ಸಿಎಂ ಡೀಸೆಲ್ ಶಾಕ್

By Kannadaprabha NewsFirst Published Jul 21, 2018, 9:42 AM IST
Highlights

ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ದೊಡ್ಡ ಶಾಕ್ ನೀಡಿದೆ.

ಬೆಂಗಳೂರು :  ಸಾಲದಲ್ಲಿ ಮುಳುಗಿ ಸಂಕಷ್ಟದಲ್ಲಿರುವ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಿಗೆ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿದ ಪರಿಣಾಮ ಪ್ರತಿ ದಿನ 25.69 ಲಕ್ಷ ರು.ಗಳಂತೆ ಮಾಸಿಕ 7.71 ಕೋಟಿ ರು. ಹೆಚ್ಚುವರಿ ಹೊರೆಯಾಗಿದ್ದು, ನಿಗಮಗಳ ಆರ್ಥಿಕ ಸ್ಥಿತಿ ಗಂಭೀರವಾಗಿದೆ. ಕಳೆದ ಮೇ ಮಧ್ಯಭಾಗದಿಂದ ಜೂನ್ ವರೆಗೂ ನಿರಂತರ ತೈಲ ದರ ಏರಿಕೆಯಿಂದ ತತ್ತರಿಸಿದ್ದ ನಿಗಮಗಳು ಚೇತರಿಸಿಕೊಳ್ಳುತ್ತಿರುವ ಹೊತ್ತಿನಲ್ಲಿ ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳ ಮಾಡಿ ದೊಡ್ಡ ಶಾಕ್ ನೀಡಿದೆ  ನಾಲ್ಕು ನಿಗಮಗಳು ಪ್ರತಿ ನಿತ್ಯ 25 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಕಾರ್ಯಾಚರಣೆ ಮಾಡುತ್ತಿವೆ. 

ನಿತ್ಯ ಲಕ್ಷಾಂತರ ಲೀಟರ್ ಡೀಸೆಲ್ ಬಳಕೆ ಮಾಡುವುದರಿಂದ ನಾಲ್ಕು ನಿಗಮಗಳು ಸಗಟು ದರದಲ್ಲಿ ನೇರವಾಗಿ ತೈಲ ಕಂಪನಿಗಳ ಬಳಿ ಡೀಸೆಲ್ ಖರೀದಿಸುತ್ತಿವೆ. ಇದರಿಂದ ದರದಲ್ಲಿ ಕೊಂಚ  ರಿಯಾಯಿತಿ ಪಡೆಯುತ್ತಿವೆ. ರಾಜ್ಯ ಸರ್ಕಾರ ಡೀಸೆಲ್ ಮೇಲಿನ ತೆರಿಗೆ ಹೆಚ್ಚಳಕ್ಕೂ ಮುನ್ನ ಪ್ರತಿ ಲೀಟರ್ ಸಗಟು ಡೀಸೆಲ್ ಸರಾಸರಿ 65.60 ರು. ಸಿಗುತ್ತಿತ್ತು. ತೆರಿಗೆ ಹೆಚ್ಚಳದ ಬಳಿಕ ಲೀಟರ್ ಡೀಸೆಲ್ ಸಗಟು ದರ 67.50 ರು. ಆಗಿದೆ. ಈ ಮೂಲಕ ನಾಲ್ಕು ನಿಗಮಗಳು ಪ್ರತಿ ಲೀಟರ್ ಡೀಸೆಲ್‌ಗೆ ಸರಾಸರಿ 1.70 ರು. ಹೆಚ್ಚುವರಿ ಭರಿಸುವಂತಾಗಿದೆ ಎಂದು ಕೆಎಸ್ ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಟಿಕೆಟ್ ದರ ಏರಿಕೆ ಅನಿವಾರ್ಯ: ನಷ್ಟ ಕಡಿಮೆ ಮಾಡಿಕೊಳ್ಳಲು ಈಗಾಗಲೇ ಕೆಎಸ್‌ಆರ್‌ಟಿಸಿ ಶೇ.೧೫ರಷ್ಟು ಟಿಕೆಟ್ ದರ ಏರಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. 2017ರಲ್ಲಿ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಇದೀಗ ಕಾರ್ಯಾಚರಣೆ ವೆಚ್ಚ, ಸಿಬ್ಬಂದಿ ವೇತನ ಹಾಗೂ ಇತರೆ ಖರ್ಚುಗಳು ಏರಿಕೆಯಾಗಿವೆ. ಹಾಗಾಗಿ ನಿಗಮ ನಿರ್ವಹಣೆಗೆ ಟಿಕೆಟ್ ದರ ಏರಿಕೆ ಅನಿವಾರ್ಯ. ಸರ್ಕಾರ ಟಿಕೆಟ್ ದರ ಏರಿಕೆಗೆ ಒಪ್ಪಿಗೆ ನೀಡಬೇಕು ಎಂದರು.

click me!