ಕಾಂಗ್ರೆಸ್ ನಾಯಕರಿಬ್ಬರ ನಡುವೆ ಭಿನ್ನಾಭಿಪ್ರಾಯ

By Web DeskFirst Published Oct 22, 2018, 9:15 AM IST
Highlights

ಕಾಂಗ್ರೆಸ್ ನಾಯಕರಿಬ್ಬರ ನಡುವಿನ ಭಿನ್ನಾಭಿಪ್ರಾಯದ ಬಗ್ಗೆ ಇದೀಗ ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್ ಅವರೇ ಸ್ವತಃ ಬಹಿರಂಗಪಡಿಸಿದ್ದಾರೆ. 

ಡಿಕೆಶಿ, ಜಾರಕಿಹೊಳಿ ನಡುವೆ ಭಿನ್ನಾಭಿಪ್ರಾಯ ನಿಜ: ದಿನೇಶ್‌

ಬಳ್ಳಾರಿ :  ಸಚಿವ ಡಿ.ಕೆ.ಶಿವಕುಮಾರ್‌ ಹಾಗೂ ರಮೇಶ್‌ ಜಾರಕಿಹೊಳಿ ಅವರ ನಡುವೆ ಒಂದಷ್ಟುಭಿನ್ನಾಭಿಪ್ರಾಯ ಇರುವುದು ನಿಜ. ಆದರೆ, ಅದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಅವರವರ ವೈಯಕ್ತಿಕವಾದದ್ದು ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಹೊಸಪೇಟೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಪ್ರಾಯ- ಭಿನ್ನಾಭಿಪ್ರಾಯಗಳು ಸಾಮಾನ್ಯ. ಅದನ್ನು ಪಕ್ಷದ ವೇದಿಕೆಯಲ್ಲಿಯೇ ಚರ್ಚೆ ಮಾಡುತ್ತೇವೆ. ಇಬ್ಬರು ಮುಖಂಡ ನಡುವೆ ಭಿನ್ನಾಭಿಪ್ರಾಯ ಇದೆ. ಇದು ವೈಯಕ್ತಿಕ ಭಿನ್ನಾಭಿಪ್ರಾಯವಾಗಿದ್ದು, ಮಾತುಕತೆ ಮೂಲಕ ಬಗೆಹರಿಸುತ್ತೇವೆ ಎಂದರು.

ಇಬ್ಬರು ಮುಖಂಡರ ನಡುವಿನ ಭಿನ್ನಾಭಿಪ್ರಾಯ ವಿಚಾರದಲ್ಲಿ ಪಕ್ಷದ ನಿಲುವು ಏನೂ ಇಲ್ಲ. ರಮೇಶ್‌ ಜಾರಕಿಹೊಳಿ ಜತೆ ನಾನು ಮಾತನಾಡುತ್ತೇನೆ. ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ಹೇಳಿದರು.

ಲೋಕಸಭಾ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಿಸಲು ಪಕ್ಷದ ಎಲ್ಲ ನಾಯಕರು ಜತೆಗೂಡಿ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ. ಎಡ ಪಕ್ಷಗಳು ಸಹ ನಮಗೆ ಬೆಂಬಲ ನೀಡಿವೆ. ಉಗ್ರಪ್ಪ ಹೊರಗಿನವರು ಎಂಬ ಹೇಳಿಕೆ ಅರ್ಥವಿಲ್ಲದ್ದು. ಹೋರಾಟದಿಂದ ಬಂದಿರುವ ಉಗ್ರಪ್ಪ ಅವರು ಜನಪರ ನಿಲುವಿನ ವ್ಯಕ್ತಿಯಾಗಿದ್ದಾರೆ. ಶಿವಮೊಗ್ಗದಲ್ಲಿ ತಾವೇ ಗೆದ್ದೇ ಗೆಲ್ಲುತ್ತೇವೆ ಎಂದು ಬೀಗುತ್ತಿದ್ದ ಬಿಜೆಪಿಯವರಿಗೆ ಇದೀಗ ನಡುಕ ಶುರುವಾಗಿದೆ. ಕೋಮುವಾದಿಗಳನ್ನು ಸೋಲಿಸಲು ಜೆಡಿಎಸ್‌ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಾಗಿದೆ. ಬಿಜೆಪಿ ಮಾಡಿದಂತೆ ನಾವು ಕೂಡ ರಾಜಕೀಯ ತಂತ್ರಗಾರಿಕೆ ಮಾಡುತ್ತಿದ್ದೇವೆ ಎಂದು ಹೇಳಿದರು.

‘ಉಗ್ರಪ್ಪರನ್ನು ಗೆಲ್ಲಿಸಲು ಜನ ತುದಿಗಾಲಲ್ಲಿದ್ದಾರೆ’

ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪರನ್ನು ಬಹುಮತದಿಂದ ಚುನಾಯಿಸಿ ಲೋಕಸಭೆಗೆ ಕಳುಹಿಸಲು ಬಳ್ಳಾರಿ ಜಿಲ್ಲೆಯ ಜನರು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು. ಹೊಸಪೇಟೆಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್‌ನ ಜಿಲ್ಲೆಯ ಆರು ಜನ ಶಾಸಕರು ನಮ್ಮ ಜೊತೆ ಇದ್ದು ಕೆಲಸ ಮಾಡುತ್ತಿದ್ದಾರೆ. ನಾನು ಕೂಡ ಜೆಡಿಎಸ್‌ ಕಚೇರಿಗೆ ಹೋಗಿ ಬಂದಿರುವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಬಳ್ಳಾರಿಗೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಹೇಳಿದರು.

click me!