ರಾಜಕೀಯ ಒತ್ತಡಕ್ಕೆ ಬಲಿಯಾಯ್ತೆ ನಿರಾಣಿ ಫೌಂಡೇಶನ್?

By ವಿಠ್ಠಲ ಬಲಕುಂದಿ ಬಾಗಲಕೋಟೆFirst Published Sep 23, 2017, 4:01 PM IST
Highlights

ವಿಧಾನಸಭೆ ಚುನಾವಣೆಗೆ ಕಾಲ ಸಮೀಪಿಸುತ್ತಿದ್ದಂತೆ ಜಿಲ್ಲಾ ಬಿಜೆಪಿ ಪಾಳೆಯದಲ್ಲಿ ಸುಂಟರಗಾಳಿ ಎದ್ದಿದೆ.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಚಿಂತನೆ ವ್ಯಾಪಕವಾಗಿರುವಾಗಲೇ ಭಿನ್ನಮತದ ಛಾಯೆ ಆವರಿಸಿಕೊಂಡಿದೆ. ಹುಟ್ಟಿಕೊಂಡಿರುವ ಭಿನ್ನಮತ ಶಮನದ ಬದಲಿಗೆ ಪಕ್ಷದ ರಾಜ್ಯ ನಾಯಕರು ನಿರಾಣಿ ಫೌಂಡೇಶನ್ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕುವ ಮೂಲಕ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ಬಾಗಲಕೋಟೆ: ವಿಧಾನಸಭೆ ಚುನಾವಣೆಗೆ ಕಾಲ ಸಮೀಪಿಸುತ್ತಿದ್ದಂತೆ ಜಿಲ್ಲಾ ಬಿಜೆಪಿ ಪಾಳೆಯದಲ್ಲಿ ಸುಂಟರಗಾಳಿ ಎದ್ದಿದೆ.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಚಿಂತನೆ ವ್ಯಾಪಕವಾಗಿರುವಾಗಲೇ ಭಿನ್ನಮತದ ಛಾಯೆ ಆವರಿಸಿಕೊಂಡಿದೆ. ಹುಟ್ಟಿಕೊಂಡಿರುವ ಭಿನ್ನಮತ ಶಮನದ ಬದಲಿಗೆ ಪಕ್ಷದ ರಾಜ್ಯ ನಾಯಕರು ನಿರಾಣಿ ಫೌಂಡೇಶನ್ ಕಾರ್ಯಕ್ರಮಗಳಿಗೆ ಬ್ರೇಕ್ ಹಾಕುವ ಮೂಲಕ ಮತ್ತಷ್ಟು ತುಪ್ಪ ಸುರಿಯುವ ಕೆಲಸ ಮಾಡಿದ್ದಾರೆ.

ಜಮಖಂಡಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮತ್ತು ಮಾಜಿ ಸಚಿವ ಮುರಗೇಶ ನಿರಾಣಿ ಕುಟುಂಬದ ನಡುವೆ ಜಮಖಂಡಿ ಕ್ಷೇತ್ರದ ಬಿಜೆಪಿ ಟಿಕೆಟ್‌ಗಾಗಿ ನಡೆಯುತ್ತಿರುವ ಪೈಪೋಟಿಯ ಬಿಸಿ ಇದೀಗ ನಿರಾಣಿ ಪೌಂಢೇಶನ್‌ಗೆ ತಟ್ಟಿದೆ.

ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮೊನ್ನೆ ಬೆಂಗಳೂರಿನಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ನಿರಾಣಿ ಕುಟುಂಬದ ವಿರುದ್ಧ ನೇರವಾಗಿ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಗೊತ್ತಾಗಿದೆ.

ಪಕ್ಷದ ರಾಜ್ಯ ನಾಯಕರ ಸಭೆಯಲ್ಲಿ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರು, ನಿರಾಣಿ ಕುಟುಂಬ ಎಂಆರ್‌ಎನ್ ಫೌಂಡೇಶನ್‌ನಡಿ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಜಮಖಂಡಿ ಕ್ಷೇತ್ರದಲ್ಲೇ ಹೆಚ್ಚಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ನಿರಾಣಿ ಕುಟುಂಬದವರು ಚುನಾವಣೆಗೆ

ನಿಲ್ಲಬೇಕು ಎನ್ನುವ ಉದ್ದೇಶದಿಂದಲೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಇದರಿಂದ ತಮಗೆ ಹಾಗೂ ಪಕ್ಷಕ್ಕೆ ತೊಂದರೆ ಆಗಲಿದೆ. ಹಾಗಾಗಿ ಫೌಂಡೇಶನ್ ವತಿಯಿಂದ ನಡೆಸುತ್ತಿರುವ ಕಾರ್ಯಕ್ರಮಗಳನ್ನು ನಡೆಸದಂತೆ ಸೂಚಿಸಬೇಕು ಎನ್ನುವ ಒತ್ತಾಯ ಮಾಡಿದಾಗ ಪಕ್ಷದ ವರಿಷ್ಠರು ಶ್ರೀಕಾಂತ ಕುಲಕರ್ಣಿ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿ ಸಭೆಯಲ್ಲಿದ್ದ ಮಾಜಿ ಸಚಿವ ಮುರಗೇಶ ನಿರಾಣಿ ಅವರಿಗೆ ಇನ್ನು ಮುಂದೆ ನಿರಾಣಿ ಫೌಂಡೇಶನ್ ವತಿಯಿಂದ ಸದ್ಯಕ್ಕೆ ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದಂತೆ ಮೌಖಿಕ ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ. ನಿರಾಣಿ ಕುಟುಂಬದ ಉದ್ದೇಶ ಏನಾಗಿದೆಯೋ ಗೊತ್ತಿಲ್ಲ. ಆದರೆ ಕಳೆದೊಂದು ವರ್ಷದಿಂದ ನಿರಾಣಿ ಫೌಂಡೇಶನ್ ಉಚಿತ ಆರೋಗ್ಯ ಶಿಬಿರ, ಯುವಕರಿಗೆ ಸ್ವಉದ್ಯೋಗ ಕೈಗೊಳ್ಳಲು ತರಬೇತಿ ಶಿಬಿರ, ಸ್ವ ಉದ್ಯೋಗ ಕೈಗೊಳ್ಳಲು ಆರ್ಥಿಕ ಸಹಕಾರ, ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊ ಳ್ಳುತ್ತಿದೆ. ಇದುವರೆಗೂ ಜಿಲ್ಲಾದ್ಯಂತ ಅಂದಾಜು 5-6 ಸಾವಿರ ಜನ ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಅನೇಕ ಜನ ಯುವಕರು ಸ್ವ ಉದ್ಯೋಗ ತರಬೇತಿ ಪಡೆದುಕೊಂಡಿದ್ದಾರೆ.

ಆದರೆ ಉಚಿತ ಆರೋಗ್ಯ ತಪಾಸಣೆ, ಸ್ವ ಉದ್ಯೋಗ ಶಿಬಿರಗಳನ್ನು ಕೇವಲ ಜಮಖಂಡಿ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಜಿಲ್ಲೆಯ ಮಹಾಲಿಂಗಪುರ, ಬೀಳಗಿ, ಸಾವಳಗಿ ಸೇರಿದಂತೆ ಅನೇಕ ಕಡೆಗಳಲ್ಲಿ ಹಮ್ಮಿಕೊಂಡಿದೆ. ಇದೀಗ ಕೆರೂರನಲ್ಲೂ ಆರೋಗ್ಯ ಶಿಬಿರ ಹಮ್ಮಿಕೊಂಡಿದೆ.

ಆದರೆ ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಜಮಖಂಡಿ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವ ಇರಾದೆಯೊಂದಿಗೆ ತಮ್ಮ ಕ್ಷೇತ್ರದಲ್ಲಿಯೇ ಫೌಂಡೇಶನ್ ಹೆಚ್ಚಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎನ್ನುವ ದೂರು ನೀಡುವ ಜತೆಗೆ ಕೆ.ಎಸ್. ಈಶ್ವರಪ್ಪ ಅವರ ರಾಯಣ್ಣ ಬ್ರಿಗೇಡ್‌ಗೆ ಬ್ರೇಕ್ ಹಾಕಿದಂತೆ ನಿರಾಣಿ ಫೌಂಡೇಶನ್ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಬೇಕು ಎನ್ನುವ ಒತ್ತಡಕ್ಕೆ ಮಣಿದ ಬಿಜೆಪಿ ಮುಖಂಡರು ನಿರಾಣಿ ಫೌಂಡೇಶನ್ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ ಮುರಗೇಶ ನಿರಾಣಿ ಅವರಿಗೆ ಮೌಖಿಕ ಆದೇಶ ನೀಡಿದ್ದಾರೆ ಎಂದು ಮೂಲಗಳು ಖಚಿತ ಪಡಿಸಿವೆ.

ಮಾಜಿ ಸಚಿವ ಮುರಗೇಶ ನಿರಾಣಿ ಈಗಾಗಲೇ ಹತ್ತಾರು ಬಾರಿ ತಾವು ಬೀಳಗಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಹೇಳಿದ್ದಾರಾದರೂ ಜಮಖಂಡಿ ಕ್ಷೇತ್ರದ ಬಗೆಗಿನ ವ್ಯಾಮೋಹ ಕಡಿಮೆ ಆಗಿಲ್ಲ. ಒಂದೊಮ್ಮೆ ಅವರು ಬೀಳಗಿಯಿಂದ ಸ್ಪರ್ಧಿಸಿದರೂ ಅವರ ಸಹೋದರ ಸಂಗಮೇಶ ನಿರಾಣಿ ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನುವುದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಅವರ ಅನುಮಾನವಾಗಿದೆ. ಆದ್ದರಿಂದ ನಿರಾಣಿ ಫೌಂಡೇಶನ್ ಮೌಖಿಕವಾಗಿ ಬ್ರೇಕ್ ಹಾಕಿದೆ.


 

 

click me!