ಕೇರಳ, ಪಾಂಡಿಚೆರಿ ಚುನಾವಣಾ ವೆಚ್ಚಕ್ಕಾಗಿ ಭಾರಿ ಹಣ ನೀಡಿದ್ದ ಡಿಕೆಶಿ

By Kannadaprabha News  |  First Published Sep 17, 2019, 7:41 AM IST

ಕೇರಳ ಹಾಗೂ ಪಾಂಡಿಚೆರಿ ಚುನಾವಣೆ ನಡೆದ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಕೊಟ್ಯಂತರ ರು ಹಣ ಚುನಾವಣಾ ವೆಚ್ಚಕ್ಕಾಗಿ ನೀಡಿದ್ದರು ಎಂದು ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆಯಲ್ಲಿ ಬೆಳಕಿಗೆ ಬಂದಿದೆ.


ಬೆಂಗಳೂರು [ಸೆ.17]:  ಮೂರು ವರ್ಷಗಳ ಹಿಂದೆ ನಡೆದಿದ್ದ ಕೇರಳ ಮತ್ತು ಪಾಂಡಿಚೇರಿ ವಿಧಾನಸಭಾ ಚುನಾವಣಾ ವೆಚ್ಚಕ್ಕೆ ಪ್ರಭಾವಿ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಅವರು 47 ಕೋಟಿ ರು. ನೀಡಿದ್ದರು ಎಂಬ ಬಹುಮುಖ್ಯ ಸಂಗತಿ ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದುವರೆಗೆ ತನಿಖೆಯಲ್ಲಿ ಆ ಎರಡು ರಾಜ್ಯಗಳ ಚುನಾವಣಾ ಇಡುಗಂಟನ್ನು ಯಾರಿಗೆ ಶಿವಕುಮಾರ್‌ ಕೊಟ್ಟಿದ್ದರು ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ವಿಸ್ತೃತವಾದ ತನಿಖೆ ನಡೆಸುವ ಅಗತ್ಯವಿದೆ ಎಂದು ಇ.ಡಿ. ಅಧಿಕಾರಿಗಳು ಪ್ರತಿಪಾದಿಸಿದ್ದಾರೆ. ತನ್ಮೂಲಕ ಈಗಾಗಲೇ ಇ.ಡಿ. ಬಲೆಯಲ್ಲಿ ಸಿಲುಕಿರುವ ಮಾಜಿ ಸಚಿವರು ಮತ್ತಷ್ಟುಸಂಕಷ್ಟಕ್ಕೆ ಸಿಲುಕಿದಂತಾಗಿದೆ ಎನ್ನಲಾಗಿದೆ.

Tap to resize

Latest Videos

2016ರ ಮೇನಲ್ಲಿ ಕೇರಳ ಮತ್ತು ಪಾಂಡಿಚೇರಿ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆದಿತ್ತು. ಆ ವೇಳೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದಲ್ಲಿ ಶಿವಕುಮಾರ್‌ ಸಚಿವರಾಗಿದ್ದರು. ಪ್ರಭಾವಿ ಇಂಧನ ಖಾತೆ ನಿರ್ವಹಿಸುತ್ತಿದ್ದ ಅವರು, ನೆರೆ ರಾಜ್ಯಗಳಲ್ಲಿ ಚುನಾವಣೆ ವೆಚ್ಚಕ್ಕೆ ಆರ್ಥಿಕ ನೆರವು ನೀಡಿರಬಹುದು ಎಂದು ಶಂಕಿಸಲಾಗಿದೆ.

2017ರಲ್ಲಿ ಡಿ.ಕೆ.ಶಿವಕುಮಾರ್‌ ಮತ್ತು ಅವರ ಆಪ್ತರ ಮನೆ ಮತ್ತು ವಿವಿಧ ಸಂಸ್ಥೆಗಳ ಕಚೇರಿ ಮನೆಗಳ ದಾಳಿ ನಡೆಸಲಾಯಿತು. ಆ ವೇಳೆ ಜಪ್ತಿಯಾದ ದಾಖಲೆಗಳನ್ನು ಪರಿಶೀಲಿಸಿದಾಗ ಶಿವಕುಮಾರ್‌ ಅವರು ಕೇರಳ ಮತ್ತು ಪಾಂಡಿಚೇರಿ ಚುನಾವಣೆಗೆ ಆರ್ಥಿಕ ಸಹಕಾರ ಕೊಟ್ಟಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಶೋಧನೆ ನಡೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಲ್ಲದೆ ಆ ಚುನಾವಣೆಯಲ್ಲಿ ಕೇರಳದಲ್ಲಿ ಕಾಂಗ್ರೆಸ್‌ ಸೋತರೆ, ಪಾಂಡಿಚೇರಿಯಲ್ಲಿ ಕಾಂಗ್ರೆಸ್‌ ಅಧಿಕಾರ ಹಿಡಿಯಿತು. ಹೀಗಾಗಿ ಶಿವಕುಮಾರ್‌ ಅವರ ಪ್ರಕರಣದಲ್ಲಿ ಕೇರಳ ಮತ್ತು ಪಾಂಡಿಚೇರಿ ಕಾಂಗ್ರೆಸ್‌ ನಾಯಕರಿಗೆ ಇ.ಡಿ. ತನಿಖೆ ಭೀತಿ ಶುರುವಾಗಿದೆ ಎಂದು ತಿಳಿದು ಬಂದಿದೆ.

24 ಕೋಟಿ ರು. ಸಂದಾಯ:

ಕೇರಳ ಮತ್ತು ಪಾಂಡಿಚೇರಿ ಮಾತ್ರವಲ್ಲದೆ ಶಿವಕುಮಾರ್‌ ಅವರಿಂದ ವಿವಿಧ ರಾಜಕೀಯ ವ್ಯಕ್ತಿಗಳಿಗೆ 24.58 ಕೋಟಿ ಸಂದಾಯವಾಗಿದೆ. ಆದರೆ ಯಾರಿಗೆ ಮತ್ತು ಯಾವ ಕಾರಣಕ್ಕೆ ಹಣ ನೀಡಲಾಯಿತು ಎಂಬುದು ಖಚಿತವಾಗಿಲ್ಲ. ಈ ನಿಟ್ಟಿನಲ್ಲಿ ಪತ್ತೆದಾರಿಕೆ ಸಹ ಮುಂದುವರೆಸಲಾಗಿದೆ ಎಂದು ಇ.ಡಿ. ಮೂಲಗಳು ಹೇಳಿವೆ.

ದೆಹಲಿಯಲ್ಲಿ ಶಿವಕುಮಾರ್‌ ಅವರಿಗೆ ಸೇರಿದ ಮನೆಯಲ್ಲಿ ಪತ್ತೆಯಾದ 8 ಕೋಟಿ ರು. ಸಹ ರಾಷ್ಟ್ರೀಯ ಕಾಂಗ್ರೆಸ್‌ ನಾಯಕರಿಗೆ ತಲುಪಿಸಲು ಸಂಗ್ರಹಿಸಲಾಗಿತ್ತು ಎಂದು ಗೊತ್ತಾಗಿದೆ. ಈ ಹಣಕಾಸು ಬಗ್ಗೆ ಶಿವಕುಮಾರ್‌ ಅವರು ಸಾಕ್ಷ್ಯಗಳನ್ನು ಸಹ ನಾಶ ಮಾಡಿದ್ದಾರೆ. ಹೀಗಾಗಿ ದೆಹಲಿ ಪ್ಲ್ಯಾಟ್‌ನಲ್ಲಿ ಸಿಕ್ಕ ಹಣದ ಜೊತೆಗೆ 24 ಕೋಟಿ ರು. ಬಗ್ಗೆ ಸಹ ತನಿಖೆ ನಡೆಸಲಾಗುತ್ತಿದೆ ಎಂದಿದ್ದಾರೆ.

click me!