ಲೋಕಸಭೆ ಚುನಾವಣೆ ಯಾವಾಗ ..? ಘೋಷಣೆಗೆ ಕ್ಷಣಗಣನೆ

By Web DeskFirst Published Mar 8, 2019, 8:36 AM IST
Highlights

ಶೀಘ್ರವೇ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದೆ. 

ನವದೆಹಲಿ :  ಲೋಕಸಭೆಯ ಸಾರ್ವತ್ರಿಕ ಚುನಾವಣೆ ಹಾಗೂ 4 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಕೇಂದ್ರೀಯ ಚುನಾವಣಾ ಆಯೋಗ ಅಂತಿಮ ಸಿದ್ಧತೆಯಲ್ಲಿ ತೊಡಗಿದ್ದು, ಯಾವುದೇ ಕ್ಷಣದಲ್ಲಿ ಮತದಾನ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ವಾರಾಂತ್ಯದೊಳಗೆ ಅಥವಾ ಹೆಚ್ಚೆಂದರೆ ಮುಂದಿನ ಮಂಗಳವಾರದೊಳಗೆ ದಿನಾಂಕ ಹೊರಬೀಳಬಹುದು ಎಂದು ಅತ್ಯುನ್ನತ ಮೂಲಗಳು ತಿಳಿಸಿವೆ.

16ನೇ ಲೋಕಸಭೆಯ ಅವಧಿ ಜೂ.3ರಂದು ಮುಕ್ತಾಯಗೊಳ್ಳಲಿದೆ. ಅಷ್ಟರೊಳಗೆ ಚುನಾವಣೆ ನಡೆಸಬೇಕಾಗಿದ್ದು, ಚುನಾವಣಾ ದಿನಾಂಕ ಹಾಗೂ ಮತ ಯಂತ್ರಗಳ ಲಭ್ಯತೆ ಕುರಿತು ಅಂತಿಮ ಸುತ್ತಿನ ಪರಿಶೀಲನೆಯಲ್ಲಿ ಆಯೋಗ ಮುಳುಗಿದೆ. ಏಪ್ರಿಲ್‌ ಹಾಗೂ ಮೇ ತಿಂಗಳಿನಲ್ಲಿ 7ರಿಂದ 8 ಹಂತಗಳಲ್ಲಿ ಚುನಾವಣೆ ನಡೆಯುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಲೋಕಸಭೆ ಚುನಾವಣೆಯ ಜತೆಯಲ್ಲೇ ಅರುಣಾಚಲಪ್ರದೇಶ, ಒಡಿಶಾ, ಸಿಕ್ಕಿಂ ಹಾಗೂ ಅರುಣಾಚಲಪ್ರದೇಶ ವಿಧಾನಸಭೆಗಳಿಗೂ ಚುನಾವಣೆ ನಡೆಯಬೇಕಿದೆ. ಜಮ್ಮು-ಕಾಶ್ಮೀರ ವಿಧಾನಸಭೆ ವಿಸರ್ಜನೆಯಾಗಿದ್ದು, ಆರು ತಿಂಗಳೊಳಗಾಗಿ ಅಂದರೆ ಮುಂದಿನ ಮೇ ಒಳಗೆ ಚುನಾವಣೆ ನಡೆಸಬೇಕಾಗಿದೆ. ಆದರೆ ಆ ರಾಜ್ಯದಲ್ಲಿನ ಭದ್ರತಾ ವ್ಯವಸ್ಥೆಯ ಮೇಲೆ ಅಲ್ಲಿನ ಚುನಾವಣೆ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.

2004ರಲ್ಲಿ ಫೆ.29ರಂದು ಆಯೋಗ 4 ಹಂತಗಳ ಚುನಾವಣೆಗೆ ದಿನಾಂಕ ಘೋಷಿಸಿತ್ತು. ಏ.20ರಿಂದ ಮೇ 10ರವರೆಗೆ ಚುನಾವಣೆ ನಡೆದಿತ್ತು. 2009ರಲ್ಲಿ ಮಾ.2ರಂದು ಆಯೋಗ 5 ಹಂತಗಳ ಚುನಾವಣೆ ದಿನಾಂಕ ಪ್ರಕಟಿಸಿತ್ತು. ಏ.16ರಿಂದ ಮೇ 13ರವರೆಗೆ ಮತದಾನ ನಡೆದಿತ್ತು. 2014ರಲ್ಲಿ ಮಾ.5ರಂದು ದಿನಾಂಕ ಘೋಷಿಸಿ, ಏ.7ರಿಂದ ಮೇ 12ರವರೆಗೆ 9 ಹಂತಗಳಲ್ಲಿ ಚುನಾವಣೆ ನಡೆಸಿತ್ತು.

click me!