ಡಾ. ವಿಷ್ಣು ಹೆಸರಲ್ಲಿ ಐಎಎಸ್, ಕೆಎಎಸ್ ಉಚಿತ ತರಬೇತಿ, ಕರೆ ಮಾಡಿ

By Web DeskFirst Published Oct 30, 2018, 6:26 PM IST
Highlights

ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳನ್ನು ಕೈಗೊಳ್ಳಲು ಇಚ್ಚಿಸುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿಯೊಂದಿದೆ. ಸಾಹಸಸಿಂಹ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಕೋಚಿಂಗ್ ನೀಡಲಾಗುತ್ತದೆ. ಏನಿದು ವಿವರ...

ಬೆಂಗಳೂರು[ಅ.30]  ಡಾ.ವಿಷ್ಣುವರ್ಧನ ಅವರ ಹೆಸರಿನಲ್ಲಿ ‘ಹೊಂಬಿಸಿಲು’ ಎಂಬ ಮಹತ್ವಪೂರ್ಣ ಯೋಜನೆಯನ್ನು ಡಾ.ವಿಷ್ಣು ಸೇನಾ ಸಮಿತಿ  ಹಮ್ಮಿಕೊಂಡಿದೆ.

ಐಎಎಸ್ ಮತ್ತು ಐಪಿಎಸ್ ಪರೀಕ್ಷೆಗಳನ್ನು ಕೈಗೊಳ್ಳಲು ಇಚ್ಚಿಸುವ ಪ್ರತಿಭಾವಂತ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಜವಬ್ದಾರಿಯನ್ನು ವಹಿಸಿಕೊಳ್ಳುವ ಮಹತ್ವದ ಹೊಂಬಿಸಿಲು ಎಂಬ ಯೋಜನೆಯನ್ನು ಡಾ.ವಿಷ್ಣು ಸೇನಾ ಸಮಿತಿ ಆರಂಭಿಸಿದೆ. ಈ ಯೋಜನೆ ಅಡಿಯಲ್ಲಿ ಪ್ರತಿ ವರ್ಷ ಐಎಎಸ್ ಮತ್ತು ಕೆಎಎಸ್ ಓದಲಿಚ್ಚಿಸುವ ಸುಮಾರು 25 ಬಡ ವಿದ್ಯಾರ್ಥಿಗಳ ಹೊಣೆಯನ್ನು ಡಾ.ವಿಷ್ಣು ಸೇನಾ ಸಮಿತಿ ಹೊರಲಿದೆ.

ಯೋಜನೆಯನ್ನು ನಾಡಿನ ಪ್ರಖ್ಯಾತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಹಯೋಗದೊಂದಿಗೆ ಕಾರ್ಯರೂಪಕ್ಕೆ ತರಲಾಗುತ್ತಿದೆ. ಈ 25 ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ವಿಷ್ಣು ಸೇನಾ ಸಮಿತಿಯ ಅಧ್ಯಕ್ಷರಾದ ವೀರಕಪುತ್ರ ಶ್ರೀನಿವಾಸ ಅವರು ವಹಿಸಿಕೊಳ್ಳಲಿದ್ದಾರೆ. ಈ ಯೋಜನೆಯ ಸಮನ್ವಯಕಾರರಾಗಿ ಡಾ.ವಿಷ್ಣು ಸೇನಾ ಸಮಿತಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಅಧ್ಯಕ್ಷರೂ, ವಕೀಲರೂ ಆದ ಎಂ.ಎನ್. ಶಶಿವರ್ಧನ್ ಮತ್ತು ಹಿರೇಹಡಗಲಿ ವಿಷ್ಣು ಸೇನಾ ಸಮಿತಿ ಪದಾಧಿಕಾರಿಯಾದ ಸುನೀಲ್ ಕೋಟಗಿ ಅವರು ವಹಿಸಿಕೊಳ್ಳಲಿದ್ದಾರೆ.

ಡಾ.ವಿಷ್ಣು ಅವರ ಹೆಸರಿನಲ್ಲಿ ಸಾರ್ಥಕ ಕೆಲಸಗಳಾಗಬೇಕು ಮತ್ತು ಕನ್ನಡಿಗರು ಅವಕಾಶ ವಂಚಿತರಾಗಬಾರದು ಎಂಬ ಕಾರಣಕ್ಕೆ ಈ ಯೋಜನೆಯನ್ನು ಆರಂಭಿಸುತ್ತಿದ್ದೇವೆ. ನಮಗೆ ಸಾಧನ ಕೋಚಿಂಗ್ ಸೆಂಟರ್ ಸಹಯೋಗ ನೀಡುತ್ತಿದೆ. ಡಾ.ಜ್ಯೋತಿ ಎಂಬುವರು ನಮ್ಮ‌ ಉದ್ದೇಶಕ್ಕೆ ಬೆನ್ನೆಲುಬಾಗಿದ್ದಾರೆ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.

ಕರೆ ಮಾಡುವ ವಿದ್ಯಾರ್ಥಿಗೆ ಸಾಧಿಸುವ ಹಸಿವಿರಬೇಕೇ ವಿನಃ, ಉಚಿತವಾಗಿರುವ ಕಾರಣಕ್ಕೆ ಟ್ರೈ ಮಾಡಿ ನೋಡುತ್ತೇನೆ ಎಂಬ ಮನೋಭಾವ ಇರಬಾರದು. ನೂರು ಕೆಟ್ಟ ವಿದ್ಯಾರ್ಥಿಗಳು ಆಯ್ಕೆಯಾಗದಿದ್ದರೂ ಪರವಾಗಿಲ್ಲ ಆದ್ರೆ ಒಬ್ಬೇ ಒಬ್ಬ ಒಳ್ಳೆಯ ವಿದ್ಯಾರ್ಥಿಗೆ ಮೋಸವಾಗದಿರಲಿ. ಆ ಮೂಲಕ ವಿದ್ಯಾರ್ಥಿ ಬದುಕಲ್ಲಿ ಹೊಂಬಿಸಿಲು ಮೂಡಲಿ. ಈ ಯೋಜನೆ ಅಡಿಯಲ್ಲಿ ಆಯ್ಕೆಯಾಗಬಯಸುವವರು ಕೂಡಲೇ ನಮಗೆ ಕರೆಮಾಡಿ ಎಂಬ ಸ್ಪಷ್ಟ ಕರೆಯನ್ನು ಸಂರ್ಸತೆ ನೀಡಿದೆ. ಆಸಕ್ತರು 8880009995, 9886495044ಕ್ಕೆ  ಕರೆ ಮಾಡಬಹುದು. ನವೆಂಬರ್ 4, 2018ರೊಳಗೆ ಸಂಪರ್ಕ ಮಾಡಲು ಕೋರಲಾಗಿದೆ.

 

 

 

 

click me!