
ಕಲ್ಕತ್ತಾ (ಜೂ. 13): ಪಶ್ಚಿಮ ಬಂಗಾಳ ಸರ್ಕಾರ ರಂಜಾನ್ ಪ್ರಯುಕ್ತ ರಾಜ್ಯದಲ್ಲಿ 5 ದಿನಗಳ ಕಾಲ ರಜೆ ಘೋಷಿಸಿದೆ ಎಂಬಂತಹ ಸಂದೇಶದ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಜೂ.10 ರಂದು @SUNDARmyth @vpalanisamy2010 ಎಂಬ ಟ್ವೀಟರ್ ಹ್ಯಾಂಡಲ್‌ನಿಂದ ಈ ಕುರಿತ ಅಧಿಸೂಚನಾ ಪತ್ರವನ್ನು ಶೇರ್ ಮಾಡಲಾಗಿದೆ. ಅದರಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ ಮುಸ್ಲಿಮರನ್ನು ಓಲೈಸುತ್ತಿದ್ದು, ಪಶ್ಚಿಮ ಬಂಗಾಳ ಈಗ ಮುಸ್ಲಿಂ ರಾಜ್ಯವಾಗಿದೆ ಎಂದು ಟೀಕೆ ಮಾಡಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪತ್ರದಲ್ಲಿ ಜೂ.12 ರಿಂದ ಜೂ.16 ರ ವರೆಗೆ ಪಶ್ಚಿಮ ಬಂಗಾಳ ಸರ್ಕಾರ ರಜೆ ಘೋಷಿಸಿದೆ ಎಂದು ಹೇಳಲಾಗಿದೆ. ಐಎಎಸ್ ಅಧಿಕಾರಿ ಸಂಜಯ್ ದೀಕ್ಷಿತ್ ಅವರೂ ಕೂಡ ಈ ಪ್ರಕಟಣಾ ಪತ್ರವನ್ನು ಶೇರ್ ಮಾಡಿದ್ದು, ‘ಮುಸ್ಲಿಂ ರಾಜ್ಯವಾದ ಪಶ್ಚಿಮ ಬಂಗಾಳ’ ಎಂಬ ಅಡಿಬರಹವನ್ನೂ ಬರೆದಿದ್ದರು. ಅದನ್ನು 300 ಕ್ಕೂ ಅಧಿಕ ಬಾರಿ ರೀಟ್ವೀಟ್ ಮಾಡಲಾಗಿತ್ತು.
ಇಂಡಿಪೆಂಡೆಂಟ್, ಬಾಂಗ್ಲಾ ವೆಬ್‌ಸೈಟ್ ಕೂಡ ಸರ್ಕಾರ ರಜೆ ಘೋಷಿಸಿದೆ ಎಂದು ವರದಿ ಮಾಡಿತ್ತು. ಅನಂತರ ಲೇಖನವನ್ನು ಅಳಿಸಿಹಾಕಲಾಗಿದೆ. ಇಷ್ಟೇ ಅಲ್ಲದೆ ವಾಟ್ಸ್‌ಆ್ಯಪ್‌ನಲ್ಲಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ಓಲೈಕೆಗೆ ಯತ್ನಿಸುತ್ತಿದೆ. ಅದೇ ಕಾರಣದಿಂದಾಗಿ ಈದ್‌ಗೆ ದೀರ್ಘ ರಜೆ ನೀಡಿದೆ ಎಂದು ವೈರಲ್ ಮಾಡಲಾಗಿದೆ. ಆದರೆ ನಿಜಕ್ಕೂ ಪಶ್ಚಿಮ ಬಂಗಾಳ ಸರ್ಕಾರ ಈದ್ ಪ್ರಯುಕ್ತ 5 ದಿನ ರಜೆ ನೀಡಿರುವುದು ನಿಜವೇ ಎಂದು ಪರಿಶೀಲನೆಗೆ ಮುಂದಾದಾಗ ಇದೊಂದು ಸುಳ್ಳು ಸುದ್ದಿ ಎಂಬುದು ಸ್ಪಷ್ಟವಾಗಿದೆ.
ಈ ರೀತಿಯ ಪ್ರಕಟಣೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಪ್ರಾರಂಭವಾದ ತಕ್ಷಣ ಕೊಲ್ಕತ್ತಾ ಪೊಲೀಸರು ಇದೊಂದು ಸುಳ್ಳು ಸುದ್ದಿ. ಈ ರೀತಿ ಸುಳ್ಳು ಪ್ರಕಟಣೆ ಹೊರಡಿಸಿರುವುದು ಕಾನೂನು ಪ್ರಕಾರ ಅಪರಾಧ. ಇದರ ವಿರುದ್ಧ ಶೀಘ್ರ ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.