ಶಿಕ್ಷಕರ ನೇಮಕಾತಿ ನಿಯಮ ಇನ್ನಷ್ಟು ಸಡಿಲ

By Web DeskFirst Published Jul 21, 2018, 9:21 AM IST
Highlights

ಶಿಕ್ಷಕರ ನೇಮಕಕ್ಕೆ ನಡೆಸಿದ್ದ ಪರೀಕ್ಷೆಯ ಉತ್ತೀರ್ಣಕ್ಕೆ ನಿಗದಿಪಡಿಸಿದ್ದ ಅರ್ಹತಾ ಮಾನದಂಡಗಳನ್ನು ಸಡಿಲಗೊಳಿಸಲಾಗಿದೆ.

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು 10 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಕ್ಕೆ ನಡೆಸಿದ್ದ ಪರೀಕ್ಷೆಯ ಉತ್ತೀರ್ಣಕ್ಕೆ ನಿಗದಿಪಡಿಸಿದ್ದ ಅರ್ಹತಾ ಮಾನದಂಡಗಳನ್ನು ಸಡಿಲಗೊಳಿಸಿದೆ. ಶೇಕಡಾವಾರು ಹೆಚ್ಚು ಅಂಕ ಗಳಿಸಿದವರನ್ನು ಪರಿಗಣಿಸಿ ನೇಮಕಾತಿ ಪ್ರಕ್ರಿಯೆ ಮುಂದುವರಿಸುವಂತೆ ಸೂಚಿಸಿ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. 

ಪ್ರಾಥಮಿಕ ಶಿಕ್ಷಕರ ನೇಮಕಾತಿಗಾಗಿ 2017 ರಲ್ಲಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 68,832 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ 55,429 ಅಭ್ಯರ್ಥಿಗಳು ಹಾಜರಾಗಿದ್ದರು. ಸ್ಪರ್ಧಾತ್ಮಕಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಪೇಪರ್ 2 ರಲ್ಲಿ ಶೇ.50  ಅಂಕ ಮತ್ತು ಬೋಧನಾ ಭಾಷಾ ಸಾಮರ್ಥ್ಯ ಪರೀಕ್ಷೆಯ ಪೇಪರ್3ರಲ್ಲಿ ಕನಿಷ್ಠ ಶೇ.60 ಅಂಕಗಳನ್ನು ಪಡೆಯಬೇಕು ಎಂದು ಅಂಕಗಳನ್ನು ನಿಗದಿಪಡಿಸಿತ್ತು. 

ಪ್ರಶ್ನೆಪತ್ರಿಕೆಯು ತುಂಬಾ ಕಠಿಣವಾಗಿದ್ದರಿಂದ ಕನಿಷ್ಠ ಅಂಕಗಳನ್ನು ಪಡೆಯುವಲ್ಲಿ ಅಭ್ಯರ್ಥಿಗಳು ವಿಫಲರಾಗಿದ್ದರು. ಅಲ್ಲದೆ, 55 ಸಾವಿರ ಅಭ್ಯರ್ಥಿಗಳ ಪೈಕಿ ಕನಿಷ್ಠ 10 ಸಾವಿರ ಅಭ್ಯರ್ಥಿಗಳು ಕೂಡ ಆಯ್ಕೆಯಾಗಿರಲಿಲ್ಲ. ಅಗತ್ಯ ಸಂಖ್ಯೆಯಲ್ಲಿ ಅಭ್ಯರ್ಥಿಗಳುಲಭ್ಯವಾಗದೇ ಇರುವುದರಿಂದ ಮತ್ತು ಅರ್ಹತಾ ಮಾನದಂಡಗಳನ್ನು ಸಡಿಲಗೊಳಿಸಲು ಅಭ್ಯರ್ಥಿಗಳು ಒತ್ತಾಯಿಸಿದ ಹಿನ್ನೆಲೆಯಲ್ಲಿ ಅಂಕಗಳ ನಿಗದಿಯನ್ನು ಸಡಿಲಗೊಳಿಸಿದೆ. 

ಪೇಪರ್ 2 ಮತ್ತು ಪೇಪರ್ ೩ರಲ್ಲಿ ಅಭ್ಯರ್ಥಿಗಳಿಗೆ ಯಾವುದೇ ಕನಿಷ್ಠ ಅಂಕಗಳನ್ನು ನಿಗದಿಪಡಿಸಿಲ್ಲ. ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಯಥಾವತ್ತಾಗಿ ಶೇಕಡಾವಾರು ಅಂಕಗಳನ್ನಾಗಿ ಲೆಕ್ಕಾಚಾರಕ್ಕೆ ಪರಿಗಣಿಸಿನೇಮಕಾತಿ ಪ್ರಕ್ರಿಯೆ ಮುಂದುವರಿಸುವಂತೆ ಸೂಚನೆ ನೀಡಿದೆ. ಮೌಲ್ಯಮಾಪನದಲ್ಲಿ ಎಡವಟ್ಟು ದೂರು ಹಿನ್ನೆಲೆಯಲ್ಲಿ ಮತ್ತೊಮ್ಮೆ ಪರೀಕ್ಷಾ ಪ್ರಕ್ರಿಯೆ ಪರಿಶೀಲಿಸಿ ನಿರ್ಣಯ ಕೈಗೊಂಡಿದೆ.

click me!