ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಲೈಂಗಿಕ ಶಕ್ತಿವರ್ಧಕ ಡ್ರಗ್ಸ್ ಮಾರಾಟ

By Web DeskFirst Published Aug 5, 2018, 8:27 AM IST
Highlights

ಇಲ್ಲಿ ವಿದ್ಯಾರ್ಥಿಗಳೇ ಡ್ರಗ್ಸ್ ದಂಧೆಕೋರರ ಮುಖ್ಯ ಟಾರ್ಗೆಟ್. ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು  ಗುರಿಯಾಗಿಸಿಕೊಂಡು ಡ್ರಗ್ಸ್ ದಂಧೆ ನಡೆಸಲಾಗುತ್ತಿದೆ. ವಿವಿಧ ಹೆಸರುಗಳ ಮೂಲಕ ಲೈಂಗಿಕ ಶಕ್ತಿವರ್ಧಕ ಡ್ರಗ್ಸ್ ಮಾರಾಟ ಮಾರಾಟ ಮಾಡಲಾಗುತ್ತದೆ. 

ಶ್ರೀಶೈಲ ಮಠದ

ಬೆಳಗಾವಿ : ಗೋವಾ ಮತ್ತು ಮಹಾರಾಷ್ಟ್ರದೊಂದಿಗೆ ಗಡಿ ಹಂಚಿಕೊಂಡಿರುವ ಬೆಳಗಾವಿ ಮೂಲಕ ರಾಜ್ಯಾದ್ಯಂತ ಡ್ರಗ್ಸ್ ಮಾಫಿಯಾ ಸಕ್ರಿಯವಾಗಿದ್ದು, ಗಡಿಭಾಗದಲ್ಲಿ ಮಾದಕ ವಸ್ತುಗಳ ಮಾರಾಟಕ್ಕೆ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಳ್ಳಲಾಗಿದೆ. ಹೀಗಾಗಿ ಗಾಂಜಾ, ಅಫೀಮು, ಹೆರಾಯಿನ್ ಮತ್ತಿತರ ಮಾದಕ ವಸ್ತುಗಳು ಸಲೀಸಾಗಿ ವಿದ್ಯಾರ್ಥಿಗಳ ಕೈಸೇರುತ್ತಿದ್ದು, ಪೋಷಕರು ತೀವ್ರ ಆತಂಕಪಡುವಂತಾಗಿದೆ. 

ವಿದ್ಯಾರ್ಥಿಗಳ ಕೈಗೆಟಕುವ ದರದಲ್ಲಿ ಗಾಂಜಾ ಪ್ಯಾಕೆಟ್ ತಯಾರಿಸುತ್ತಿರುವ ಏಜೆಂಟರು, ಮಾದಕ ವಸ್ತು ಮಾರಾಟಕ್ಕೆ ಯುವಕರು ಮತ್ತು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡಿದ್ದಾರೆ. ಕನಿಷ್ಠ 100 ರಿಂದ 1000 ಮೌಲ್ಯದ ಪ್ರತ್ಯೇಕ ಗಾಂಜಾ ಪ್ಯಾಕೆಟ್ ವಿದ್ಯಾರ್ಥಿಗಳ ಕೈಸೇರುತ್ತಿವೆ. ಕೂಲಿ ಕಾರ್ಮಿಕ ಯುವಕರನ್ನು ಸೆಳೆಯಲು ಇನ್ನಷ್ಟು ಅಡ್ಡ ಹೆಜ್ಜೆ ಇಟ್ಟಿರುವ ವ್ಯಾಪಾರಿಗಳು ಚಾಕೊಲೇಟ್, ಸಿಹಿ ವಸ್ತುಗಳ ಮಾದರಿಯಲ್ಲಿ ಮತ್ತು ಲೈಂಗಿಕಾಸಕ್ತಿ ಕೆರಳಿಸುವ ಮೀನಾರ್, ಸನನ್, ತರಂಗವಟಿ, ಸೂಪರ್ ಸ್ಟ್ರಾಂಗ್ ಪವರ್ ಹೆಸರಿನ ಬ್ರಾಂಡೆಡ್ ಮಾದರಿ ಪ್ಯಾಕೆಟ್‌ಗಳಲ್ಲೂ ಗಾಂಜಾ ಮಾರಾಟ ಮಾಡುತ್ತಿದ್ದಾರೆ. 

ಮಾದಕ ವಸ್ತುಗಳ ಬಳಕೆ ಹಿನ್ನೆಲೆಯಲ್ಲಿ ಕೆಲ ಶಾಲೆ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ಹೊರಹಾಕಲಾಗಿದೆ. ಯುವತಿ ಯರು ಮಾದಕ ವಸ್ತುಗಳ ದಾಸರಾಗಿರುವುದು ಕಳವಳಕಾರಿ ಸಂಗತಿಯಾಗಿದೆ. ಬೆಳಗಾವಿ ಜಿಲ್ಲೆ ಮೂರು ವಿಶ್ವವಿದ್ಯಾಲಯ (ಕೆಎಲ್‌ಇ ವಿವಿ ಸೇರಿದಂತೆ) ಹೊಂದಿದ್ದು, ಅನೇಕ ಶಿಕ್ಷಣ ಸಂಸ್ಥೆಗಳು ಇಲ್ಲಿವೆ. ಇದನ್ನೇ ತನ್ನ ಕರಾಳ ದಂಧೆಯ ಮೂಲವನ್ನಾಗಿಸಿಕೊಂಡಿರುವ ಡ್ರಗ್ಸ್ ಮಾಫಿಯಾ, ಈ ಭಾಗದಲ್ಲಿರುವ ಗ್ರಾಮೀಣರು ಮತ್ತು ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಕೊಂಡಿದೆ.

2015ರಿಂದ 2018 ರ ಜೂನ್‌ವರೆಗೆ ಎನ್‌ಡಿಪಿಎಸ್ ಕಾಯ್ದೆಯಡಿ ಬೆಳಗಾವಿ ನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 82 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ, 164  ಆರೋಪಿಗಳನ್ನು ಮತ್ತು ಜಿಲ್ಲಾ ಪೊಲೀಸ್ ಕಚೇರಿ ಘಟಕದಲ್ಲಿ 62 ಪ್ರಕರಣ ದಾಖಲಿಸಿ, 85 ಆರೋಪಿಗಳನ್ನು ಬಂಧಿಸಲಾಗಿದೆ. ಇದು ಈ ಭಾಗದಲ್ಲಿನ ಮಾದಕ ವಸ್ತು ದಂಧೆಯ ಕರಾಳ ಮುಖವನ್ನು ಎತ್ತಿ ತೋರುತ್ತಿದೆ. ಅಷ್ಟೇ ಅಲ್ಲದೇ, ಮಾದಕ ವಸ್ತು ಮಾರಾಟ ಜಾಲ ಮಧ್ಯಪ್ರದೇಶಕ್ಕೂ ಹಬ್ಬಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು.

ಸುಶಿಕ್ಷಿತ ಎನಿಸಿಕೊಂಡಿರುವ ಎಂಜಿನಿಯರಿಂಗ್, ಮೆಡಿಕಲ್, ಮಾಸ್ಟರ್ ಡಿಗ್ರಿ ವಿದ್ಯಾರ್ಥಿಗಳು ಔಷಧಗಳನ್ನೇ ಬಳಕೆ ಮಾಡಿ ಅಮಲು  ಏರಿಸಿಕೊಳ್ಳುತ್ತಿ ರುವುದು ಸದ್ದಿಲ್ಲದೆ ನಡೆಯುತ್ತಿದೆ. ಹೋಮ್‌ಸ್ಟೆ ಮತ್ತು ಪ್ರತ್ಯೇಕ ರೂಂಗಳಲ್ಲಿ ವಾಸಿಸುವ ವಿದ್ಯಾರ್ಥಿ ಗಳು ಅಮಲಿಗಾಗಿ ಅತ್ಯಂತ ಸರಳ ಮಾರ್ಗ ಹುಡುಕಿಕೊಂಡಿದ್ದು, ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅರಿವಳಿಕೆಯಾಗಿ ಬಳಸುವ ಕೊಕೇನ್, ಪೊಟವಿನ್ ಇಂಜೆಕ್ಷನ್‌ಗಳನ್ನು ಬಳಸುತ್ತಿದ್ದಾರೆ ಎಂಬ ಆತಂಕಕಾರಿ ಮಾಹಿತಿ ತಿಳಿದು ಬಂದಿದೆ.

ಪಲ್ಲಂಗ ತೋಡ್ ಪಾನ್: ಕೊಡೆನ್ ಫಾಸ್ಪೇಟ್‌ನಿಂದ ಕೂಡಿದ ಅಲ್ಫಾಜೊಲಾನ್ ನಿದ್ರೆ ಮಾತ್ರೆ ಮತ್ತು ಕೆಮ್ಮಿಗೆ ಬಳಸುವ ಕೊರೆಕ್ಸ್ ಸಿರಪ್ ಅನ್ನೂ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಬಳಸಿ ಅಮಲಿನಲ್ಲಿ ತೇಲುತ್ತಿರುವುದು ಸಾಮಾನ್ಯವಾಗುತ್ತಿದೆ. ಇತ್ತೀಚೆಗಷ್ಟೆ ಮಾರುಕಟ್ಟೆಗೆ ಕಾಲಿಟ್ಟಿರುವ ಇ-ಸಿಗರೆಟ್‌ಗಳು ಶಾಲೆ, ಕಾಲೇಜು ಪ್ರದೇಶಗಳ ವ್ಯಾಪ್ತಿಯಲ್ಲಿ ಸದ್ದಿಲ್ಲದೆ ಮಾರಾಟಗೊಳ್ಳುತ್ತಿವೆ. ಲೈಂಗಿಕಾಸಕ್ತಿ ಹೆಚ್ಚಿಸುವ ವಯಾಗ್ರ ಮಾತ್ರೆಯಿಂದ ಕೂಡಿದ ಪಲ್ಲಂಗ ತೋಡ್ ಹೆಸರಿನ ಪಾನ್ ಬೀಡಾಗಳಿಗೂ ಯುವಕರು, ವಿದ್ಯಾರ್ಥಿಗಳು ಮುಗಿಬೀಳುತ್ತಿದ್ದಾರೆ. 

ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಜಿಲ್ಲೆಯ ಅಥಣಿ, ರಾಯಬಾಗ, ಚಿಕ್ಕೋಡಿ ತಾಲೂಕಿನಲ್ಲಿ ಗಾಂಜಾ ಹುಲುಸಾಗಿ ಬೆಳೆಯುತ್ತಿದ್ದು, ಅಲ್ಲಿನ ಗಾಂಜಾ ಮಹಾರಾಷ್ಟ್ರಕ್ಕೆ ಹೋಗಿ ಪ್ಯಾಕೆಟ್ ರೂಪದಲ್ಲಿ ಮರಳಿ ರಾಜ್ಯ ಪ್ರವೇಶಿಸುತ್ತಿದೆ. ಮಹಾರಾಷ್ಟ್ರದ ಗಡಿ ಭಾಗದಿಂದಲೇ ಲೈಂಗಿಕಾಸಕ್ತಿ ಕೆರಳಿಸುವ ಔಷಧಗಳು ಎಗ್ಗಿಲ್ಲದೆ ಕರ್ನಾಟಕ ಪ್ರವೇಶಿಸುತ್ತಿವೆ. ಅಕ್ರಮ ಔಷಧ ಮಾರಾಟದಲ್ಲಿ ತೊಡಗಿದ್ದವರ ಮೇಲೆ ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಹಾರೂಗೇರಿ, ರಾಯಬಾಗ, ಅಥಣಿ, ಕುಡಚಿ ವ್ಯಾಪ್ತಿಯಲ್ಲಿ ಹತ್ತಾರು ಪ್ರಕರಣ ದಾಖಲಿಸಿದ್ದಾರೆ.

ಅರವಳಿಕೆ ಮತ್ತು ನಿದ್ರೆ ಮಾತ್ರೆಗಳನ್ನು ವೈದ್ಯರ ಸಲಹೆ ಇಲ್ಲದೆ ಮಾರಾಟ ಮಾಡುವಂತಿಲ್ಲ. ವಯಾಗ್ರ ಮಾತ್ರೆಯನ್ನು ಪಾನ್‌ನಲ್ಲಿ ಬಳಸುವುದೂ ಅಕ್ರಮ. ಆದಾಗ್ಯೂ ಎಗ್ಗಿಲ್ಲದೆ ಮಾದಕ ವಸ್ತುಗಳ ಮಾರಾಟ ದಂಧೆ ನಡೆಯುತ್ತಿದ್ದು, ಇದು ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದೆ.

click me!