ಧಾರವಾಡ ಸಮ್ಮೇಳನ: ಪುಸ್ತಕ ಮಳಿಗೆಗೆ ಮೊದಲ ದಿನವೇ ಲಕ್ಷ ಜನ

Published : Jan 05, 2019, 11:25 AM IST
ಧಾರವಾಡ ಸಮ್ಮೇಳನ: ಪುಸ್ತಕ ಮಳಿಗೆಗೆ ಮೊದಲ ದಿನವೇ ಲಕ್ಷ ಜನ

ಸಾರಾಂಶ

ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂದಾಜು 80 ಸಾವಿರದಿಂದ ಒಂದು ಲಕ್ಷ ಜನ ಪುಸ್ತಕ ಮಳಿಗೆಗಳಿಗೆ ಭೇಟಿ ನೀಡಿದ್ದಾರೆ. ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಸುಮಾರು 1 ಲಕ್ಷ ರು.ನಷ್ಟುಪುಸ್ತಕ ಮಾರಾಟವಾಗಿದೆ.  ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಪುಸ್ತಕಗಳಿಗೆ ಹೆಚ್ಚು ಬೇಡಿಕೆ. ಮೈಸೂರು ಸಮ್ಮೇಳನಕ್ಕೆ ಹೋಲಿಸಿದರೆ ಇಲ್ಲಿ ಜನವೂ ಹೆಚ್ಚು, ವ್ಯಾಪಾರವೂ ಜಾಸ್ತಿ. 511 ಮಳಿಗೆಗಳಲ್ಲಿ ಪುಸ್ತಕ ಮಾರಾಟವಾಗಿದೆ. 

ಧಾರವಾಡ (ಜ.05): ಅಂದಾಜು 80 ಸಾವಿರದಿಂದ ಒಂದು ಲಕ್ಷ ಜನ ಪುಸ್ತಕ ಮಳಿಗೆಗಳಿಗೆ ಭೇಟಿ. ಪ್ರಮುಖ ಪುಸ್ತಕ ಮಳಿಗೆಗಳಲ್ಲಿ ಸುಮಾರು 1 ಲಕ್ಷ ರು.ನಷ್ಟುಪುಸ್ತಕ ಮಾರಾಟ. ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಪುಸ್ತಕಗಳಿಗೆ ಹೆಚ್ಚು ಬೇಡಿಕೆ. ಮೈಸೂರು ಸಮ್ಮೇಳನಕ್ಕೆ ಹೋಲಿಸಿದರೆ ಇಲ್ಲಿ ಜನವೂ ಹೆಚ್ಚು, ವ್ಯಾಪಾರವೂ ಜಾಸ್ತಿ. 511 ಮಳಿಗೆಗಳಲ್ಲಿ ಪುಸ್ತಕ ಮಾರಾಟ- ಇವು ಧಾರವಾಡ ಸಾಹಿತ್ಯ ಸಮ್ಮೇಳನದ ಮೊದಲ ದಿನದ ಪುಸ್ತಕ ಮಾರಾಟದ ಸಂಕ್ಷಿಪ್ತ ವಿವರ.

ಸಾಮಾನ್ಯವಾಗಿ ಪುಸ್ತಕ ಮಳಿಗೆಗಳಿಗೆ ಸಾಹಿತ್ಯ ಸಮ್ಮೇಳನದ ಕೊನೆಯ ದಿನ ಜಾಸ್ತಿ ಜನ ಬರುವುದು ವಾಡಿಕೆ. ಆದರೆ ಧಾರವಾಡ ಸಮ್ಮೇಳನದ ವಿಶೇಷ ಏನೆಂದರೆ ಮೊದಲನೆಯ ದಿನವೇ ಭಾರಿ ಜನ ಬಂದಿದ್ದಾರೆ. ಜನ ಬಂದಷ್ಟುಪುಸ್ತಕ ವ್ಯಾಪಾರ ಆಗಿಲ್ಲದಿದ್ದರೂ ಪುಸ್ತಕ ಪ್ರಕಾಶಕರಿಗೆ, ಮಾರಾಟಗಾರರಿಗೆ ಬೇಸರವಂತೂ ಆಗಿಲ್ಲ.

ಊಟಕ್ಕೆ ಹೋಗುವ ದಾರಿಯೂ ಪುಸ್ತಕ ಮಳಿಗೆಯ ದಾರಿಯೂ ಒಂದೇ ಆಗಿರುವುದರಿಂದ ಸ್ವಲ್ಪ ಹೊತ್ತು ಪುಸ್ತಕ ಮಳಿಗೆಗಳು ಪೂರ್ತಿಯಾಗಿ ಮುಚ್ಚಿ ಹೋದವು. ಈ ಸಂದರ್ಭದಲ್ಲಿ ಪುಸ್ತಕ ಮಾರಾಟಕ್ಕೆ ತೊಂದರೆಯಾಗಿದ್ದು ಹೊರತುಪಡಿಸಿದರೆ ಉಳಿದಂತೆ ಜನ ಸರಾಗವಾಗಿ ಓಡಾಡುತ್ತಿದ್ದರು. ಸಾಹಿತ್ಯ ಪರಿಷತ್ತು, ಹಂಪಿ ವಿವಿ ಪುಸ್ತಕ ಮಳಿಗೆಗಳಲ್ಲಿ ಜಾಸ್ತಿ ರಿಯಾಯಿತಿ ಇತ್ತು. ಜನವೂ ಜಾಸ್ತಿ ಇದ್ದರು. ಉಳಿದ ಯಾವ ಪುಸ್ತಕ ಮಳಿಗೆಯಲ್ಲೂ ಜನ ಖಾಲಿ ಇರಲಿಲ್ಲ.

ಕ್ಲಾಸಿಕ್‌ ಸಾಹಿತ್ಯ ಕೃತಿಗಳನ್ನು ಹುಡುಕುವವರ ಸಂಖ್ಯೆ ಕಡಿಮೆ ಇತ್ತು. ಜಾಸ್ತಿ ಮಂದಿ ಸ್ಪರ್ಧಾತ್ಮಕ ಪರೀಕ್ಷೆ ಕುರಿತ ಪುಸ್ತಕ, ವ್ಯಕ್ತಿ ಚಿತ್ರ ಇತ್ಯಾದಿ ಪುಸ್ತಕಗಳನ್ನು ವಿಚಾರಿಸುತ್ತಿದ್ದರು. ವಚನ, ಕಾದಂಬರಿ, ವ್ಯಾಕರಣ ಪುಸ್ತಕಗಳಿಗೂ ಬೇಡಿಕೆ ಇತ್ತು. ಪುಸ್ತಕ ಮಳಿಗೆಗಳಲ್ಲಿ ಹಳೆಯ ಕ್ಲಾಸಿಕ್‌ ಕೃತಿಗಳ ಕೊರತೆಯೂ ಕಾಣಿಸುತ್ತಿತ್ತು. ಮೊದಲ ದಿನ ಎಲ್ಲಾ ಪುಸ್ತಕಗಳನ್ನೂ ಪ್ರದರ್ಶನಕ್ಕೆ ಇಟ್ಟಿರುವ ಸಾಧ್ಯತೆ ಇರಲಿಲ್ಲ. ಪುಸ್ತಕ ಮಳಿಗೆಯ ಆರಂಭದಲ್ಲೇ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಕಂಬಾರರ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಇತ್ತು. ಬಹುತೇಕರು ಅಲ್ಲಿಗೆ ಭೇಟಿ ನೀಡಿಯೇ ಮುಂದೆ ಹೋಗುತ್ತಿದ್ದರು.

ಪುಸ್ತಕ ಮಳಿಗೆಗಳಲ್ಲಿ ಧೂಳಿನದೇ ದೊಡ್ಡ ಸಮಸ್ಯೆ. ಪುಸ್ತಕ ಕೊಳ್ಳುವವರಿಗೆ, ಪುಸ್ತಕ ಮಾರುವವರಿಗೆ ಹೀಗೆ ಎಲ್ಲರಿಗೂ ಧೂಳಿನ ಕಾಟ ಸಾಮಾನ್ಯವಾಗಿತ್ತು. ಸಪ್ನ ಪ್ರಕಾಶನ, ನವಕರ್ನಾಟಕ, ಸಾವಣ್ಣ ಪ್ರಕಾಶನ, ಛಂದ ಪ್ರಕಾಶನ, ಮನೋಹರ ಗ್ರಂಥಮಾಲೆ, ಅಕ್ಷರ ಬುಕ್‌ ಹೌಸ್‌, ಸಮಾಜ ಪುಸ್ತಕಾಲಯ, ಪುಸ್ತಕ ಮನೆ,ಅಭಿನವ ಪ್ರಕಾಶನ ಹೀಗೆ ಬಹುತೇಕ ಪ್ರಮುಖ ಪುಸ್ತಕ ಮಳಿಗೆಗಳು ಇವೆ. ಶನಿವಾರ ಮತ್ತು ಭಾನುವಾರ ಹೆಚ್ಚು ಪುಸ್ತಕ ಮಾರಾಟ ಆಗುವ ನಿರೀಕ್ಷೆ ಎಲ್ಲರಲ್ಲೂ ಇದೆ.

ಹಳೆಯ ಪುಸ್ತಕಗಳಿಗೆ ಭಾರಿ ಬೇಡಿಕೆ:

ಹಳೆಯ ಪುಸ್ತಕ ಮಾರಾಟ ಮಳಿಗೆಗಳು ದಿನವಿಡೀ ತುಂಬಿದ್ದವು. ಜಾಸ್ತಿ ರಿಯಾಯಿತಿ ಮತ್ತು ಹಳೆಯ ಕ್ಲಾಸಿಕ್‌ ಪುಸ್ತಕಗಳು ದೊರಕುತ್ತಿದ್ದುದರಿಂದ ಹೆಚ್ಚು ಜನ ಹಳೆಯ ಪುಸ್ತಕ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿದರು. ಅದರಲ್ಲೂ ವಿದ್ಯಾರ್ಥಿಗಳ ಸಂಖ್ಯೆ ಇಲ್ಲಿ ಜಾಸ್ತಿ ಇತ್ತು. ಜಾಸ್ತಿ ರಿಯಾಯಿತಿಯಲ್ಲಿ ಒಳ್ಳೆಯ ಪುಸ್ತಕಗಳು ಸಿಗುತ್ತಿವೆ, ಇದರಿಂದ ನಮಗೆ ತುಂಬಾ ಪುಸ್ತಕ ಕೊಳ್ಳುವುದು ಸಾಧ್ಯವಾಯಿತು ಎಂದು ಕಾಲೇಜು ವಿದ್ಯಾರ್ಥಿ ಮಲ್ಲಿಕಾರ್ಜುನ ಶಿವಳ್ಳಿ ಹೇಳಿದರು.

-ರಾಜೇಶ್ ಶೆಟ್ಟಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

sculptor makeup: ಹುಡುಗರೇ ಆಹಾ ಚೂಪಾದ ಮೂಗು ಎಂಥಾ ಬ್ಯೂಟಿ ಅಂತ ಮರುಳಾಗದಿರಿ ಜೋಕೆ..!
ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮಾನಸಿಕ ಅಸ್ವಸ್ಥ ಎಂದ ಪಾಕಿಸ್ತಾನ ಸೇನೆ, ಕೋಲಾಹಲ ಶುರು