ದು, 1985ರಲ್ಲಿ. ಅಂದರೆ ಇದು ಪ್ರಾರಂಭವಾಗಿ 33ವರ್ಷಗಳು ಕಳೆದಿವೆ. ಹಾಗಾಗಿ 80ನೇ ವರ್ಷಾಚರಣೆಗೆ ಈ ಕೊಡುಗೆ ನೀಡುತ್ತಿದೆ ಎಂಬುದು ಸುಳ್ಳು ಎಂದಂತಾಯಿತು. ಅಲ್ಲದೆ ಏರ್'ಲೈನ್ ಈ ವದಂತಿಯ ಬಗ್ಗೆ ಸ್ಪಷ್ಟೀಕರಣ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸುದ್ದಿ ಸತ್ಯಕ್ಕೆ ದೂರವಾಗಿದ್ದು, ಈ ರೀತಿ ಯಾವುದೇ ಕೊಡುಗೆಯನ್ನು ಘೋಷಿಸಿಲ್ಲ ಎಂದು ಹೇಳಿದೆ.
ಅಲ್ಲದೆ ಯಾವುದೇ ಆನ್‌ಲೈನ್ ಸಮೀಕ್ಷೆ ಕೂಡಾ ನಡೆಸಲಾಗುತ್ತಿಲ್ಲ. ಈ ರೀತಿ ವದಂತಿ ಹಬ್ಬಿಸಿದವರ ಬಗ್ಗೆ ಎಮಿರೇಟ್ಸ್ ಕಾನೂನಾತ್ಮಕ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಸಿದೆ. ಆದರೆ ಎಮಿರೇಟ್ಸ್ ಏರ್‌ಲೈನ್ಸ್ ಬಗ್ಗೆ ಮಾತ್ರ ಈ ರೀತಿಯ ವದಂತಿ ಹಬ್ಬಿರುವುದಲ್ಲ. ಈ ಹಿಂದೆ ಮೇ 2017ರಲ್ಲಿ ಏರ್ ಏಷ್ಯಾ ಬಗ್ಗೆ ಕೂಡ ಇದೇ ರೀತಿಯ ವದಂತಿ ಹಬ್ಬಿಸಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.