
ನವದೆಹಲಿ(ಜ.20): ‘ಲಾಭದಾಯಕ ಹುದ್ದೆ’ ಇಂದು ನಿನ್ನೆಯದಲ್ಲ. 1991ರಲ್ಲಿ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಶಾಸಕತ್ವಕ್ಕೂ ಈ ವಿವಾದ ಕುತ್ತು ತಂದಿತ್ತು ಎಂಬುದು ಹಳೆಯ ಘಟನೆಗಳನ್ನು ಮೆಲುಕು ಹಾಕುತ್ತ ಹೋದಾಗ ತಿಳಿದುಬರುತ್ತದೆ.
1989ರಲ್ಲಿ ರಾಮಕೃಷ್ಣ ಹೆಗಡೆ ಅವರು ಭಾರತ ಸರ್ಕಾರದಿಂದ ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡರು. ಈ ಸಂದರ್ಭದಲ್ಲಿ ಅವರು ಕರ್ನಾಟಕ ವಿಧಾನಸಭೆಯ ಸದಸ್ಯರೂ ಆಗಿದ್ದರು. ಹೀಗಾಗಿ, ‘ಶಾಸಕರಾಗಿದ್ದವರು ಯೋಜನಾ ಆಯೋಗದ ಉಪಾಧ್ಯಕ್ಷರಾಗುವುದು ಕಾನೂನುಬಾಹಿರ. ಎರಡೆರಡು ಕಡೆಗಳಿಂದ ಅವರು ವೇತನ ಪಡೆಯುತ್ತಾರೆ. ಹೀಗಾಗಿ ಅವರನ್ನು ಶಾಸಕತ್ವದಿಂದ ಅನರ್ಹಗೊಳಿಸಬೇಕು’ ಎಂಬ ದೂರು ರಾಜ್ಯಪಾಲರಿಗೆ ಸಲ್ಲಿಕೆಯಾಗಿತ್ತು. ಈ ದೂರಿನ ಬಗ್ಗೆ ಚುನಾವಣಾ ಆಯೋಗದಿಂದ ಅಭಿಪ್ರಾಯ ಪಡೆಯಲು ರಾಜ್ಯಪಾಲರು ನಿರ್ಧರಿಸಿದ್ದರು.
ದೂರಿನ ವಿಚಾರಣೆ ನಡೆಸಿದ ಚುನಾವಣಾ ಆಯೋಗವು, 1989ರ ಡಿಸೆಂಬರ್ 5ರಂದು ‘ರಾಮಕೃಷ್ಣ ಹೆಗಡೆ ಅವರನ್ನು ಅನರ್ಹ ಗೊಳಿಸಬಹುದು’ ಎಂದು ರಾಜ್ಯಪಾಲರಿಗೆ ಶಿಫಾರಸು ಮಾಡಿತ್ತು. ಇದನ್ನು ಆಧರಿಸಿ 1991ರ ಆಗಸ್ಟ್ 8ರಂದು ರಾಜ್ಯಪಾಲರು ಆದೇಶವೊಂದನ್ನು ಹೊರಡಿಸಿ, ‘ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡ ದಿನದಿಂದಲೇ ಶಾಸಕತ್ವದಿಂದ ರಾಮಕೃಷ್ಣ ಹೆಗಡೆ ಅವರನ್ನು ಅನರ್ಹಗೊಳಿಸಲಾಗುತ್ತದೆ’ ಎಂದು ಪ್ರಕಟಿಸಿದ್ದರು. ಕರ್ನಾಟಕ ವಿಧಾನಮಂಡಲವು ಲಾಭದಾಯಕ ಹುದ್ದೆ ಹೊಂದಿದ ಶಾಸಕರ ಅನರ್ಹತೆಗೆ ಸಂಬಂಧಿಸಿದಂತೆ 1957ರಲ್ಲೇ ಶಾಸನವೊಂದನ್ನು ಅಂಗೀಕರಿಸಿ ಜಾರಿಗೆ ತಂದಿತ್ತು. ಆ ಪ್ರಕಾರ ಹೆಗಡೆ ಅವರು ಅನರ್ಹರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.