ಸಾಕು ಪ್ರಾಣಿಗಳಿಗೆ ಸಿಕ್ಕಿತ್ತಾ ಪ್ರವಾಹ ಮುನ್ಸೂಚನೆ?

By Web DeskFirst Published Aug 22, 2018, 11:00 AM IST
Highlights

ಕೊಡಗಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದೆ. ಸಕಲ ಜೀವಿಗಳೂ ಕೂಡ ದುಸ್ಥಿತಿಯಲ್ಲಿವೆ. ಇಂತಹ ಪ್ರವಾಹದ ಬಗ್ಗೆ ಪ್ರಾಣಿಗಳಿಗೆ ಮೊದಲೇ ಮುನ್ಸೂಚನೆ ಸಿಕ್ಕಿತ್ತಾ ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೆ ಪ್ರವಾಹಕ್ಕೂ ಮುನ್ನ ಪ್ರಾಣಿಗಳಲ್ಲಿ ಕಂಡು ಬಂದ ವರ್ತನೆಯು ಕಾರಣವಾಗಿದೆ. 

ಮಡಿಕೇರಿ :  ‘ನಮ್ಮ ಮನೆಯಲ್ಲಿ ಸಾಕಿದ್ದ 12 ಆಡುಗಳು ಮೇಲೆ ನೋಡಿಕೊಂಡು ಚೀರಾಡುತ್ತಿದ್ದವು. ಆದರೆ ನಮಗೆ ಹೀಗಾಗುತ್ತೇ ಅಂತ ಗೊತ್ತೇ ಇರಲಿಲ್ಲ. ರಾತ್ರಿ ಒಂದು ಗಂಟೆಗೆ ಭಾರಿ ಗಾಳಿಯೊಂದಿಗೆ ಬಂಡೆಕಲ್ಲು ಜರಿದು ಬಂದು ಇಡೀ ಮನೆಯೇ ನಾಶವಾಯಿತು. ಮನೆಯಿಂದ ಹೊರಬರಲು ಜಾಗವೇ ಇರಲಿಲ್ಲ.

-ಇದು, ಮಡಿಕೇರಿ ತಾಲೂಕಿನ ಕಾಟಕೇರಿ ಗ್ರಾಮದ ನಿವಾಸಿ ಗೀತಾ ಅವರ ನೋವಿನ ನುಡಿ.

ಈಗ ಈ ಕಾಟಕೇರಿ ಗ್ರಾಮದಲ್ಲಿ ಹಲವು ಮನೆಗಳು ಸೇರಿದಂತೆ ಕಾಫಿ ತೋಟಗಳು ನೆಲಸಮವಾಗಿದೆ. ಇದೇ ಊರಲ್ಲಿ ಮೂರು ಮಂದಿ ಮಣ್ಣಿನಡಿ ಸಿಲುಕಿ ಮೃತರಾಗಿದ್ದಾರೆ ಎಂದು ದುಃಖಪಡುತ್ತಾರೆ ಅವರು.

ಕೊಟ್ಟಿಗೆಯಲ್ಲಿದ್ದ ಆಡುಗಳು ಮಧ್ಯಾಹ್ನ 3 ಗಂಟೆಯಿಂದಲೇ ಮನೆಯ ಪಕ್ಕದಲ್ಲಿದ್ದ ಬರೆಯನ್ನು ನೋಡಿಕೊಂಡು ಚೀರಾಡುತ್ತಿತ್ತು. ನಾವು ಏನೋ ಅಂದುಕೊಂಡು ಸುಮ್ಮನೆ ಇದ್ದೆವು. ‘ಆಡುಗಳು ಯಾಕೆ ಮೇಲೆ ನೋಡುತ್ತಿವೆ?’ ಎಂದು ಅಮ್ಮ ನಾನು ಮಾತನಾಡಿಕೊಂಡೆವು. ಅದೇ ದಿನ ರಾತ್ರಿ ಭಾರಿ ಶಬ್ದದೊಂದಿಗೆ ಗಾಳಿ ಬಂದು ಎತ್ತರದಲ್ಲಿದ್ದ ಬಂಡೆಗಲ್ಲು ಮನೆಯೊಳಗೆ ನುಗ್ಗಿಯೇ ಬಿಟ್ಟಿತ್ತು. ಹೊರಗೆ ದಾಟಲು ಜಾಗವೇ ಇರಲಿಲ್ಲ. ಮನೆಯೊಳಗೆ ಎಲ್ಲೆಡೆ ನೀರಾಗಿತ್ತು. ಹೇಗೆ ದಾಟಿ ಹೊರಗೆ ಬಂದಿದ್ದೇವೆಂದು ನಮಗೆ ಗೊತ್ತಾಗುತ್ತಿಲ್ಲ. ನಮ್ಮ ಊರಿನಲ್ಲಿ ಅದೇ ದಿನ ಮನೆಯಲ್ಲಿದ್ದ ಮೂವರು ಮೃತರಾಗಿದ್ದರು. ಅನಾಹುತ ಸಂಭವಿಸುತ್ತದೆ ಎಂದು ಆಡುಗಳು ಸೂಚನೆ ಕೊಟ್ಟಿದ್ದು ನಮಗೆ ನಂತರವಷ್ಟೇ ಗೊತ್ತಾಯ್ತು. ಆದರೆ ಆಡುಗಳನ್ನು ಉಳಿಸಲು ಸಾಧ್ಯವಾಗಿಲ್ಲ ಎಂದು ಅಂದಿನ ಹೃದಯವಿದ್ರಾವಕ ಘಟನೆಯನ್ನು ಅವರು ವಿವರಿಸಿದ್ದಾರೆ.

ಆಡುಗಳು, ಹಂದಿಗಳು ಸಾವು:

ಮನೆಗೆ ಬೃಹತ್‌ ಬಂಡೆಕಲ್ಲು ಬಡಿದ ಪರಿಣಾಮ ನಾವು ಮನೆಯಿಂದ ಅಂದು ರಾತ್ರಿ ಜೀವ ಕೈಯ್ಯಲ್ಲಿಡಿದು ಹೊರಟೆವು. ಆದರೆ ಮನೆಯಲ್ಲಿದ್ದ 12 ಆಡುಗಳು, 4 ಹಂದಿಗಳು ಸತ್ತಿವೆ. 2 ನಾಯಿಗಳು ಕೂಡ ಅಲ್ಲೇ ಇವೆ. ನಾನು ನಿನ್ನೆ (ಸೋಮವಾರ) ಕಾಡು ದಾರಿಯಲ್ಲಿ ತೆರಳಿ ನಾಯಿಗಳನ್ನು ನೋಡಿಕೊಂಡು ಬಂದಿದ್ದೇನೆ. ನಾಯಿಗಳು ಮಾತ್ರ ಅಲ್ಲೇ ಸುತ್ತಾಡುತ್ತಿವೆ. ಐದು ಎಕರೆ ಪ್ರದೇಶದಲ್ಲಿ ಒಂದು ಮನೆ ಕಟ್ಟಿಕೊಂಡು ವಾಸವಿದ್ದೆವು. ಆದರೆ ಈಗ ಎಲ್ಲವೂ ಮಾಯವಾಗಿದೆ ಎಂದು ಗೀತಾ ಅವರ ಪತಿ ಭಾನುಪ್ರಕಾಶ್‌ ನೋವಿನಿಂದ ನುಡಿದರು.

ಹಸುವಿನ ಹಗ್ಗ ಬಿಚ್ಚಿಟ್ಟು ಬಂದೆ:

ಕೊಟ್ಟಿಗೆಯಲ್ಲಿ ಕರುವೊಂದಿಗೆ ಹಸುವನ್ನು ಕಟ್ಟಿಹಾಕಲಾಗಿತ್ತು. ಗುಡ್ಡ ಕುಸಿದಿದ್ದ ಹಿನ್ನೆಲೆ ಮನೆಯಲ್ಲಿದ್ದವರೆಲ್ಲರೂ ಅಲ್ಲಿಂದ ಬೇರೆಡೆಗೆ ಬಂದೆವು. ಹಸುವಿನ ಹಗ್ಗವನ್ನು ಬಿಚ್ಚಿಲ್ಲವೆಂದು ಮನಸ್ಸಿನಲ್ಲಿ ತುಂಬಾ ಬೇಸರವಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತೆ ಹೇಗೋ ಆ ಸ್ಥಳಕ್ಕೆ ಹೋಗಿ ಹಸುವಿನ ಹಗ್ಗವನ್ನು ಬಿಚ್ಚಿದೆ. ಅಲ್ಲಿಂದ ಹಸು ಹಾಗೂ ಕರುವನ್ನು ರಕ್ಷಣೆ ಮಾಡಿ ಸ್ಥಳಾಂತರಿಸಲು ಸಾಧ್ಯವಾಗಲೇ ಇಲ್ಲ. ಇದರಿಂದ ಅಲ್ಲಿಂದ ಹಿಂದಿರುಗಲು ಮುಂದಾದೆ. ಈ ವೇಳೆ ನನ್ನ ಎದೆಯವರೆಗೂ ಕೆಸರು ನೀರಿತ್ತು. ನಂತರ ಅಲ್ಲಿಂದ ನಾನು ಹೇಗೋ ಬದುಕಿ ಬಂದಿದ್ದೇನೆ. ಈಗಲೂ ಹಸು ಹಾಗೂ 2 ತಿಂಗಳ ಕರುವನ್ನು ನೆನೆದು ಬೇಸರವಾಗುತ್ತಿದೆ ಎಂದು ಮೊಣ್ಣಂಗೇರಿಯ ನಿವಾಸಿ ಧನಂಜಯ್‌ ಭಾವುಕರಾದರು.

ಹಂದಿಗಳಿಗೆ ಆಹಾರ:

ನಮ್ಮ ಗ್ರಾಮದ ಹಲವು ಮನೆಗಳು ನಾಶವಾಗಿದೆ. ನಮ್ಮ ಮನೆಯೂ ಅಪಾಯದಲ್ಲಿತ್ತು. ಇದರಿಂದ ಮನೆಯಲ್ಲಿ ಸಾಕಿದ್ದ ಹಂದಿಗಳನ್ನು ಬಿಟ್ಟು ನಿರಾಶ್ರಿತರ ಕೇಂದ್ರಕ್ಕೆ ಹೋದೆವು. ನನ್ನ ಪತಿ, ಮನೆಯಲ್ಲಿ ಸಾಕಿದ್ದ ಹಂದಿಗಳನ್ನು ನೋಡಲು ತೆರಳಿದ್ದು, ಆಹಾರ ನೀಡಿ ಬರುತ್ತಿದ್ದಾರೆ ಎನ್ನುತ್ತಾರೆ ಮಡಿಕೇರಿ ತಾಲೂಕಿನ ಎಮ್ಮೆತ್ತಾಳು ನಿವಾಸಿ ಪ್ರೇಮಾವತಿ.

ವಿಘ್ನೇಶ್‌ ಎಂ. ಭೂತನಕಾಡು

click me!