
ಬೆಂಗಳೂರು(ಆ.22): ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟುವ ನಿಟ್ಟಿನಲ್ಲಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿರುವ ಮಕ್ಕಳ ನಿರಾಶ್ರಿತರ ಕೇಂದ್ರ ಮತ್ತು ಮಕ್ಕಳ ರಕ್ಷಣಾ ಕೇಂದ್ರಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಸಂಸದ ರಾಜೀವ್ ಚಂದ್ರಶೇಖರ್ ಅವರು ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿರುವ ಮಕ್ಕಳ ನಿರಾಶ್ರಿತರ ಕೇಂದ್ರ ಮತ್ತು ಮಕ್ಕಳ ರಕ್ಷಣಾ ಕೇಂದ್ರಗಳ ಸಂಖ್ಯೆಯ ಕುರಿತು ಸರ್ಕಾರವು ಒಂದು ತಿಂಗಳಲ್ಲಿ ಅಧ್ಯಯನ ನಡೆಸಬೇಕು. ಇದು ಸರ್ಕಾರದಿಂದ ನೋಂದಣಿಯಾಗಿರುವ ಅಧಿಕೃತ ಕೇಂದ್ರಗಳು ಎಷ್ಟು ಎಂಬ ನಿಖರವಾದ ಮಾಹಿತಿ ಪಡೆದುಕೊಳ್ಳಲು ಸಹಕಾರಿಯಾಗಲಿದೆ. ಅಲ್ಲದೇ, ರಾಜ್ಯದಲ್ಲಿನ ಕೇಂದ್ರಗಳ ಕುರಿತು ವೆಬ್‌ಸೈಟ್‌ನಲ್ಲಿ ಹಾಕಬೇಕು. ಇದರಿಂದ ಸಾರ್ವಜನಿಕರಿಗೆ ಮಾಹಿತಿ ನೀಡಿದಂತಾಗುತ್ತದೆ.
ಇದರ ಜತೆಗೆ ಶಾಲೆಗಳಲ್ಲಿ ಮಕ್ಕಳ ರಕ್ಷಣೆ ಯಾವ ರೀತಿ ನೀಡಲಾಗಿದೆ ಎಂಬುದರ ಕುರಿತು ಸಮೀಕ್ಷೆ ನಡೆಸಬೇಕಾಗಿದೆ. ಕೇಂದ್ರದ ಮಾನವ ಸಂಪನ್ಮೂಲ ಇಲಾಖೆಯ ನಿರ್ದೇಶನದ ಮೇರೆಗೆ ಕಾರ್ಯ ನಿರ್ವಹಿಸುತ್ತಿವೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಬೇಕಾದ ಅಗತ್ಯ ಇದೆ ಎಂದು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮಕ್ಕಳ ರಕ್ಷಣೆ ವಿಷಯದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಸಾರ್ವಜನಿಕವಾಗಿ ಭ್ಯವಾಗುವಂತೆ ಕ್ರಮ ಜರಗಿಸಬೇಕಾಗಿದೆ. ಮಕ್ಕಳ ರಕ್ಷಣೆ ಕುರಿತ ದಾಖಲೆಗಳನ್ನು ನಮೂದಿಸಲು ಉತ್ತಮ ತಂತ್ರಾಂಶವನ್ನು ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮತ್ತಷ್ಟು ಮಕ್ಕಳ ನ್ಯಾಯಾಲಯಗಳನ್ನು ಆರಂಭಿಸಬೇಕು. ಮಕ್ಕಳಿಗೆ ರಕ್ಷಣೆ ದೃಷ್ಟಿಯಿಂದ ನ್ಯಾಯಾಲಯದಲ್ಲಿ ಪರಿಣಾಮಕಾರಿಯಾಗಿ ವಾದ ಮಂಡಿಸುವಂತಹ ವಕೀಲರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಮಕ್ಕಳ ಮೇಲೆ ದೌರ್ಜನ್ಯಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಎಲ್ಲಾ ಮಕ್ಕಳ ರಕ್ಷಣಾ ಕೇಂದ್ರ ಮತ್ತು ಮಕ್ಕಳ ನಿರಾಶ್ರಿತರ ಕೇಂದ್ರದ ಕುರಿತು ವರದಿ ನೀಡುವಂತೆ ಕೇಂದ್ರ ಸರ್ಕಾರ ಕೇಳಿದೆ. ರಾಜ್ಯ ಕೂಡ ಸಮೀಕ್ಷೆ ನಡೆಸಬೇಕು ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.