ಪ್ರವಾಹಕ್ಕೆ ನೀವು ನೀಡಿದ ದೇಣಿಗೆ ವ್ಯಯವಾಗದಿರಲು ಹೀಗೆ ಮಾಡಿ

By Web DeskFirst Published Aug 22, 2018, 11:19 AM IST
Highlights

ಕಂಡ ಕಂಡ ಕಡೆ ಪ್ರವಾಹದ ಹೆಸರಿನಲ್ಲಿ ಹಣ ಸಂಗ್ರಹ ಮಾಡಲಾಗುತ್ತಿದ್ದು, ಈ ರೀತಿಯಾಗಿ ಸಂಗ್ರಹ ಮಾಡುವ ಹಣ ದುರ್ಬಳಕೆಯಾಗುವ ಸಾಧ್ಯತೆ ಇದ್ದು ಆದ್ದರಿಂದ ಸಿಎಂ ಪರಿಹಾರ ನಿಧಿಗೆ ಹಣ ನೀಡುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರು :  ಪ್ರವಾಹಪೀಡಿತ ಕೊಡಗು ಜಿಲ್ಲೆಯ ಸಂತ್ರಸ್ತರ ನೆರವಿನ ಹೆಸರಲ್ಲಿ ನಿಧಿ ಸಂಗ್ರಹಿಸಿ ವಂಚಿಸುವಂತಹ ಸಂಘಟನೆಗಳಿಗೆ ದೇಣಿಗೆ ನೀಡುವ ಬದಲು ಸಾರ್ವಜನಿಕರು ನೇರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಬೇಕು ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಮಂಗಳವಾರ ವಿವಿಧ ಸಂಘಟನೆಗಳು, ವ್ಯಕ್ತಿಗಳು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ ದೇಣಿಗೆ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂತ್ರಸ್ತರ ನೆರವು ನೀಡುವುದಾಗಿ ಹೇಳಿ ಕೆಲವರು ಸಾರ್ವಜನಿಕರಿಂದ ಹಣ ಪಡೆದುಕೊಳ್ಳುತ್ತಿರುವ ಮಾಹಿತಿ ಲಭ್ಯವಾಗಿದೆ. ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ನೆರವು ಹೆಸರಲ್ಲಿ ನಿಧಿ ಸಂಗ್ರಹಿಸುವಂತಹ ಸಂಘಟನೆಗಳ ಬಗ್ಗೆ ಜನರು ಜಾಗೃತವಾಗಿರಬೇಕು. ಸಂಘಟನೆಗಳ ಪೂರ್ಣ ಮಾಹಿತಿ ಇದ್ದಲ್ಲಿ ಮಾತ್ರ ಸಹಾಯ ಹಸ್ತ ಚಾಚಬೇಕು. ಒಂದು ವೇಳೆ ಸಂಘಟನೆ ಬಗ್ಗೆ ಮಾಹಿತಿ ಇಲ್ಲದಿದ್ದರೆ ಅವುಗಳಿಗೆ ನೀಡುವ ಬದಲು ನೇರವಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಬೇಕು ಎಂದು ಸಲಹೆ ನೀಡಿದರು.

Latest Videos

ನಗದು ನೀಡುವುದಕ್ಕಿಂತ ಚೆಕ್‌ ಮೂಲಕ ಪರಿಹಾರ ನೀಡುವುದು ಸೂಕ್ತ. ನಗದು ಮೊತ್ತವು ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಹೇಳಿದ ಅವರು, ಕೇರಳದ ಮಾದರಿಯಲ್ಲಿ ದೇಣಿಗೆ ಸಂಗ್ರಹಕ್ಕೆ ಆನ್‌ಲೈನ್‌ ವ್ಯವಸ್ಥೆ ಆರಂಭಿಸಲಾಗಿದೆ. ಆನ್‌ಲೈನ್‌ ಮೂಲಕ 79 ಲಕ್ಷ ರು. ದೇಣಿಗೆ ಬಂದಿದ್ದು, ಆನ್‌ಲೈನ್‌ ಮೂಲಕ ದೇಣಿಗೆ ಕೊಡುವವರಿಗೆ ಮೇಲ್‌ನಿಂದ ರಸೀದಿ ಕಳುಹಿಸಿಕೊಡಲಾಗುತ್ತಿದೆ ಎಂದರು.

ವಿಪರೀತ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ ಪರಿಣಾಮ ಜನರು ಎಲ್ಲವನ್ನು ತೊರೆದು ಪರಿಹಾರ ಕೇಂದ್ರಗಳಿಗೆ ತೆರಳಿದ್ದಾರೆ. ಅಂತಹ ಮನೆಗಳಿಗೆ ದುಷ್ಕರ್ಮಿಗಳು ನುಗ್ಗಿ ದರೋಡೆ ನಡೆಸುತ್ತಿರುವ ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚನೆ ನೀಡಲಾಗಿದೆ. ಪ್ರತಿ ಮನೆಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಒದಗಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಕಳ್ಳತನ ಪ್ರಕರಣಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕೊಡಗು ಜಿಲ್ಲೆಯಲ್ಲಿ ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡುತ್ತಿದ್ದಾರೆ. ಹೆಚ್ಚುವರಿಯಾಗಿ ಜಿಲ್ಲಾಧಿಕಾರಿ ಜಗದೀಶ್‌ ಅವರನ್ನು ಸಹ ನಿಯೋಜಿಸಲಾಗಿದೆ. ಒಂದು ವಾರದಿಂದ ಕಡಿತಗೊಂಡಿದ್ದ ವಿದ್ಯುತ್‌ ಸಂಪರ್ಕವನ್ನು ಸರಿಪಡಿಸಲಾಗಿದೆ. ಮಳೆ ನಿಂತ ಬಳಿಕ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹಿನ್ನೆಲೆಯಲ್ಲಿ ನಿಂತ ನೀರನ್ನು ತೆರವುಗೊಳಿಸಿ ಕ್ರಿಮಿನಾಶಕಗಳನ್ನು ಸಿಂಪಡಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಸಾಂಕ್ರಾಮಿಕ ರೋಗ ಹರಡದಂತೆ ಮುನ್ನಚ್ಚರಿಕೆ ಕ್ರಮ ವಹಿಸಲಾಗಿದೆ.

ಮಳೆಯ ಅನಾಹುತದಿಂದ 7 ಮಂದಿ ಸಾವನ್ನಪ್ಪಿರುವುದು ಅಧಿಕೃತ ಮಾಹಿತಿ ಇದೆ. ನಾಲ್ವರು ನಾಪತ್ತೆಯಾಗಿದ್ದಾರೆ. ಉಳಿದಂತೆ ಯಾವುದೇ ಪ್ರಾಣ ಹಾನಿಯ ಬಗ್ಗೆ ಮಾಹಿತಿ ಇಲ್ಲ. ಸರ್ಕಾರದಿಂದ ವಿಶೇಷ ಸಹಾಯವಾಣಿ ಸ್ಥಾಪಿಸಲಾಗಿದೆ. ಮಾಧ್ಯಮಗಳು ಅನಗತ್ಯವಾಗಿ ವದಂತಿಗಳನ್ನು ಹಬ್ಬಿಸಿ ಆತಂಕ ಮೂಡಿಸಬಾರದು. ಕೊಡಗು ಜಿಲ್ಲೆಗೆ ಈಗಾಗಲೇ 100 ಕೋಟಿ ರು. ಅನುದಾನ ಘೋಷಣೆ ಮಾಡಿದ್ದು, 30 ಕೋಟಿ ರು. ಬಳಕೆ ಮಾಡಲಾಗುತ್ತಿದೆ. ಅದೇ ರೀತಿ ನೆರೆಯಿಂದ ತೊಂದರೆಗೊಳಗಾಗಿರುವ ಚಿಕ್ಕಮಗಳೂರು, ಹಾಸನ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಘೋಷಣೆ ಮಾಡಿದ 200 ಕೋಟಿ ರು. ಪೈಕಿ ತಲಾ 25 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಪ್ರತಿ ಕುಟುಂಬಕ್ಕೆ 3,800 ರು. ನೀಡಲಾಗುತ್ತಿದೆ. ಮಳೆ ಕಳೆದುಕೊಂಡವರಿಗೆ ತಲಾ 10 ಸಾವಿರ ರು. ವೆಚ್ಚದಲ್ಲಿ ಸುಸಜ್ಜಿತವಾದ ತಾತ್ಕಾಲಿಕ ಶೆಡ್‌ಗಳನ್ನು ನಿಮಿಸಿಕೊಡಲಾಗುವುದು ಎಂದರು.

3 ತಿಂಗಳ ಪಿಂಚಣಿ ನೀಡಿದ ವೃದ್ಧ

ವಿಪರೀತ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಎದುರಾಗಿರುವ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಸಂಘ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಜನಸಾಮಾನ್ಯರು ರಾಜ್ಯದ ವಿವಿಧೆಡೆಯಿಂದ ಆಗಮಿಸಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಪರಿಹಾರ ಹಣ ಸಲ್ಲಿಕೆ ಮಾಡುತ್ತಿದ್ದಾರೆ.

ಮಂಗಳವಾರವು ಸಹ ವಿವಿಧೆಡೆಯಿಂದ ಗೃಹ ಕಚೇರಿ ಕೃಷ್ಣಾಗೆ ಆಗಮಿಸಿದ ಸಂಘ-ಸಂಸ್ಥೆಗಳು, ಖಾಸಗಿ ವ್ಯಕ್ತಿಗಳು ದೇಣಿಗೆಯನ್ನು ನೀಡಿದರು. ಕೊಡಗಿನ ಜನರ ಸಂಕಷ್ಟಕಂಡು ಭಾವುಕರಾದ ವೆಂಕಟರಾಮಯ್ಯ ಎಂಬುವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 50 ಸಾವಿರ ರು. ನೀಡಿದರು. ಕೋಲಾರ ಮೂಲದ ವೆಂಕಟರಾಮಯ್ಯ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದಾರೆ. ಸದ್ಯಕ್ಕೆ ರಾಮಮೂರ್ತಿ ನಗರದಲ್ಲಿ ನೆಲೆಸಿದ್ದಾರೆ. ತಮ್ಮ ಮೂರು ತಿಂಗಳ ಪಿಂಚಣಿಯ ಹಣವನ್ನು ಸಿಎಂ ನಿಧಿಗೆ ನೀಡಿದ್ದಾರೆ. ಅಂತೆಯೇ ಕೈಗಾರಿಕಾ ಸಂಘದ ವತಿಯಿಂದ ಸಚಿವ ಕೆ.ಜೆ. ಜಾಜ್‌ರ್‍ ನೇತೃತ್ವದಲ್ಲಿ 3.5 ಕೋಟಿ ರು., ಕಾರ್ಪೋರೇಷನ್‌ ಬ್ಯಾಂಕ್‌, ಓರಿಯೆಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ತಲಾ ಒಂದು ಕೋಟಿ ರು. ದೇಣಿಗೆಯಾಗಿ ನೀಡಿವೆ.

click me!