
ಎಸ್.ಎಂ. ಕೃಷ್ಣ ಬಿಜೆಪಿ ಸೇರ್ಪಡೆ ಬಗ್ಗೆ ರಾಜ್ಯದ ಯಾವುದೇ ಬಿಜೆಪಿ ನಾಯಕರ ಬಳಿ ನಿಖರ ಮಾಹಿತಿ ಇಲ್ಲ. ಆದರೂ ಕೃಷ್ಣ ಪಕ್ಷ ಸೇರ್ಪಡೆಯಾದರೆ ಒಕ್ಕಲಿಗ ಬೆಲ್ಟ್‌ನಲ್ಲಿ ಒಳ್ಳೆಯದು ಎಂದು ರಾಜ್ಯ ನಾಯಕರು ಎಲ್ಲೆಡೆ ಹೇಳಲು ಆರಂಭಿಸಿದ್ದಾರೆ. ವಿಚಿತ್ರವೆಂದರೆ, ಬಹಿರಂಗವಾಗಿ ಮಾಧ್ಯಮಗಳ ಎದುರು ಕೃಷ್ಣ ಬಗ್ಗೆ ಮುತ್ಸದ್ದಿ ಎಂದೆಲ್ಲ ಹೊಗಳುವ ಕೆಲವು ಬಿಜೆಪಿ ನಾಯಕರು ಕ್ಯಾಮೆರಾ ಆಫ್ ಆದ ತಕ್ಷಣ ಕೃಷ್ಣರಿಗೆ ಕಾಂಗ್ರೆಸ್ ಏನು ಕಡಿಮೆ ಮಾಡಿತ್ತು, 84ರ ವಯಸ್ಸಿನಲ್ಲಿ ಯಾಕೆ ಪಕ್ಷ ಬಿಡಬೇಕಿತ್ತು ಎಂದು ಹೇಳತೊಡಗುತ್ತಾರೆ! ಎಸ್ ಎಂ ಕೃಷ್ಣ ಉಪರಾಷ್ಟ್ರಪತಿ ಆಗಲು ಬಿಜೆಪಿ ಸೇರಿದ್ದಾರೆ ಎಂಬ ವದಂತಿ ಇನ್ನೂ ತಣ್ಣಗಾಗಲಿಲ್ಲ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಬಿಟ್ಟರೆ ಬಿಜೆಪಿ ಸೇರ್ಪಡೆ ಬಗ್ಗೆ ಕೃಷ್ಣ ಯಾರ ಜೊತೆಗೂ ಮಾತನಾಡುತ್ತಿಲ್ಲ. ದಿಲ್ಲಿಯಲ್ಲಿರುವ ಬಿಜೆಪಿ ಮೂಲಗಳು ಹೇಳುವ ಪ್ರಕಾರ ಕೃಷ್ಣರಿಗೆ ಉಪ ರಾಷ್ಟ್ರಪತಿ ಹುದ್ದೆ ಕೊಡುವ ಸಾಧ್ಯತೆ ಇಲ್ಲವೇ ಇಲ್ಲ. 75ರ ವಯಸ್ಸಿನ ನಂತರ ಬಿಜೆಪಿಯ ನಾಯಕರಿಗೇ ಏನೂ ಮಹತ್ವದ ಹುದ್ದೆ ಕೊಡದೆ ಇರಲು ತೀರ್ಮಾನಿಸಿರುವಾಗ 80ರ ಹರೆಯದ ಕೃಷ್ಣರಿಗೆ ಸ್ಥಾನಮಾನ ಕೊಡುವುದು ಹೇಗೆ ಸಾಧ್ಯ ಎಂದು ಹೈ ಕಮಾಂಡ್ ನಾಯಕರು ಕೇಳುತ್ತಿದ್ದಾರೆ. ಅತ್ಯಂತ ಉನ್ನತ ಮೂಲಗಳು ಹೇಳುವ ಪ್ರಕಾರ ಮೋದಿ ಮತ್ತು ಅಮಿತ್ ಶಾ ಅವರಿಗೆ ಆಪ್ತರಾಗಿರುವ ಆಧ್ಯಾತ್ಮಿಕ ಗುರು ಒಬ್ಬರು ಕೃಷ್ಣ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರಂತೆ.
ಬಿಗಿ ಪಟ್ಟಿನ ಬಿಎಸ್'ವೈ:
ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿವಾದ ಬಗೆಹರಿಸಲು ಕರೆದಿದ್ದ ಮಾತುಕತೆಯಲ್ಲಿ ಅಮಿತ್ ಶಾ ಎದುರು ಯಡಿಯೂರಪ್ಪ ಹಾಕುತ್ತಿದ್ದ ಬಿಗಿಪಟ್ಟುಗಳನ್ನು ನೋಡಿ ಹೈಕಮಾಂಡ್ ಮತ್ತು ಆರ್‌ಎಸ್‌ಎಸ್ ನಾಯಕರೇ ಸುಸ್ತಾಗಿ ಹೋದರಂತೆ! ಮೊದಲಿಗೆ ಈಶ್ವರಪ್ಪನವರಿಗೆ ಹಿಂದುಳಿದ ಮೋರ್ಚಾ ಜವಾಬ್ದಾರಿ ಕೊಡಿ ಎಂದು ಹೇಳಿದಾಗ ವಿರೋಧ ಪಕ್ಷದ ನಾಯಕರಿದ್ದಾರೆ ಅವರಿಗೇಕೆ ಮತ್ತೊಂದು ಉಸ್ತುವಾರಿ ಎಂದು ಬಿಎಸ್‌ವೈ ವಾದ ಮಂಡಿಸಿದಾಗ ಹೈಕಮಾಂಡ್‌ಗೂ ಏನು ಹೇಳುವುದು ಎಂದು ಕ್ಷಣ ತೋಚಲಿಲ್ಲವಂತೆ. ನಂತರ ಸಂಗೊಳ್ಳಿ ರಾಯಣ್ಣ ಹೆಸರಿನಲ್ಲಿ ಬಿಜೆಪಿ ಜಿಲ್ಲಾ ಸಮಾವೇಶದ ಪ್ರಶ್ನೆ ಬಂದಾಗ ಯಡಿಯೂರಪ್ಪ, ಸಂಗೊಳ್ಳಿ ರಾಯಣ್ಣನಿಗೆ ಕೇವಲ ಕುರುಬರ ಐಡೆಂಟಿಟಿ ಇದೆ, ನಮ್ಮಲ್ಲಿ ಕುರುಬರನ್ನು ಬಿಟ್ಟು ಉಳಿದ ಹಿಂದುಳಿದವರು ಬರುತ್ತಾರೆ ಎಂದು ಅರ್ಧ ಗಂಟೆಯ ಚರ್ಚೆ ಮಾಡಿದಾಗ ಕೆಲಕಾಲ ಅಮಿತ್ ಶಾ ಅವರೂ ಅವಾಕ್ಕಾದರಂತೆ. ಬಳಿಕ ಅಮಿತ್ ಶಾ ಅವರೇ ಏನೇ ಇದ್ದರೂ ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಇವರೆಲ್ಲ ಜಾತಿಯನ್ನು ಮೀರಿದ ನಾಯಕರು. ಜಿಲ್ಲಾ ಸಮಾವೇಶ ಮಾಡಿ ಎಂದು ತೀರ್ಪು ಕೊಡಬೇಕಾಯಿತಂತೆ. ನಂತರ ಪದಾಧಿಕಾರಿಗಳ ಬದಲಾವಣೆ ಏಕೆ ಬೇಡ ಎಂದು ಯಡಿಯೂರಪ್ಪ ವಾದಿಸಿದಾಗ ಅಮಿತ್ ಶಾ ಅವರೂ ಯಾವುದೇ ಅಂತಿಮ ನಿರ್ಧಾರ ಕೊಡದೆ, ರಾಮಲಾಲ್, ಸಂತೋಷ್, ಮುರಳೀಧರ್ ರಾವ್‌ರನ್ನು ಒಳಗೊಂಡ ಸಮಿತಿ ರಚಿಸಿ ವರದಿ ಕೊಡಿ, ಮುಂದೆ ನೋಡೋಣ ಎಂದು ಹೇಳಬೇಕಾಯಿತಂತೆ. ಅಮಿತ್ ಶಾ ಕರೆದಿದ್ದ ಸಭೆಯಲ್ಲಿ ಯಡಿಯೂರಪ್ಪ ಒಬ್ಬಂಟಿಗರಾಗುತ್ತಾರೆ ಎಂದುಕೊಂಡು ಸಭೆಗೆ ಹೋಗಿದ್ದ ಈಶ್ವರಪ್ಪ ಸಂತೋಷ್ ಅವರೆಲ್ಲ ಬಿಎಸ್‌ವೈ ಹಾಕಿದ ಪಟ್ಟುಗಳನ್ನು ನೋಡಿ ಸುಸ್ತಾಗಿ ಹೋಗಿದ್ದಾರೆ!
ಉಸ್ತುವಾರಿಗಳ ಪ್ರಾಬ್ಲಂ:
ರಾಷ್ಟ್ರೀಯ ಪಕ್ಷಗಳ ರಾಜ್ಯ ನಾಯಕರನ್ನು ದೆಹಲಿಯಿಂದ ಬರುವ ಉಸ್ತುವಾರಿ ಪ್ರಭಾರಿಗಳು ಕೇವಲ ಕಣ್ಸನ್ನೆಯಿಂದಲೇ ನಿಭಾಯಿಸುವುದು ರೂಢಿ. ಆದರೆ ಕರ್ನಾಟಕ ಬಿಜೆಪಿ ನಾಯಕರನ್ನು ನಿಭಾಯಿಸುವುದು ಬಹುತೇಕ ಉಸ್ತುವಾರಿಗಳಿಗೆ ದೊಡ್ಡ ಸವಾಲೇ ಸರಿ. ಅಮಿತ್ ಶಾ ನಡೆಸಿದ ಸಂಧಾನ ಸಭೆ ಬಳಿಕ ಇಬ್ಬರೂ ಹಠಮಾರಿಗಳನ್ನು ಹೊರಗೆ ಕರೆದುಕೊಂಡು ಬಂದ ಮುರಳೀಧರ್ ರಾವ್, ಮಾಧ್ಯಮಗಳಿಗೆ ತಾವೊಬ್ಬರೇ ಮಾತನಾಡಿ ಪೂರ್ಣ ವಿರಾಮ ಹಾಕುವ ಬದಲು ಇಬ್ಬರನ್ನೂ ಮಾತನಾಡಲು ಬಿಟ್ಟರು. ಆಗ, ಮರಳಿ ಎಲ್ಲಿ ಶಾ ನಿವಾಸದ ಹೊರಗಡೆ ಜಗಳವಾಗುತ್ತದೆಯೋ ಎನಿಸುವಷ್ಟು ಇಬ್ಬರೂ ನಾಯಕರು ವಿಭಿನ್ನ ಹೇಳಿಕೆ ನೀಡತೊಡಗಿದರು! ಇಬ್ಬರನ್ನೂ ಸುಮ್ಮನಾಗಿರಿಸಲು ಮುರಳೀಧರ್ ರಾವ್'ರಿಗೆ ಹತ್ತು ನಿಮಿಷ ಬೇಕಾಯಿತು. ಅಷ್ಟೇ ಅಲ್ಲ, ಮುರಳೀಧರ್ ರಾವ್ ಅವರನ್ನು ಬದಲಾಯಿಸಿ ಎಂದು ಕರ್ನಾಟಕ ಬಿಜೆಪಿ ಕೋರ್ ಕಮಿಟಿಯ ಬಹುತೇಕ ನಾಯಕರು ಅಮಿತ್ ಶಾರಿಗೆ ಕೇಳಿಕೊಂಡಿದ್ದಾರಂತೆ.
ನಂಬಿಕೆ ಸಮಸ್ಯೆ:
ಕಳೆದ 8 ವರ್ಷಗಳಿಂದ ನಡೆದಿರುವ ಬಿಜೆಪಿ ಬಿಕ್ಕಟ್ಟಿನ ಸಭೆಯಲ್ಲಿ ಆರ್‌ಎಸ್‌ಎಸ್ ನಾಯಕರು ಸಭೆಯಲ್ಲಿ ನೇರವಾಗಿ ಭಾಗವಹಿಸಿದ್ದು ಮೊದಲ ಬಾರಿ. ಸಂಘದ ನಾಯಕರು ಹೇಳುವ ಪ್ರಕಾರ ದೆಹಲಿಯಲ್ಲಿ ಅಮಿತ್ ಶಾ ಎದುರು ಯಡಿಯೂರಪ್ಪ, ಈಶ್ವರಪ್ಪ ಇಬ್ಬರು ಕೂಡ ಕರ್ನಾಟಕದ ಸಂಘ ನಾಯಕರು ನಮ್ಮ ಜೊತೆಗಿದ್ದಾರೆ. ನಾವು ಸಂಘದ ಸೂಚನೆ ಪಾಲಿಸುತ್ತಿದ್ದೇವೆ ಎಂದು ಬಿಂಬಿಸಿಕೊಂಡಿದ್ದರಂತೆ. ಹೀಗಾಗಿ ದೂಧ್ ಕಾ ದೂಧ್ ಪಾನಿ ಕಾ ಪಾನಿ ಮಾಡಲು ಆರ್‌ಎಸ್‌ಎಸ್ ನಾಯಕ ಮುಕುಂದ್ ಅಪರೂಪ ಎಂಬಂತೆ ಮಾಧ್ಯಮಗಳ ಎದುರು ಅಮಿತ್ ಶಾ ನಿವಾಸಕ್ಕೆ ಬಂದು ಅಭಿಪ್ರಾಯ ಹೇಳಿದ್ದಾರೆ.
ಬೆಳಬೆಳಗ್ಗೆ ಶಿಸ್ತಿನ ಸಭೆ:
ಸಂಸತ್ತಿನ ಅಧಿವೇಶನ ನಡೆಯುವಾಗ ಪ್ರತಿ ಮಂಗಳವಾರ ಬಿಜೆಪಿ ಸಂಸದರ ಸಭೆ ನಡೆಯುವುದು 1980ರಿಂದಲೂ ಇರುವ ಪದ್ಧತಿ. ಮೋದಿ ಪ್ರಧಾನಿಯಾದ ಮೇಲಂತೂ ಸರಿಯಾಗಿ 9.30ರೊಳಗೆ ಸಭೆಗೆ ಬರದೇ ಹೋದರೆ ಗ್ರಂಥಾಲಯ ಸಭಾಂಗಣದ ಬಾಗಿಲು ಹಾಕಲಾಗುತ್ತದೆ. ಸ್ವಯಂ ಪ್ರಧಾನಿ ಮೋದಿಯೇ ಸರಿಯಾಗಿ 9.28ಕ್ಕೆ ಸಭೆಗೆ ಬರುತ್ತಾರೆ. ಹೀಗಾಗಿ ಕೊರೆಯುವ ಚಳಿಯಿಂದಾಗಿ ತಡವಾಗಿ ಏಳುವ ಬಿಜೆಪಿ ಸಂಸದರು ಮಂಗಳವಾರ ಮಾತ್ರ ಬೇಗನೆ ಎದ್ದು ಪ್ರಧಾನಿ ಬರುವ ಮುಂಚೆಯೇ ತಲುಪಲು ಹರ ಸಾಹಸ ಪಡುತ್ತಾರೆ. ಸಂಸದರೇ ಹೇಳುವ ಪ್ರಕಾರ ಮೊದಲಿಗೆ ವೆಂಕಯ್ಯ ನಾಯ್ಡು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಮೋದಿಗಿಂತ ಮೊದಲು ತಾನೇ ಭಾಷಣ ಮಾಡುತ್ತಾ ಅರ್ಧ ಗಂಟೆ ಕೊರೆಯುತ್ತಿದ್ದರಂತೆ. ಆದರೆ ಈಗ ಅನಂತ್ ಕುಮಾರ್ ಚಿಕ್ಕದಾಗಿ ಹೇಳಬೇಕಾದುದನ್ನು 5 ನಿಮಿಷದಲ್ಲಿ ಹೇಳಿ ಮುಗಿಸುತ್ತಾರೆ.
ರಾಹುಲ್ ಚೀಟಿ ಫಜೀತಿ:
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಮತ್ತು ಕಾಂಗ್ರೆಸ್ ನಡುವಣ ಸೀಟು ಹೊಂದಾಣಿಕೆ ಬಗ್ಗೆ ಘೋಷಿಸಲು ರಾಹುಲ್ ಗಾಂಧಿ ಮತ್ತು ಅಖಿಲೇಶ್ ಯಾದವ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಗುಲಾಮ್ ನಬಿ ಅಜಾದ್, ರಾಹುಲ್ ಮೂಲಕ ಚೀಟಿಯೊಂದನ್ನು ಅಖಿಲೇಶ್ ಯಾದವರಿಗೆ ಕಳುಹಿಸಿದರಂತೆ. ಅಮೇಥಿ ಮತ್ತು ರಾಯ್‌ಬರೇಲಿಯಲ್ಲಿ ಕಾಂಗ್ರೆಸ್‌ಗೆ ಇನ್ನಷ್ಟುಸೀಟು ಬೇಕು ಎಂದು ಅದರಲ್ಲಿ ಬರೆದಿತ್ತಂತೆ. ಅದನ್ನು ನೋಡಿದ ಅಖಿಲೇಶ್ ಅದನ್ನು ಟೇಬಲ್ ಮೇಲೆ ಬಿಟ್ಟು ಹೋಗಿದ್ದಾರೆ. ಪತ್ರಿಕಾಗೋಷ್ಠಿಯ ನಂತರ ಇದನ್ನು ತೆಗೆದುಕೊಂಡು ನೋಡಿದ ಪತ್ರಕರ್ತರು ಮರುದಿನ ಸುದ್ದಿ ಮಾಡಿದ್ದು ಇದೇ ಚೀಟಿ ಬಗ್ಗೆ ಮಾತ್ರ. ರಾಷ್ಟ್ರೀಯ ಪಕ್ಷದ ಉಪಾಧ್ಯಕ್ಷ ತನ್ನ ಬಳಿ ಎಷ್ಟೊಂದು ಅಸಹಾಯಕನಾಗಿದ್ದಾನೆ ಎಂದು ಚೀಟಿ ಮೂಲಕ ತೋರಿಸುವ ಪ್ರಯತ್ನ ಮಾಡಿದ್ದಾರೆ ಜಾಣ ಅಖಿಲೇಶ್ ಯಾದವ್.
ಮೊಬೈಲ್ ಪತ್ರಿಕೋದ್ಯಮ:
ಬಜೆಟ್ ಅಧಿವೇಶನದಲ್ಲಿ ಸಂಸತ್ತಿನ ಪ್ರಾಂಗಣದಲ್ಲಿ ಮೊಬೈಲ್ ಹಿಡಿದುಕೊಂಡು ತಾವೇ ಸೆಲ್ಫಿ ಸ್ಟಿಕ್ ಹಿಡಿದು ಶೂಟ್ ಮಾಡುತ್ತಿರುವ ಪತ್ರಕರ್ತರು ಗಮನ ಸೆಳೆಯುತ್ತಿದ್ದಾರೆ. ರಾಷ್ಟ್ರೀಯ ಮಾಧ್ಯಮಗಳು ಖರ್ಚು ಕಡಿಮೆ ಮಾಡಲು ಐಫೋನ್‌ಗೆ ಮೈಕ್ ಸಿಕ್ಕಿಸಿ ಪತ್ರಕರ್ತರು ತಾವೇ ಶೂಟ್ ಮಾಡಿ ಮೊಬೈಲ್ ಸಾಫ್ಟ್‌ವೇರ್ ಮೂಲಕ ಫೀಡ್ ಕಳುಹಿಸುವ ಪ್ರಯೋಗ ಶುರು ಮಾಡಿದ್ದು, ಯಶಸ್ವಿಯಾದಲ್ಲಿ ಮುಂದಿನ ದಿನಗಳಲ್ಲಿ ಕ್ಯಾಮೆರಾ ಸ್ಥಾನವನ್ನು ಮೊಬೈಲ್‌ಗಳೇ ತುಂಬಲಿವೆ.
ಪದ್ಮ ಪ್ರಶಸ್ತಿಯ ವಿವಾದ:
ಈ ಬಾರಿ ಪದ್ಮಶ್ರೀ ಪ್ರಶಸ್ತಿ ಸಂಸ್ಕೃತ ವಿದ್ವಾಂಸ ಚ ಮು ಕೃಷ್ಣ ಶಾಸ್ತ್ರೀ ಅವರಿಗೆ ಸಿಕ್ಕಿರುವುದು ಸ್ವಲ್ಪ ಮಟ್ಟಿಗೆ ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಕಾರಣ ಕೃಷ್ಣ ಶಾಸ್ತ್ರಿಗಳು ರಾಮಚಂದ್ರಾಪುರ ಮಠದ ಶ್ರೀಗಳ ವಿರುದ್ಧ ದೂರು ನೀಡಿದ್ದ ಪ್ರೇಮಲತಾ ದಿವಾಕರ ಅವರ ಮೈದುನ ಎಂಬುದು. ಅಷ್ಟೇ ಅಲ್ಲ, ರಾಮಚಂದ್ರಾಪುರ ಶ್ರೀಗಳ ವಿರುದ್ಧದ ದೂರನ್ನು ಮೊಟ್ಟಮೊದಲಿಗೆ ಮೋಹನ ಭಾಗವತ್ ಬಳಿ ತೆಗೆದುಕೊಂಡು ಹೋದವರು ಕೃಷ್ಣ ಶಾಸ್ತ್ರಿಗಳು. ಅಷ್ಟುಉನ್ನತ ಹಂತದಲ್ಲಿ ಮಠದ ಪ್ರಕರಣವನ್ನು ಗಂಭೀರಗೊಳಿಸಿದವರು ಅವರು. ಈ ಹಿನ್ನೆಲೆಯಲ್ಲಿ ರಾಮಚಂದ್ರಾಪುರ ಮಠದ ಪ್ರಕರಣದಲ್ಲಿ ಆರ್‌ಎಸ್‌ಎಸ್‌ನಲ್ಲಿಯೇ ಎರಡು ಗುಂಪುಗಳಾಗಿದ್ದವು. ಹೀಗಾಗಿ ಕೃಷ್ಣ ಶಾಸ್ತ್ರೀ ಅವರಿಗೆ ಪದ್ಮಶ್ರೀ ಸಿಕ್ಕಿರುವುದು ಆರ್‌ಎಸ್‌ಎಸ್‌ನಲ್ಲಿರುವ ರಾಮಚಂದ್ರಾಪುರ ಮಠದ ಶೀಗಳ ಬೆಂಬಲಿಗರಿಗೆ ಸ್ವಲ್ಪ ಮುಜುಗರ, ಅಸಮಾಧಾನ ಉಂಟು ಮಾಡಿದೆಯಂತೆ. ಅಂದ ಹಾಗೆ ಕೃಷ್ಣ ಶಾಸ್ತ್ರಿಗಳು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ ಅವರ ಸಲಹೆಗಾರರು.
ಗೋವಾ ಮೇಲೆ ಭಾಳಾ ಲವ್!
ಉತ್ತರ ಭಾರತದ ಬಹುತೇಕ ರಾಜ್ಯಗಳ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ನಮ್ಮನ್ನು ಚುನಾವಣಾ ಕೆಲಸಕ್ಕೆ ಗೋವಾಕ್ಕೆ ನಿಯೋಜಿಸಿ ಎಂದು ಕೇಳಿಕೊಂಡಿದ್ದರಂತೆ. ಆದರೆ ಕೊರೆಯುವ ಚಳಿಯಲ್ಲಿ ಉತ್ತರಾಖಂಡ್- ಉತ್ತರ ಪ್ರದೇಶ- ಪಂಜಾಬ್‌ಗಳಿಗೆ ಹೋಗಿ ಎಂದರೆ ಬಹಳಷ್ಟುನಾಯಕರು ಹಿಂದೇಟು ಹಾಕುತ್ತಿದ್ದರಂತೆ. ರಾಜಧಾನಿ ದೆಹಲಿಯ ಬಿಜೆಪಿ ನಾಯಕರಂತೂ ಗೋವಾಕ್ಕೆ ಹೋಗಲು ತುದಿಗಾಲ ಮೇಲೆ ನಿಂತಿದ್ದರೂ ಬಹಳಷ್ಟುಜನರನ್ನು ಕೇಜ್ರಿವಾಲ… ವಿರುದ್ಧ ಕೆಲಸ ಮಾಡಿ ಎಂದು ಪಂಜಾಬ್‌ಗೆ ಕಳುಹಿಸುವಷ್ಟರಲ್ಲಿ ಸಾಕು ಸಾಕಾಯಿತಂತೆ.
- ಪ್ರಶಾಂತ್ ನಾತು, ಸುವರ್ಣನ್ಯೂಸ್, ದೆಹಲಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.