
ಮಹಾರಾಷ್ಟ್ರ(ನ.11): ಈ ಕಾರನ್ನು ನೋಡಿದರೆ ಯಾವುದೋ ಮದುವೆ ದಿಬ್ಬಣಕ್ಕಾಗಿ ಸಿಂಗಾರಗೊಂಡಿದೆ ಎಂಬ ಭಾವನೆ ಮೂಡುತ್ತದೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಕಾರಿನ ಮೇಲೆ ಕೆಂಪು ದೀಪವಿರುವುದು ಕಂಡು ಬರುತ್ತದೆ.ಹಾಗಾದರೆ ಇದು ವಿಐಪಿ ಕಾರು ಅಂತ ನಿರ್ಧರಿಸುತ್ತೇವೆ ಅಂತದುಕೊಳ್ಳುವಷ್ಟರಲ್ಲಿ ಡ್ರೈವರ್ ಯುನಿಫಾರ್ಮ್ ಧರಿಸಿದ ವ್ಯಕ್ತಿಯೊಬ್ಬನನ್ನು ಓರ್ವ ವಿಐಪಿಗೆ ಸತ್ಕರಿಸುವ ರೀತಿಯಲ್ಲಿ ಗೌರವಯುತವಾಗಿ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳಿಸುತ್ತಾರೆ.
ಇದೆಲ್ಲಾ ಕಂಡು ಒಂದೆಡೆ ಆಶ್ಚರ್ಯವಾಗುತ್ತದೆಯಾದರೂ ಮತ್ತೊಂದೆಡೆ ಸರ್ಕಾರಿ ಕಾರನ್ನು ದುರುಪಯೋಗಪಡಿಸುತ್ತಿದ್ದಾರೆ ಎಂಬ ಯೋಚನೆ ನಿಮ್ಮ ಮನದಲ್ಲಿ ಮೂಡುತ್ತದೆ. ಆದರೆ ಮಹಾರಾಷ್ಟ್ರದಲ್ಲಿ ಇಂತಹುದೊಂದು ಅಚ್ಚರಿಯುತ ಘಟನೆ ನಡೆದಿದ್ದರೂ ಕಾರನ್ನು ಮಾತ್ರ ತಪ್ಪು ಕಾರ್ಯಕ್ಕೆ ಬಳಸಿಕೊಂಡಿಲ್ಲ. ಅಲ್ಲಿ ನಡೆದ ಘಟನೆಯ ವಿವರ ನಿಜಕ್ಕೂ ನಮ್ಮ ಹೃದಯ ಮುಟ್ಟುವಂತಿದೆ.
ವಾಸ್ತವವಾಗಿ ಡ್ರೈವರ್ ತೊಡುವ ಬಿಳಿಬಟ್ಟೆ ತೊಟ್ಟು ಹಿಂದಿನ ಸೀಟಿನಲ್ಲಿ ಕುಳಿತ 'ವಿಐಪಿ'ಯ ಹೆರು ದಿಗಂಬರ್ ಥಾಕ್. ಈತ 35 ವರ್ಷಗಳಿಂದ ಮಹಾರಾಷ್ಟ್ರದ ಅಕೋಲಾ ಜಿಲ್ಲೆಗೆ ನೇಮಿಸಲ್ಪಟ್ಟ ಕಲೆಕ್ಟರ್'ಗಳ ಕಾರು ಚಲಾಯಿಸುತ್ತಿದ್ದ. ಈ ಘಟನೆಯಲ್ಲಿ ಮನಮುಟ್ಟುವ ವಿಚಾರವೆಂದರೆ ಈ ಕಾರಿನ ಡ್ರೈವರ್ ಸೀಟಿನಲ್ಲಿ ಕುಳಿತು ಕಾರು ಚಲಾಯಿಸುತ್ತಿರುವವರು ಜಿಲ್ಲೆಯ ಕಲೆಕ್ಟರ್ ಸಾಹೇಬ್ರು ಜಿ. ಶ್ರೀಕಾಂತ್. ಬೀಳ್ಕೊಡುಗೆಯ ಸಂದರ್ಭದಲ್ಲಿ ಈ ಕಲೆಕ್ಟರ್ ತನ್ನ ಡ್ರೈವರ್'ಗೆ ಮರೆಯಲಾಗದ ಉಡುಗೊರೆಯನ್ನು ನೀಡಲು ಯೋಚಿಸಿದ್ದು, ಇದಕ್ಕಾಗಿ ತಾನೇ ಖುದ್ದಾಗಿ ಕಾರನ್ನು ಢ್ರೈವ್ ಮಾಡಿ ಬಳಿಕ ಕಚೇರಿಯಲ್ಲಿ ವಿದಾಯಕೂಟವನ್ನೂ ಆಯೋಜಿಸಿದ್ದಾರೆ.
ಸರ್ಕಾರಿ ಢ್ರೈವರ್ ಆಗಿದ್ದ ದಿಗಂಬರ್ ಈವರೆಗೆ ಸುಮಾರು 18 ಕಲೆಕ್ಟರ್'ಗಳನ್ನು ಕಚೇರಿಗೆ ತಲುಪಿಸಿ ಸೇವೆ ಸಲ್ಲಿಸಿದ್ದಾರೆ. ಈ ಕುರಿತಾಗಿ ಮಾತನಾಡಿದ ಜಿ. ಶ್ರೀಕಾಂತ್ 'ಸುಮಾರು 35 ವರ್ಷಗಳ ಕಾಲ ಇವರು ರಾಜ್ಯಕ್ಕಾಗಿ ಸೇವೆ ಸಲ್ಲಿಸಿದ್ದಲ್ಲದೆ, ಪ್ರತಿದಿನ ಕಲೆಕ್ಟರ್'ಗಳನ್ನು ಸುರಕ್ಷಿತವಾಗಿ ಕಚೇರಿಗೆ ತಲುಪಿಸಿದ್ದಾರೆ. ಹೀಗಾಗಿ ನಾನು ಇವರ ವಿದಾಯಕೂಟವನ್ನು ಯಾವತ್ತೂ ವಿಭಿನ್ನವಾಗಿ ಆಯೋಜಿಸಿ ಇದರೊಂದಿಗೆ ಮೂಲಕ ಅವರು ಈವರಗೆ ನೀಡಿದ ಸೇವೆಗೆ ಧನ್ಯವಾದವನ್ನೂ ಸೂಚಿಸಬೇಕಿತ್ತು' ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.