ಮನ್ನಾ ಬಳಿಕವೂ ರೈತರಿಂದ ಸಾಲ ವಸೂಲಿ

By Web DeskFirst Published Aug 5, 2018, 8:03 AM IST
Highlights

ರೈತರ 2 ಲಕ್ಷದ ವರೆಗಿನ ಸುಸ್ತಿಸಾಲ,  1 ಲಕ್ಷದ ವರೆಗಿನ ಚಾಲ್ತಿ ಸಾಲ ಮನ್ನಾ ಮಾಡಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರೇ ಘೋಷಣೆ ಮಾಡಿದ್ದರೂ ಬ್ಯಾಂಕ್‌ಗಳು ಮಾತ್ರ ಅನ್ನದಾತನಿಂದ ಸಾಲ ವಸೂಲಾತಿ ನಿಲ್ಲಿಸಿಲ್ಲ.

ಬೆಂಗಳೂರು :  ರೈತರ 2 ಲಕ್ಷದ ವರೆಗಿನ ಸುಸ್ತಿಸಾಲ,  1 ಲಕ್ಷದ ವರೆಗಿನ ಚಾಲ್ತಿ ಸಾಲ ಮನ್ನಾ ಮಾಡಿ ಮುಖ್ಯಮಂತ್ರಿ ಎಚ್ .ಡಿ.ಕುಮಾರಸ್ವಾಮಿ ಅವರೇ ಘೋಷಣೆ ಮಾಡಿದ್ದರೂ ಬ್ಯಾಂಕ್‌ಗಳು ಮಾತ್ರ ಅನ್ನದಾತನಿಂದ ಸಾಲ ವಸೂಲಾತಿ ನಿಲ್ಲಿಸಿಲ್ಲ. ಪಿಂಚಣಿ, ಪ್ರೋತ್ಸಾಹಧನದ ಬೆನ್ನಲ್ಲೇ ಈಗ ರೈತರ ಉಳಿತಾಯ ಖಾತೆಗೆ ಜಮೆಯಾಗುವ ಗೊಬ್ಬರದ ಹಣವನ್ನೂ ಸಾಲಕ್ಕೆ ಜಮೆ ಮಾಡಿಕೊಳ್ಳುವ ಕೆಲಸಕ್ಕೆ ಬ್ಯಾಂಕ್‌ಗಳು ಕೈಹಾಕಿವೆ. ಹೇಗಾದರೂ ಸಾಲ ವಸೂಲಿ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿರುವ ಬ್ಯಾಂಕುಗಳು ರೈತರ ಖಾತೆಗೆ ಜಮೆಯಾಗುವ ಸಹಾಯಧನ, ಪ್ರೋತ್ಸಾಹಧನ, ವಿಧವಾ, ವೃದ್ಧಾಪ್ಯ ವೇತನವನ್ನೂ ಬಿಡದೆ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿವೆ. 

ಈ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಈಗ ಕಬ್ಬು ಬೆಳೆಗಾರರಿಗೆ ಗೊಬ್ಬರಕ್ಕಾಗಿ ಸರ್ಕಾರೆ ಕಾರ್ಖಾನೆ ನೀಡಿದ ಮುಂಗಡ ಹಣವನ್ನೂ ಸಾಲಕ್ಕೆ ಹೊಂದಾಣಿಕೆ ಮಾಡಿಕೊಳ್ಳಲು ಆರಂಭಿಸಿದೆ. ಬ್ಯಾಂಕ್‌ಗಳ ಈ ಕ್ರಮ ದಿಂದ ಕಂಗಾಲಾಗಿರುವ ರೈತರು ಗೊಬ್ಬರಕ್ಕೆ ಹಣ ಹೊಂದಿಸುವುದು ಹೇಗೆನ್ನುವ ಗೊಂದಲಕ್ಕೆ ಬಿದ್ದಿದ್ದಾರೆ. 

ಸಂಕಷ್ಟ ನೋಡಿ ಕೊಟ್ಟದ್ದು: ರೈತರು ಸಂಕಷ್ಟದಲ್ಲಿರು ವುದನ್ನು ನೋಡಿ, ಮುಂಡರಗಿಯ ಸಕ್ಕರೆ ಕಾರ್ಖಾನೆಯು ಕಬ್ಬು ಬೆಳೆಯುವ ರೈತರಿಗೆ ಮುಂಗಡ ಹಣ ಪಾವತಿಸಲು ನಿರ್ಧರಿಸಿದೆ. ಅದರ ಭಾಗವಾಗಿ ಪ್ರತಿ ಎಕರೆಗೆ ಗೊಬ್ಬರಕ್ಕೆಂದು 6 ಸಾವಿರ ಸಾಲದ ರೂಪದಲ್ಲಿ ನೀಡುತ್ತಿದೆ. ಈ ಹಣ ರೈತರ ಖಾತೆಗೆ ನೇರವಾಗಿ ಜಮೆಯಾಗುತ್ತಿದೆ. ಈ ಕುರಿತು ರೈತರು ಬ್ಯಾಂಕಿಗೆ ಹೋಗಿ ಕೇಳಿದರೆ ಕಾರ್ಖಾನೆ ನೀಡಿದ ಹಣವೆಲ್ಲವೂ ಸಾಲಕ್ಕೆ ಜಮೆಯಾಗಿರುವ ಸಂಗತಿ ಬೆಳಕಿಗೆ ಬಂದಿದೆ.

ಹ್ಯಾಟಿ ಗ್ರಾಮದ ನಿಂಗಪ್ಪ ಪೂಜಾರ ಅವರು ನಾಲ್ಕು ಎಕರೆ ಕಬ್ಬು ಹಾಕಿದ್ದಾರೆ. ಈಗ ತುರ್ತಾಗಿ ಗೊಬ್ಬರ ಹಾಕಬೇಕಾಗಿದೆ. ಈ ವಿಷಯವನ್ನು ಸಕ್ಕರೆ ಕಾರ್ಖಾನೆ ಯವರಿಗೆ ತಿಳಿಸಿದ್ದಾರೆ. ಅವರು ರಸಗೊಬ್ಬರಕ್ಕೆಂದು ಎಕರೆಗೆ 6 ಸಾವಿರ ರುಪಾಯಿಯಂತೆ 24 ಸಾವಿರ ರುಪಾಯಿಯನ್ನು ಇವರ ಕೆನರಾ ಬ್ಯಾಂಕ್ ಖಾತೆಗೆ ಜಮೆ ಮಾಡಿದ್ದಾರೆ. ಖಾತೆಗೆ ಹಣ ಜಮೆಯಾಗಿರುವ ಮಾಹಿತಿ ತಿಳಿದು ಬ್ಯಾಂಕಿಗೆ ಹೋದರೆ ಬ್ಯಾಂಕ್‌ನವರು ಅದನ್ನು ಕೊಡಲು ಸಾಧ್ಯವಿಲ್ಲ. ನೀವು ಸಾಲ ಮಾಡಿರುವುದರಿಂದ ಅದಕ್ಕೆ ಜಮೆ ಮಾಡಿಕೊಳ್ಳುತ್ತೇವೆ ಎಂದು ಹೇಳಿ ನಿಂಗಪ್ಪನ್ನು ವಾಪಸು  ಕಳುಹಿಸಿದ್ದಾರೆ. ಎಷ್ಟೇ ಮನವಿ ಮಾಡಿಕೊಂಡರೂ, ಸಮ್ಮಿಶ್ರ ಸರ್ಕಾರ ಕೃಷಿ ಸಾಲ ಮನ್ನಾ ಮಾಡಿದೆ ಎಂದು ಹೇಳಿದರೂ ಬ್ಯಾಂಕಿನವರು ಕೇಳಿಕೊಳ್ಳುವ  ಸ್ಥಿತಿಯಲ್ಲಿಲ್ಲ. 

ಬೆಳೆ ಪರಿಹಾರವೂ ಸಾಲಕ್ಕೆ: ಗೊಬ್ಬರದ ಹಣವಷ್ಟೆ ಅಲ್ಲ, ಬೆಳೆ ವಿಮಾ ಪರಿಹಾರದ ಹಣವನ್ನೂ ಬ್ಯಾಂಕಿನವರು ಸಾಲಕ್ಕೆ ಜಮೆ  ಮಾಡಿಕೊಂಡಿದ್ದಾರೆ. ಇನ್ನು ರೈತ ಹನುಮಗೌಡ ಎನ್ನುವವರಿಗೆ ಹಾಲಿನ ಸಹಾಯಧನ 2000 ಬಂದಿದ್ದು, ಅದನ್ನೂ ಬ್ಯಾಂಕ್ ನವರು ಸಾಲಕ್ಕೆ ಜಮೆ ಮಾಡಿಕೊಂಡಿದ್ದಾರಂತೆ. ಸರ್ಕಾರ ಈ ಹಿಂದೆಯೇ ರೈತರಿಗೆ ನೀಡುವ ಸಹಾಯಧನ ಮತ್ತು ಮತ್ತಿತರರ  ಪ್ರೋತ್ಸಾಹಧನವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುವಂತಿಲ್ಲ ಎಂದು ಆದೇಶ ಮಾಡಿತ್ತು. ಅಲ್ಲದೆ ಖಾತೆದಾರರ ಅನುಮತಿ ಇಲ್ಲದೆ ಅವರ ಎಸ್‌ಬಿ ಖಾತೆಯ ಹಣವನ್ನು ಅವರದೇ ಸಾಲಕ್ಕೆ ಜಮೆ ಮಾಡಿಕೊಳ್ಳುವುದು ಕೂಡಾ ಕಾನೂನುಬಾಹಿರ. ಆದರೆ ಇದೆಲ್ಲವನ್ನು ಬ್ಯಾಂಕಿನವರು ಲೆಕ್ಕಕ್ಕೇ ತೆಗೆದುಕೊಳ್ಳುತ್ತಿಲ್ಲ.

ಬಾರದ ಆದೇಶವೇ ಅಸ್ತ್ರ: ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು ಸಾಲ ಮನ್ನಾ ಘೋಷಣೆ ಮಾಡಿದ್ದಾರಾ ದರೂ ಈ ಕುರಿತ ಆದೇಶದ ಪ್ರತಿ ಬ್ಯಾಂಕಿಗೆ ಬಂದಿಲ್ಲ. ಇದನ್ನೇ ದಾಳವಾಗಿಟ್ಟುಕೊಂಡು ಬ್ಯಾಂಕಿನವರು ರೈತರ ಸಾಲದ ವಸೂಲಾತಿ ಚುರುಕುಗೊಳಿಸಿದ್ದಾರೆ. ಬೇರೆ ಬೇರೆ ಮೂಲದಿಂದ ರೈತರ ಖಾತೆಗೆ ಜಮೆಯಾಗುವ ಹಣವನ್ನು ಅನುಮತಿ ಪಡೆಯದೆ ಸಾಲದ ಖಾತೆಗೆ ಜಮೆ ಮಾಡಿಕೊಳ್ಳುತ್ತಿದ್ದಾರೆ.

ನಿರ್ದೇಶನ ನೀಡಲು ಆಗ್ರಹ: ಸಾಲ ಮನ್ನಾಗೆ ಸಂಬಂಧಿಸಿ ಕುಮಾರಸ್ವಾಮಿ ಕೂಡಲೇ ಬ್ಯಾಂಕಿಗೆ ಸುತ್ತೋಲೆ  ಕಳುಹಿಸಬೇಕು. ರೈತರ ಸಾಲ ಮನ್ನಾ ಘೋಷಣೆ ಯಾಗಿರುವುದರಿಂದ ಸಾಲ ವಸೂಲಾತಿ ಮಾಡದಂತೆ ಮತ್ತು ಅವರ ಖಾತೆಗೆ ಜಮೆಯಾಗುವ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಬೇಕು ಎನ್ನುವುದು ರೈತರ ಆಗ್ರಹ. 

click me!