ಬೆಳ್ಳಂದೂರಿನ ದುಗ್ಗಲಮ್ಮ ದೇಗುಲ ಜಲಾವೃತ

By Suvarna Web DeskFirst Published Aug 15, 2017, 6:09 PM IST
Highlights

ಬೆಂಗಳೂರಿನ ವಿವಿಧೆಡೆ ಮರಗಳು ಧರೆಗುರುಳಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಮೆಜೆಸ್ಟಿಕ್, ಶಿವಾಜಿನಗರ, ಜಯನಗರ, ಕೋರಮಂಗಲ ಸೇರಿ ಹಲವೆಡೆ ಭಾರೀ ಮಳೆಯಾಯಿತು. ಜೆ.ಪಿ.ನಗರದಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಜನ ತೊಂದರೆಗೊಳಗಾದರು.

ಬೆಂಗಳೂರು(ಆ. 15): ನಿನ್ನೆ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಇಡೀ ನಗರ ಅಸ್ತವ್ಯವಸ್ತಗೊಂಡಿದೆ. ಬಹುತೇಕ ಪ್ರದೇಶಗಳು ಜಲಾವೃತಗೊಂಡು ಮುಳುಗಡೆಯಾಗಿವೆ. ಹೊರವಲಯದಲ್ಲಿರುವ ಬೆಳ್ಳಂದೂರು ಕೂಡ ಇದರಲ್ಲಿ ಒಳಗೊಂಡಿದೆ. ಬೆಳ್ಳಂದೂರಿನ ದುಗ್ಗಲಮ್ಮ ದೇವಸ್ಥಾನವು ಜಲಾವೃತಗೊಂಡಿದೆ. ಬೆಳ್ಳಂದೂರು ಕೆರೆ ತುಂಬಿಹೋಗಿದ್ದು ನೊರೆಯ ಪ್ರಮಾಣವೂ ಹೆಚ್ಚಾಗಿದೆ. ಯಮಲೂರು ಕೆರೆಯಲ್ಲೂ ನೀರಿನ ಪ್ರಮಾಣ ಹೆಚ್ಚಾಗಿ ನೊರೆಯು ಸುತ್ತಮುತ್ತಲ ಪ್ರದೇಶಗಳಿಗೆ ಸರಿದಾಡುತ್ತಿದೆ.

ಅಲ್ಲೇ ಸಮೀಪದ ಎಚ್'ಎಸ್'ಆರ್ ಲೇಔಟ್'ನಲ್ಲಿರುವ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿದೆ. ಒಳಚರಂಡಿ ನೀರು ರಸ್ತೆಗಳಲ್ಲಿ ನಿಂತಿದ್ದರಿಂದ ಸಂಚಾರಕ್ಕೆ ತೊಡಕಾಗಿದೆ. ಇಲ್ಲಿಯ ಬಿಬಿಎಂಪಿ ಕಚೇರಿ ಬಹುತೇಕ ಮುಳುಗಡೆಯಾಗಿದೆ.

ಯಡಿಯೂರಲ್ಲಿ ತಡೆಗೋಡೆ ಕುಸಿತ:
ಯಡಿಯೂರು ಕೆರೆ ಮುಂಭಾಗದ ರಸ್ತೆ ಬಳಿ 15 ಅಡಿ ಎತ್ತರದ ತಡೆಗೋಡೆ  ಕುಸಿದು ಬಿದ್ದಿದೆ. ಪರಿಣಾಮ 3 ಕಾರುಗಳು, ಆಟೋ ಸಂಪೂರ್ಣವಾಗಿ ಜಖಂಗೊಂಡಿದೆ. ದಕ್ಷಿಣ ವಲಯದ ಜಂಟಿ ಆಯುಕ್ತರು, ಮುಖ್ಯ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹೊಸದಾಗಿ ತಡೆಗೋಡೆ ನಿರ್ಮಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದರು.

ಇಂಟೆಲಿಜೆನ್ಸ್ ಕಚೇರಿಗೆ ನೀರು:
ನಿನ್ನೆ ರಾತ್ರಿಯ ಮಳೆಯಿಂದಾಗಿ ಶಾಂತಿನಗರದ ಇಂಟೆಲಿಜೆನ್ಸ್ ಕಚೇರಿಗೆ ನೀರು ನುಗ್ಗಿದೆ. ಪರಿಣಾಮ ಮಾಣಿಕ್ ಷಾ ಪರೇಡ್ ಮೈದಾನಕ್ಕೆ ಹೋಗಬೇಕಿದ್ದ ಬಾಂಬ್ ಪತ್ತೆಹಚ್ಚುವ ವಾಹನ ಕಚೇರಿಯಲ್ಲೆ ಸ್ಥಗಿತಗೊಂಡಿತು. ವಾಹನ ಪೂರ್ತಿ ನೀರು ತುಂಬಿದ್ದು ನೀರು ಹೊರಹಾಕಲು ಸಿಬ್ಬಂದಿ ಪರದಾಡುವಂತಾಗಿತ್ತು.

ಇದೇ ವೇಳೆ, ಬೆಂಗಳೂರಿನ ವಿವಿಧೆಡೆ ಮರಗಳು ಧರೆಗುರುಳಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ರಾಜಾಜಿನಗರ, ಮಲ್ಲೇಶ್ವರಂ, ಯಶವಂತಪುರ, ಮೆಜೆಸ್ಟಿಕ್, ಶಿವಾಜಿನಗರ, ಜಯನಗರ, ಕೋರಮಂಗಲ ಸೇರಿ ಹಲವೆಡೆ ಭಾರೀ ಮಳೆಯಾಯಿತು. ಜೆ.ಪಿ.ನಗರದಲ್ಲಿ ಮನೆಗಳಿಗೆ ಚರಂಡಿ ನೀರು ನುಗ್ಗಿ ಜನ ತೊಂದರೆಗೊಳಗಾದರು.

click me!