
ಬೆಂಗಳೂರು : ಕೌಟುಂಬಿಕ ಕಲಹದಿಂದ ನಮ್ಮ ಖಾಸಗಿತನಕ್ಕೆ ಧಕ್ಕೆಯುಂಟಾಗಿದ್ದು, ನಮಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ನಟ ದುನಿಯಾ ವಿಜಯ್ ಅವರ ಎರಡನೇ ಪುತ್ರಿ ಮೋನಿಶಾ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.
ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಕೌಟುಂಬಿಕ ಕಲಹದಿಂದಾಗಿ ನಮಗೆ ತೊಂದರೆಯಾಗುತ್ತಿದೆ. ನಮ್ಮ ತಂದೆ-ತಾಯಿ ನಡುವೆ ಕೆಲ ವಿಚಾರಕ್ಕೆ ಭಿನ್ನಾಭಿಪ್ರಾಯವಿದೆ. ಎಲ್ಲಾ ಕುಟುಂಬಗಳಲ್ಲಿ ಇರುವಂತೆಯೇ ನಮ್ಮಲ್ಲೂ ಸಮಸ್ಯೆಗಳಿವೆ. ಆದರೆ, ಅವರ ಜಗಳದಲ್ಲಿ ನಮ್ಮ ಹೆಸರು ತೆಗೆದುಕೊಳ್ಳಬಾರದು. ನಮ್ಮ ತಾಯಿ ನಾಗರತ್ನ ಪ್ರಕರಣದಲ್ಲಿ ನಮ್ಮನ್ನು ಸಿಲುಕಿಸಲಾಗುತ್ತಿದೆ. ಕೆಲವರು ನಮ್ಮನ್ನು ಹಿಂಬಾಲಿಸುತ್ತಿದ್ದಾರೆ. ಇದರಿಂದ ನಮಗೆ ಖಾಸಗಿತನ ಇಲ್ಲವಾಗಿದ್ದು, ಮಾನಸಿಕವಾಗಿ ಜರ್ಝರಿತರಾಗಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರತಿ ದಿನವನ್ನು ಆತಂಕದಲ್ಲಿ ದೂಡುತ್ತಿರುವ ನಮಗೆ ಪೊಲೀಸರಿಂದ ರಕ್ಷಣೆ ನೀಡಬೇಕು. ಜತೆಗೆ ತಂದೆ ವಿಜಿ ಹಾಗೂ ಕೀರ್ತಿಗೌಡ ನಮ್ಮ ಬಗ್ಗೆ ಮಾಧ್ಯಮಗಳಲ್ಲಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿರುವುದರಿಂದಲೂ ಆಘಾತವಾಗಿದೆ. ನಮ್ಮ ತಾಯಿ ನಾಗರತ್ನ, ತಂದೆ ವಿಜಿ ಹಾಗೂ ಕೀರ್ತಿಗೌಡ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ಕೂಡ ನಡೆಸಿದ್ದಾರೆ. ತಂದೆ ಹಾಗೂ ತಾಯಿಯ ವೈಮನಸ್ಯದಿಂದ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗುತ್ತಿದೆ ಎಂದು ಆಯೋಗಕ್ಕೆ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಮಕ್ಕಳನ್ನು ಈ ಪ್ರಕರಣದಲ್ಲಿ ಮಧ್ಯೆ ತರಬಾರದು. ಇದೆಲ್ಲ ನಮಗೆ ಬೇಡ. ನಮ್ಮ ಪಾಡಿಗೆ ಇರುವುದಕ್ಕೆ ಬಿಡಬೇಕು. ನಮ್ಮ ವೈಯಕ್ತಿಕ ಗೌರವ, ಘನತೆಗೆ ಧಕ್ಕೆಯಾಗಬಾರದು. ಈ ನಿಟ್ಟಿನಲ್ಲಿ ಮಕ್ಕಳ ರಕ್ಷಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಆಯೋಗಕ್ಕೆ ಸಲ್ಲಿಸಿರುವ ಮನವಿಯಲ್ಲಿ ಮೋನಿಕಾ ವಿನಂತಿಸಿದ್ದಾರೆ.
ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯೆ ನೀಡಿದ ಆಯೋಗದ ಹಂಗಾಮಿ ಅಧ್ಯಕ್ಷರಾದ ವೈ.ಮರಿಸ್ವಾಮಿ, ಈ ಪ್ರಕರಣದಲ್ಲಿ ಮಕ್ಕಳಿಗೆ ತೊಂದರೆಯಾಗದಂತೆ ತನಿಖೆ ನಡೆಸಲು ಹೇಳಲಾಗಿದೆ. ಇದಕ್ಕೆ ಗಿರಿನಗರ ಪೊಲೀಸರು ಹಾಗೂ ಡಿಸಿಪಿ ಅಣ್ಣಾಮಲೈ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಎರಡೂ ಕುಟುಂಬಗಳಲ್ಲಿ ವೈಮನಸ್ಸಿದೆ. ಹಾಗಾಗಿ ಮೊದಲಿಗೆ ತಂದೆ ಹಾಗೂ ತಾಯಿಯನ್ನು ಕರೆದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರದ ರೀತಿಯಲ್ಲಿ ನಡೆದುಕೊಳ್ಳುವಂತೆ ಹೇಳಲಾಗುವುದು. ಇದಕ್ಕೆ ಸ್ಪಂದಿಸದಿದ್ದರೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಬಗ್ಗೆ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.