ಡಿ.ಕೆ. ಶಿವಕುಮಾರ್ ಗೆ ದಿನೇಶ್‌ ಗುಂಡೂರಾವ್ ತಾಕೀತು

By Web DeskFirst Published Apr 15, 2019, 8:22 AM IST
Highlights

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಇದೀಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಸಚಿವ ಡಿ.ಕೆ ಶಿವಕುಮಾರ್ ಹಾಗೂ ಎಂ.ಬಿ ಪಾಟೀಲ್ ಗೆ ಸೂಚನೆ ನೀಡಿದ್ದಾರೆ. 

ಬೆಂಗಳೂರು :  ಪ್ರತ್ಯೇಕ ಲಿಂಗಾಯತ ಧರ್ಮದ ತೀರ್ಮಾನ ಆ ಸಮಾಜ ಹಾಗೂ ಸರ್ಕಾರದ ನಿರ್ಧಾರಕ್ಕೆ ಬಿಟ್ಟಿರುವ ವಿಚಾರ. ಹೀಗಾಗಿ ಸಚಿವರಾದ ಡಿ.ಕೆ. ಶಿವಕುಮಾರ್‌ ಹಾಗೂ ಎಂ.ಬಿ. ಪಾಟೀಲ್‌ ಅವರಿಗೆ ಈ ವಿಚಾರದ ಬಗ್ಗೆ ಮಾತನಾಡದಿರಲು ತಾಕೀತು ಮಾಡಿದ್ದೇನೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಅಲ್ಲದೆ, ಇಬ್ಬರೂ ನಾಯಕರ ಹೇಳಿಕೆಗಳಿಗೂ ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅದು ಅವರವರ ವೈಯಕ್ತಿಕ ಅಭಿಪ್ರಾಯಗಳು ಮಾತ್ರ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತ್ಯೇಕ ಧರ್ಮದ ವಿಚಾರ ಆ ಸಮಾಜದ ಬಯಕೆ ಹಾಗೂ ಸಮಾಜದ ಬಹುತೇಕರ ಅಭಿಪ್ರಾಯದಂತೆ ಮುಂದುವರೆಯುತ್ತದೆ. ಈ ಬಗ್ಗೆ ಚುನಾವಣಾ ಸಂದರ್ಭದಲ್ಲಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವ ಅಗತ್ಯವಿಲ್ಲ. ಹೀಗಾಗಿ ಇಬ್ಬರೂ ನಾಯಕರಿಗೂ ಅನವಶ್ಯಕ ಹೇಳಿಕೆಗಳನ್ನು ನೀಡದಂತೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.

ಮಂಡ್ಯದಲ್ಲಿ ಅಕ್ರಮ ಹಣ ಸಾಗಿಸಲಾಗುತ್ತಿದೆ ಎಂಬ ಬಿ.ಎಸ್‌. ಯಡಿಯೂರಪ್ಪ ಅವರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಕ್ರಮ ಹಣ ಸಾಗಾಟ ಮಾಡುತ್ತಿರುವುದು ಬಿಜೆಪಿಯವರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್‌ನಿಂದ ದೊಡ್ಡ ಕಪ್ಪು ಪಟ್ಟಿಗೆ ಕೆಳಗಿಳಿಸಲಾಗಿದೆ. ಅದನ್ನು ಗೌಪ್ಯವಾಗಿ ಪ್ರತ್ಯೇಕ ಕಾರಿನಲ್ಲಿ ಹೊರಗೆ ಸಾಗಿಸಲಾಗಿದೆ. ಅದು ಯಾವ ಪೆಟ್ಟಿಗೆ ಎಂಬುದನ್ನು ತನಿಖೆ ನಡೆಸಬೇಕು. ಈ ಪೆಟ್ಟಿಗೆ ಬಗ್ಗೆ ಐಟಿ ಅಧಿಕಾರಿಗಳು ಕ್ರಮ ಕೈಗೊಳ್ಳುವುದಿಲ್ಲ. ಹೀಗಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಹೇಳಿದರು.

ದೇಶದಲ್ಲಿ ಏ.11ರಿಂದ ಮೇ.19ರವೆರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.

click me!