ರಾಜಭವನದಲ್ಲಿ 35 ಬೆಕ್ಕು ಹಿಡಿಯಲು 1 ಲಕ್ಷ ವೆಚ್ಚ!

By Web DeskFirst Published Mar 8, 2019, 8:04 AM IST
Highlights

ರಾಜಭವನದಲ್ಲಿ 35 ಬೆಕ್ಕು ಹಿಡಿಯಲು 1 ಲಕ್ಷ ವೆಚ್ಚ! ಗೌರ್ನರ್‌ ಮನೆಯಲ್ಲಿ ಬೆಕ್ಕುಗಳ ಕಾಟ ತಪ್ಪಿಸಲು ದುಬಾರಿ ಮೊತ್ತಕ್ಕೆ ಗುತ್ತಿಗೆ ನೀಡಿದ ಬಿಬಿಎಂಪಿ
 

ಬೆಂಗಳೂರು (ಮಾ. 08):  ರಾಜಭವನದಲ್ಲಿರುವ ಸುಮಾರು 35 ಬೆಕ್ಕುಗಳನ್ನು ಹಿಡಿಯಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬರೋಬ್ಬರಿ 98 ಸಾವಿರ ರು. ವೆಚ್ಚ ಮಾಡಲು ಮುಂದಾಗಿದೆ.

ನಗರದಲ್ಲಿ ಈವರೆಗೆ ಬೀದಿ ನಾಯಿ, ಇಲಿ ಹಾಗೂ ಹಂದಿಗಳನ್ನು ಹಿಡಿಯುವ ಹೊಣೆ ಹೊತ್ತಿದ್ದ ಬಿಬಿಎಂಪಿಗೆ ಇದೀಗ ಬೆಕ್ಕು ಹಿಡಿಯುವ ಹೊಸ ಹೊಣೆಗಾರಿಕೆ ಸಿಕ್ಕಿದೆ.

ರಾಜಭವನದ ಉದ್ಯಾನದ ಹಿರಿಯ ತೋಟಗಾರಿಕೆ ನಿರ್ದೇಶಕರು ರಾಜಭವನದಲ್ಲಿ ಬೆಕ್ಕುಗಳ ಕಾಟ ಹೆಚ್ಚಾಗಿದ್ದು, ಅವನ್ನು ಹಿಡಿದು ಪುನರ್ವಸತಿ ಕಲ್ಪಿಸುವಂತೆ ಬಿಬಿಎಂಪಿ ಪಶುಪಾಲನಾ ವಿಭಾಗದ ಜಂಟಿ ಆಯುಕ್ತರಿಗೆ ಕಳೆದ ಡಿಸೆಂಬರ್‌ನಲ್ಲಿ ಪತ್ರ ಬರೆದಿದ್ದರು. ಆ ಪತ್ರವನ್ನಾಧರಿಸಿ ಪರಿಶೀಲನೆ ನಡೆಸಿದ್ದ ಬಿಬಿಎಂಪಿ, ಇದೀಗ ರಾಜಭವನದಲ್ಲಿ ಎದುರಾಗಿರುವ ಬೆಕ್ಕುಗಳ ಕಾಟಕ್ಕೆ ಮುಕ್ತಿ ನೀಡಲು ಮುಂದಾಗಿದೆ.

ರಾಜಭವನದಲ್ಲಿ ಬೆಕ್ಕುಗಳನ್ನು ಹಿಡಿಯಲು ಟೆಂಡರ್‌ ಕರೆಯಲಾಗಿತ್ತು. ಅದರಂತೆ ಈಗ ಜಯರಾಜ್‌ ಎಂಬುವವರಿಗೆ ಗುತ್ತಿಗೆ ನೀಡಿ ಕೆಲಸ ಆರಂಭಿಸುವುದಕ್ಕೆ ಕಾರ್ಯಾದೇಶ ಪತ್ರವನ್ನು ಬಿಬಿಎಂಪಿ ನೀಡಿದೆ.

35 ಕ್ಕೂ ಹೆಚ್ಚು ಬೆಕ್ಕುಗಳು:

ಬಿಬಿಎಂಪಿಯ ಪಶುಪಾಲನಾ ವಿಭಾಗದ ಅಧಿಕಾರಿಗಳು ರಾಜಭವನ ಉದ್ಯಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ರಾಜಭವನ ಉದ್ಯಾನದಲ್ಲಿ 35ಕ್ಕೂ ಹೆಚ್ಚು ಬೆಕ್ಕುಗಳಿರುವುದು ಕಂಡುಬಂದಿದ್ದವು. ಜತೆಗೆ ಕಬ್ಬನ್‌ ಉದ್ಯಾನ, ಇಂದಿರಾ ಗಾಂಧಿ ಕಾರಂಜಿ, ನೆಹರೂ ತಾರಾಲಯ, ವಿಧಾನಸೌಧ ಭಾಗಗಳಿಂದ ಬೆಕ್ಕುಗಳು ಬಂದಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದರು. ಆ ಬೆಕ್ಕುಗಳು ಉದ್ಯಾನದಲ್ಲಿರುವ ಇಲಿಗಳು ಹಾಗೂ ಪಾರಿವಾಳಗಳನ್ನು ತಿನ್ನುತ್ತಿವೆ. ಜತೆಗೆ, ರಾಜಭವನದ ಒಳಗೂ ಓಡಾಡುತ್ತಾ ಕಾಟ ಕೊಡುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದರು.

98 ಸಾವಿರ ರು.ಗೆ ಗುತ್ತಿಗೆ:

ರಾಜಭವನದಲ್ಲಿನ ಬೆಕ್ಕುಗಳನ್ನು ಹಿಡಿಯುವ ಬಿಬಿಎಂಪಿ 98 ಸಾವಿರ ರು.ಗೆ ಟೆಂಡರ್‌ ನೀಡಿದ್ದು, ಬೆಕ್ಕುಗಳನ್ನು ಹಿಡಿಯುವ ಕೆಲಸ ವಹಿಸಿಕೊಂಡಿರುವ ಗುತ್ತಿಗೆದಾರರಿಗೆ ಒಂದು ತಿಂಗಳು ಕಾಲಾವಕಾಶ ನೀಡಲಾಗಿದೆ. ಹಿಡಿದ ಬೆಕ್ಕುಗಳ ಲೆಕ್ಕವನ್ನು ನೀಡಬೇಕು ಹಾಗೂ ಅವುಗಳಿಗೆ ಪುನರ್ವಸತಿ ಕಲ್ಪಿಸಿರುವ ಬಗ್ಗೆ ಮಾಹಿತಿ ನೀಡಬೇಕು ಎಂದು ಟೆಂಡರ್‌ ಷರತ್ತಿನಲ್ಲಿ ತಿಳಿಸಿದೆ.

ಪಾಲಿಕೆ ಅರಣ್ಯ ಮತ್ತು ಪಶುಪಾಲನಾ ವಿಭಾಗದಿಂದ ರಾಜಭವನ ಹಾಗೂ ಸುತ್ತಮುತ್ತಲ ಭಾಗದಲ್ಲಿರುವ ಬೆಕ್ಕು ಹಾಗೂ ಹಾವು ಹಿಡಿಯುವುದಕ್ಕೆ ನೀಡಲಾಗಿರುವ ಟೆಂಡರ್‌ ಮೊತ್ತ ಅಗತ್ಯಕ್ಕಿಂತ ಹೆಚ್ಚಾಗಿದ್ದರೆ ಪರಿಶೀಲನೆ ಮಾಡಿ ಮರು ಟೆಂಡರ್‌ ಕರೆಯಲಾಗುವುದು.

- ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತರು

click me!