ದಿಲ್ಲಿಯ ಪಾಕ್‌ ಕಚೇರಿ ಮೂಲಕ ಉಗ್ರರಿಗೆ ಹಣ!

By Kannadaprabha NewsFirst Published Oct 6, 2019, 8:11 AM IST
Highlights

 ಅಶಾಂತಿ ಸೃಷ್ಟಿಸುವ ಉದ್ದೇಶದೊಂದಿಗೆ ಆ ರಾಜ್ಯದ ಪ್ರತ್ಯೇಕತಾವಾದಿ ನಾಯಕರಿಗೆ ದೆಹಲಿಯಲ್ಲಿನ ಪಾಕಿಸ್ತಾನ ಹೈಕಮಿಷನ್‌ ಕಚೇರಿಯಿಂದ ಹಣ ವರ್ಗಾವಣೆಯಾಗಿದೆ ಎಂಬ ಕಳವಳಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಹಿರಂಗಪಡಿಸಿದೆ. 

ನವದೆಹಲಿ (ಅ.06): ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸುವ ಉದ್ದೇಶದೊಂದಿಗೆ ಆ ರಾಜ್ಯದ ಪ್ರತ್ಯೇಕತಾವಾದಿ ನಾಯಕರಿಗೆ ದೆಹಲಿಯಲ್ಲಿನ ಪಾಕಿಸ್ತಾನ ಹೈಕಮಿಷನ್‌ ಕಚೇರಿಯಿಂದ ಹಣ ವರ್ಗಾವಣೆಯಾಗಿದೆ ಎಂಬ ಕಳವಳಕಾರಿ ಮಾಹಿತಿಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಹಿರಂಗಪಡಿಸಿದೆ. ಈ ಕುರಿತು ದೆಹಲಿಯ ನ್ಯಾಯಾಲಯವೊಂದಕ್ಕೆ ಎನ್‌ಐಎ 3000 ಪುಟಗಳ ಪೂರಕ ಆರೋಪಪಟ್ಟಿಯನ್ನು ಸಲ್ಲಿಕೆ ಮಾಡಿದೆ.

ಈವರೆಗೆ ಗಡಿಯಾಚೆಯಿಂದ ಭಯೋತ್ಪಾದಕರನ್ನು ರವಾನಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದ ಪಾಕಿಸ್ತಾನ, ಇದೀಗ ರಾಜತಾಂತ್ರಿಕ ಉದ್ದೇಶಕ್ಕಾಗಿ ಸ್ಥಾಪನೆಯಾಗಿರುವ ತನ್ನ ಹೈಕಮಿಷನ್‌ ಕಚೇರಿಯನ್ನೇ ಆ ಕಾರ್ಯಕ್ಕೆ ಬಳಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಭಯೋತ್ಪಾದಕ ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಲು ಸಂಚು ರೂಪಿಸಿದ ಆರೋಪ ಸಂಬಂಧ ಪ್ರತ್ಯೇಕತಾವಾದಿಗಳಾದ ಯಾಸಿನ್‌ ಮಲಿಕ್‌, ಆಸಿಯಾ ಅಂದ್ರಾಬಿ, ಮಸರತ್‌ ಆಲಂ, ಶಬೀರ್‌ ಅಹಮದ್‌ ಶಾ ಹಾಗೂ ಮಾಜಿ ಶಾಸಕ ಅಬ್ದುಲ್‌ ರಶೀದ್‌ ಶೇಖ್‌ ವಿರುದ್ಧ ಈ ಆರೋಪಪಟ್ಟಿಯನ್ನು ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ಶುಕ್ರವಾರ ಸಲ್ಲಿಕೆ ಮಾಡಲಾಗಿದೆ.

ರಾಜತಾಂತ್ರಿಕ ಉದ್ದೇಶಕ್ಕೆಂದು ಕಾರ್ಯನಿರ್ವಹಿಸಬೇಕಾದ ದೆಹಲಿಯಲ್ಲಿನ ಪಾಕಿಸ್ತಾನ ಹೈಕಮಿಷನ್‌ ಕಚೇರಿಯು ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಬೆಂಬಲಿಸಿದೆ. ಅಲ್ಲದೆ ವಿವಿಧ ಮಾರ್ಗಗಳ ಮೂಲಕ ಹಣ ವರ್ಗಾವಣೆ ಮಾಡಿದೆ. ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಕೆಲವೊಂದು ನಿರ್ದೇಶನಗಳನ್ನು ನೀಡಿರುವುದು ಸ್ಪಷ್ಟವಾಗಿದೆ ಎಂಬ ಮಾಹಿತಿ ಆರೋಪಪಟ್ಟಿಯಲ್ಲಿದೆ.

ಯಾಸಿನ್‌ ಮಲಿಕ್‌ ಹಾಗೂ ಶಬೀರ್‌ ಶಾ ಅವರ ಇ-ಮೇಲ್‌ ಖಾತೆಗಳಿಂದ ಕೆಲವೊಂದು ವಿವರ ಸಿಕ್ಕಿದ್ದು, ಪಾಕಿಸ್ತಾನ ಹಾಗೂ ಇನ್ನಿತರೆ ದೇಶಗಳಿಂದ ಹಣ ಬಂದಿರುವುದನ್ನು ಅವು ದೃಢೀಕರಿಸಿವೆ ಎಂದು ಉಲ್ಲೇಖಿಸಲಾಗಿದೆ. ಕಾಶ್ಮೀರದಲ್ಲಿ ಅಶಾಂತಿ ಹಾಗೂ ತೀವ್ರವಾದ ಸೃಷ್ಟಿಗೆ ಹವಾಲಾ ಮೂಲಕ ವಿದೇಶಗಳಿಂದ ಯಾಸಿನ್‌ ಮಲಿಕ್‌ ಹಣ ಸ್ವೀಕರಿಸಿರುವುದು ಕೂಡ ಪತ್ತೆಯಾಗಿದೆ ಎಂಬ ಮಾಹಿತಿ ಆರೋಪಟ್ಟಿಯಲ್ಲಿದೆ.

click me!