ಎಡಪಕ್ಷಗಳ ಬೊಕ್ಕಸ ಖಾಲಿ: ಚುನಾವಣೆಗೂ ಹಣ ಇಲ್ಲದಂತಹ ಸ್ಥಿತಿ!

By Web DeskFirst Published Sep 27, 2019, 9:48 AM IST
Highlights

ಎಡಪಕ್ಷಗಳ ಬೊಕ್ಕಸ ಖಾಲಿ, ಚುನಾವಣೆಗೂ ಹಣ ಇಲ್ಲದಂತಹ ಸ್ಥಿತಿ!| ಲೋಕಸಭೆ ಚುನಾವಣೆಗೆ 35 ಕೋಟಿ ಪಡೆದಿದ್ದ ವಾಮರಂಗ

ನವದೆಹಲಿ[ಸೆ.27]: ಪಶ್ಚಿಮ ಬಂಗಾಳದಲ್ಲಿ 28 ವರ್ಷಗಳ ಕಾಲ ಆಡಳಿತ ನಡೆಸಿದ್ದ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಇದೀಗ ಚುನಾವಣೆಯನ್ನು ಎದುರಿಸಲು ಇನ್ನೊಂದು ಪಕ್ಷದಿಂದ ಹಣ ಪಡೆಯಬೇಕಾದ ಅನಿವಾರ್ಯತೆಗೆ ಸಿಲುಕಿವೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಚುನಾವಣೆ ಎದುರಿಸಲು ಡಿಎಂಕೆಯಿಂದ ಸಿಪಿಐ ಮತ್ತು ಸಿಪಿಎಂ ಪಕ್ಷಗಳು ಕ್ರಮವಾಗಿ 15 ಕೋಟಿ ರು. ಹಾಗೂ 10 ಕೋಟಿ ರು. ಹಣವನ್ನು ದೇಣಿಗೆ ರೂಪದಲ್ಲಿ ಪಡೆದುಕೊಂಡಿದ್ದವು. ಡಿಎಂಕೆ ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಖರ್ಚು- ವೆಚ್ಚಗಳ ವಿವರಗಳಲ್ಲಿ ಈ ಸಂಗತಿಯನ್ನು ಉಲ್ಲೇಖಿಸಲಾಗಿದೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಸಿಪಿಐ, ಸಿಪಿಎಂ ಮತ್ತು ಕೊಂಗುನಾಡು ಡೆಮೊಕ್ರಾಟಿಕ್‌ ಪಕ್ಷಗಳು ತಮಿಳುನಾಡಿನಲ್ಲಿ ಡಿಎಂಕೆಯ ಜೊತೆ ಮೈತ್ರಿ ಮಾಡಿಕೊಂಡಿದ್ದವು. ಚುನಾವಣೆಗೆ 79 ಕೋಟಿ ರು. ವೆಚ್ಚ ಮಾಡಿದ್ದ ಡಿಎಂಕೆ 40 ಕೋಟಿ ರು.ಗಳನ್ನು ಮೈತ್ರಿ ಪಕ್ಷಗಳಿಗೆ ದೇಣಿಗೆ ನೀಡಿತ್ತು.

ಇದೇ ವೇಳೆ ಚುನಾವಣೆಯಲ್ಲಿ ಡಿಎಂಕೆಯಿಂದ ದೇಣಿಗೆ ಪಡೆದಿರುವುದುನ್ನು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಒಪ್ಪಿಕೊಂಡಿದ್ದಾರೆ. ಪಾರದರ್ಶಕ ರೀತಿಯಲ್ಲಿ ಹಣ ವರ್ಗಾವಣೆ ನಡೆದಿದ್ದು, ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ರಾಜಕೀಯ ಪಕ್ಷಗಳ ಮಧ್ಯೆ ಕೊಡು- ಕೊಳ್ಳುವ ವ್ಯವಹಾರ ಹೊಸದೇನೂ ಅಲ್ಲ. ಆದರೆ, ರಾಷ್ಟ್ರೀಯ ಪಕ್ಷ ಎನಿಸಿಕೊಂಡ ದೊಡ್ಡ ರಾಜಕೀಯ ಪಕ್ಷವೊಂದು ಪ್ರದೇಶಿಕ ಪಕ್ಷವೊಂದರಿಂದ ದೇಣಿಗೆ ಸ್ವೀಕರಿಸಿದ ಉದಾಹರಣೆಗಳು ತೀರಾ ಕಡಿಮೆ.

click me!