
ಮಂಗಳೂರು(ನ.29): ಇಡೀ ದೇಶ ನೋಟು ಅಮಾನ್ಯದ ಬಿಸಿಗೆ ತುತ್ತಾಗಿದ್ದರೆ, ಮಂಗಳೂರಿನ ಹೊಟೇಲ್ ಮಾಲೀಕರೊಬ್ಬರು ‘ದುಡ್ಡಿಲ್ಲದಿದ್ದರೆ ಚಿಂತೆ ಇಲ್ಲ, ಆಹಾರ ಸ್ವೀಕರಿಸಿಕೊಂಡೇ ಹೋಗಿ’ ಎನ್ನುವ ಉದಾರತೆ ತೋರಿದ್ದಾರೆ.
ನಗರದ ಹೊರವಲಯದಲ್ಲಿರುವ ಯಯ್ಯಾಡಿಯ ವರ್ಧಮಾನ ಹೊಟೇಲ್ ಮಾಲೀಕ ಎಂ. ರಣಧೀರ್ ಇಂತಹದ್ದೊಂದು ಬೋರ್ಡ್ ಅನ್ನು ತಮ್ಮ ಹೋಟೆಲ್ ಮುಂದೆ ಹಾಕುವ ಮೂಲಕ ನಾಗರಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನೋಟು ಅಮಾನ್ಯದಿಂದ ನಾಗರಿಕರ ಪರದಾಟ ಕಂಡು ಇಂತಹದ್ದೊಂದು ಫಲಕ ಹಾಕಿಸಿದ್ದು ಅದರಲ್ಲಿ, ‘‘ನಿಮ್ಮಲ್ಲಿ ಚಿಲ್ಲರೆ ಇಲ್ಲವೇ?, ನೋಟು ಮತ್ತು ಚಿಲ್ಲರೆಯ ನೆಪವೊಡ್ಡಿ ಆಹಾರ ಸ್ವೀಕರಿಸದೇ ಹೋಗಬೇಡಿ. ಹಣ ಇಲ್ಲದಿದ್ದರೆ ಈಗ ತಿಂಡಿ ತಿಂದು ಹೋಗಿ ಡಿ.೩೦ರ ನಂತರ ಆ ಹಣವನ್ನು ಕೊಡಿ’ ಎಂದು ಬರೆಸಿದ್ದಾರೆ. ನ.೧೫ರಂದು ಈ ಬೋರ್ಡ್ ಹಾಕಿಸಿದ್ದು, ಇದರಿಂದ ಬಡ ಜನರಿಗೆ ಸಾಕಷ್ಟು ಉಪಯೋಗವಾಗಿದೆಯಲ್ಲದೇ, ಈವರೆಗೂ ಯಾರೂ ಮೋಸ ಮಾಡಿಲ್ಲ. ತಿಂದು ಹೋದ ಉಪಹಾರದ ಬಿಲ್ಲನ್ನು ವಾಪಸ್ ತಂದುಕೊಟ್ಟಿದ್ದಾರೆ. ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಚಾರ ದೊರೆತಿದ್ದು, ಅನೇಕ ರಾಜಕೀಯ ನಾಯಕರು ದೂರವಾಣಿ ಕರೆ ಮಾಡಿ ಅಭಿನಂದಿಸಿದ್ದಾರೆ ಎಂದು ರಣಧೀರ್ ಅವರು ಸುವರ್ಣ ನ್ಯೂಸ್ ಸೋದರ ಪತ್ರಿಕೆ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
''ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ವರ್ಧಮಾನ ಹೊಟೇಲ್ ಕುರಿತು ಪ್ರಸ್ತಾಪವಾಗಿದೆ ಎಂದು ಯಾರೋ ನನಗೆ ಹೇಳಿದ್ದಾರೆ. ಆದರೆ ಇದನ್ನು ದೃಢೀಕರಿಸಲು ಹೋಗಿಲ್ಲ.
- ರಣಧೀರ್, ವರ್ಧಮಾನ ಹೊಟೇಲ್ ಮಾಲೀಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.