
ಮಡಿಕೇರಿ (ಜು. 07): ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಡಿವೈಎಸ್‌ಪಿ ಎಂಕೆ ಗಣಪತಿ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ 2 ವರ್ಷ ತುಂಬಿದೆ. ಇಲಾಖೆಯಲ್ಲಿ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಆರೋಪವಿದೆ.
ಇದೀಗ ಮತ್ತೊಬ್ಬ ಹಿರಿಯ ಅಧಿಕಾರಿ ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿರುವ ಕಿರುಕುಳದ ಬಗ್ಗೆ ಡಿಜಿ & ಐಜಿಪಿಗೆ ಪತ್ರ ಬರೆದಿದ್ದಾರೆ. ಅಧಿಕಾರಿ ಬರೆದಿರುವ ಪತ್ರದ ಪ್ರತಿ ಸುವರ್ಣ ನ್ಯೂಸ್’ಗೆ ಲಭ್ಯವಾಗಿದೆ. ಮೇಲಧಿಕಾರಿಗಳಿಂದ ಆಗುತ್ತಿರುವ ಕಿರುಕುಳಕ್ಕೆ ಪರಿಹಾರ ಕೋರಿ ಪತ್ರ ಬರೆದಿದ್ದಾರೆ. ನೇರವಾಗಿ ಡಿಜಿ ನೀಲಮಣಿ ಎನ್ ರಾಜು ಅವರಿಗೆ ಪತ್ರ ಬರೆದಿದ್ದಾರೆ.
ಡಿವೈಎಸ್‌ಪಿ ಮಗಳಿಗೆ ರಾಜ್ಯ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿತ್ತು. ಮಗಳನ್ನು ತರಬೇತಿ ಕ್ಯಾಂಪ್’ಗೆ ಬಿಟ್ಟು ಬರಲು 1 ದಿನದ ರಜೆಗೆ ಅರ್ಜಿ ಹಾಕಿದ್ದರು ಅಧಿಕಾರಿ. 9 ದಿನಗಳ ಮುನ್ನವೇ ರಜೆಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ರಜೆ ದೊರಕದ ಹಿನ್ನೆಲೆಯಲ್ಲಿ ಮೌಖಿಕವಾಗಿ ತಿಳಿಸಿ ಹೋಗಿದ್ದರು. ಇದನ್ನು ಅಶಿಸ್ತು ಎಂದು ಪರಿಗಣಿಸಿ ಕಾರಣ ಕೇಳಿ ನೋಟೀಸ್ ನೀಡಲಾಗಿತ್ತು. 23 ದಿನಗಳ ತರಬೇತಿಯಲ್ಲಿ ಕೇವಲ 1 ದಿನ ಮಾತ್ರ ರಜೆ ಹಾಕಿದ್ದೆ. ಆದರೆ ಮತ್ತೊಬ್ಬ ಅಧಿಕಾರಿ ಅರ್ಜಿ ಸಹ ನೀಡದೆ ರಜೆ ಮೇಲೆ ಹೋಗಿದ್ರು. ಇನ್ನೂ ಕೆಲವರಿಗೆ 3-4 ದಿನ ಹೊರಗಡೆ ಹೋಗಲು ಅನುಮತಿ ನೀಡಲಾಗಿತ್ತು. ಇಲಾಖೆಯ ಈ ತಾರತಮ್ಯ ನೀತಿ ಪ್ರಶ್ನಿಸಿ ಡಿವೈಎಸ್‌ಪಿ ನೀಲಮಣಿ ರಾಜುಗೆ ಪತ್ರ ಬರೆದಿದ್ದಾರೆ.
ಜೊತೆಗೆ ಮೃತ ಡಿವೈಎಸ್‌ಪಿ ಎಂಕೆ ಗಣಪತಿ ವಿಚಾರವನ್ನು ಸಹ ಪತ್ರದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಸೆಪ್ಟೆಂಬರ್ 7 ರಂದು ಆತ್ಮಹತ್ಯೆಗೆ ಶರಣಾಗಿದ್ದ ಎಂಕೆ ಗಣಪತಿ. ಸೆಪ್ಟೆಂಬರ್ 8 ರಂದು ಗಣಪತಿ ವಿರುದ್ಧದ ಆರೋಪಕ್ಕೆ ಕ್ಲೀನ್ ಚಿಟ್ ನೀಡಲಾಗಿತ್ತು. ಒಂದು ದಿನ ಮೊದಲೇ ಕ್ಲೀನ್ ಚಿಟ್ ನೀಡಿದ್ರೆ ಗಣಪತಿ ಬದುಕಿರ್ತಾ ಇದ್ರು. ಕಲ್ಲಪ್ಪ ಹಂಡಿಬಾಗ್ ಪ್ರಕರಣದಲ್ಲೂ ಪ್ರಾಮಾಣಿಕ ತನಿಖೆ ನಡೆಯಲಿಲ್ಲ. ಇಲಾಖೆಯಲ್ಲಿನ ಕಿರುಕುಳದಿಂದ ಇಂತಹ ಘಟನೆಗಳು ಸಂಭವಿಸಿವೆ. ನೀಲಮಣಿ ಎನ್ ರಾಜು ಡಿಜಿ&ಐಜಿಪಿಯಾಗಿ ಒಂದೂವರೆ ವರ್ಷವಾಯ್ತು. ಈವರೆಗೂ ಅಧಿಕಾರಿ-ಸಿಬ್ಬಂದಿಯ ಕುಂದುಕೊರತೆಗಳನ್ನು ಆಲಿಸಿಲ್ಲ ಎಂದು ಪತ್ರದಲ್ಲಿ ದೂರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.