ಚಿತ್ರರಂಗದವರ ನಿರ್ಲಕ್ಷಿಸಬೇಡಿ: ಹರ್ಷಿಕಾ-ಸಾರಾ ಜಟಾಪಟಿ

Published : Jun 17, 2019, 12:43 PM ISTUpdated : Jun 17, 2019, 12:48 PM IST
ಚಿತ್ರರಂಗದವರ  ನಿರ್ಲಕ್ಷಿಸಬೇಡಿ: ಹರ್ಷಿಕಾ-ಸಾರಾ ಜಟಾಪಟಿ

ಸಾರಾಂಶ

ಕೊಡಗು ಸಂತ್ರಸ್ತರಿಗೆ ಮನೆ: ಹರ್ಷಿಕಾ-ಸಾರಾ ಜಟಾಪಟಿ| ಸಿನಿಮಾ ನಟಿಗೆ ಮನೆ ಗುಣಮಟ್ಟದ ಬಗ್ಗೆ ಏನು ಗೊತ್ತು: ಸಚಿವ| ನಾನು ಎಂಜಿನಿಯರ್‌, ಸಿನಿಮಾದವರ ನಿರ್ಲಕ್ಷಿಸಬೇಡಿ: ನಟಿ

ಕೊಡಗು[ಜೂ.17]: ಕೊಡಗಿನಲ್ಲಿ ನೆರೆ ಸಂತಸ್ತರಿಗೆ ಸರ್ಕಾರದಿಂದ ಮನೆ ಹಂಚಿಕೆ ವಿಚಾರವಾಗಿ ನಟಿ ಹರ್ಷಿಕಾ ಪೂಣಚ್ಚ ಹಾಗೂ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ.ಮಹೇಶ್‌ ನಡುವೆ ವಾಕ್ಸಮರ ಶುರುವಾಗಿದೆ.

ನೆರೆ ಸಂತ್ರಸ್ತರಿಗೆ ಸರ್ಕಾರ ನೀಡುತ್ತಿರುವ ಮನೆಗಳು ಚೆನ್ನಾಗಿಲ್ಲ ಎಂದು ಹರ್ಷಿಕಾ ಟೀಕಿಸಿದ್ದರೆ, ಮನೆಗಳ ಬಗ್ಗೆ ಮಾತನಾಡಲು ಹರ್ಷಿಕಾಗೆ ಏನು ಗೊತ್ತು? ನಟಿಯಾದ ಅವರು ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು ಎಂದು ಸಾ.ರಾ.ಮಹೇಶ್‌ ತಿರುಗೇಟು ನೀಡಿದ್ದರು. ಇದರ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಹರ್ಷಿಕಾ, ನಾನು ಎಂಜಿನಿಯರ್‌ ಪದವೀಧರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ, ತಮಿಳುನಾಡಿನ ಮಾಜಿ ಸಿಎಂಗಳು ಸೇರಿದಂತೆ ಸಾಕಷ್ಟುಮಂದಿ ಸಿನಿಮಾ ತಾರೆಗಳು. ಸಿನಿಮಾದವರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಎಂದು ಸಚಿವರಿಗೆ ಮಾತಿನ ಚಾಟಿ ಬೀಸಿದ್ದಾರೆ.

ಮನೆ ಚೆನ್ನಾಗಿಲ್ಲ ಎಂದಿದ್ದ ಹರ್ಷಿಕಾ:

ಶನಿವಾರ ಮೈಸೂರಿನಲ್ಲಿ ಮಾತನಾಡಿದ್ದ ಕೊಡಗಿನ ಕುವರಿ ಹರ್ಷಿಕಾ, ಕೊಡಗು ನೆರೆ ಸಂತ್ರಸ್ತರಿಗೆ ಸರ್ಕಾರದಿಂದ ನಿರ್ಮಿಸುತ್ತಿರುವ ಮನೆಗಳು ಚೆನ್ನಾಗಿಲ್ಲ. ಸಂತ್ರಸ್ತರಿಗೆ ಒಳ್ಳೆಯ ಮನೆ ನಿರ್ಮಿಸಿಕೊಡಿ. ನೆರೆ ಸಂತ್ರಸ್ತರ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ನೆರೆಯಿಂದ ಹಾನಿ ಸಂಭವಿಸಿದ ವೇಳೆಯಲ್ಲಿ ಶೀಘ್ರವೇ ಮನೆ ವಿತರಣೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಆದರೆ, ಇದುವರೆಗೂ ಮನೆಗಳ ಹಂಚಿಕೆಯಾಗಿಲ್ಲ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದರು.

ಸಿನಿಮಾ ಬಗ್ಗೆ ಮಾತ್ರ ಮಾತಾಡಬೇಕು:

ಹರ್ಷಿಕಾ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದ ಸಾ.ರಾ.ಮಹೇಶ್‌, ಇಷ್ಟಕ್ಕೂ ಹರ್ಷಿಕಾ ಪೂಣಚ್ಚ ಯಾರು? ಅವರೇನು ಸಿನಿಮಾ ನಟಿನಾ? ನಟಿಯಾಗಿದ್ದಾರೆ ಸಿನಿಮಾ ಬಗ್ಗೆ ಮಾತ್ರ ಮಾತನಾಡಬೇಕು. ಕೊಡಗು ಸಂತ್ರಸ್ತರ ಮನೆಗಳ ಬಗ್ಗೆ ಅವರಿಗೇನು ಗೊತ್ತು? ವಾಸ್ತವ ಅರ್ಥಮಾಡಿಕೊಳ್ಳದೆ ತಜ್ಞರಂತೆ ಮಾತನಾಡಬಾರದು ಎಂದು ಭಾನುವಾರ ಬೆಳಗ್ಗೆ ತಿರುಗೇಟು ನೀಡಿದ್ದರು.

ನಾನೂ ಬಿ.ಇ. ಪದವೀಧರೆ:

ಸಚಿವರ ಟೀಕೆ ವ್ಯಕ್ತವಾಗುತ್ತಿದ್ದಂತೆ ಅದರ ಬೆನ್ನಲ್ಲೇ ಹರ್ಷಿಕಾ ಪೂಣಚ್ಚ ಪ್ರತಿಕ್ರಿಯೆ ನೀಡಿದ್ದು, ಇದ್ದದ್ದು ಇದ್ದಂತೆ ಹೇಳಿದರೆ ಎದ್ದು ಬಂದು ಎದೆಗೆ ಒದ್ದಂಗಾಯ್ತು ಎಂಬಂತಾಗಿದೆ ನನ್ನ ಪರಿಸ್ಥಿತಿ. ನಾನು ಯಾರನ್ನೂ ದೂಷಿಸಿಲ್ಲ. ಮನೆಗಳ ಬಗ್ಗೆ ಮಾತನಾಡಲು ಅವರು ಯಾರು? ಏನು ಓದಿದ್ದಾರೆ? ಎಂದು ಸಚಿವರು ಕೇಳಿದ್ದಾರೆ. ‘ನಾನು ಎಂಜಿನಿಯರ್‌, ಬಿ.ಇ. ಪದವಿ ಪಡೆದಿದ್ದೇನೆ. ಕೊಡಗಿನ ಮಗಳು, ಭಾರತದ ಪ್ರಜೆ ನನಗೆ ಈ ಬಗ್ಗೆ ಕೇಳುವ ಎಲ್ಲ ಹಕ್ಕಿದೆ’ ಎಂದು ಸಚಿವರಿಗೆ ಮಾತಿನಲ್ಲೇ ತಿವಿದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು