ಡಿಎಚ್ ಶಂಕರಮೂರ್ತಿ ಸೇಫ್..! ಬಿಜೆಪಿ ಪರ ನಿಲ್ಲಲು ಜೆಡಿಎಸ್ ಹಠಾತ್ ನಿಲುವು?

Published : Jun 14, 2017, 11:47 AM ISTUpdated : Apr 11, 2018, 12:53 PM IST
ಡಿಎಚ್ ಶಂಕರಮೂರ್ತಿ ಸೇಫ್..! ಬಿಜೆಪಿ ಪರ ನಿಲ್ಲಲು ಜೆಡಿಎಸ್ ಹಠಾತ್ ನಿಲುವು?

ಸಾರಾಂಶ

ಈಗಿರುವ ವ್ಯವಸ್ಥೆಯಂತೆ ಕಾಂಗ್ರೆಸ್ಸಿಗೆ ಬೆಂಬಲ ನೀಡುವುದರಿಂದ ಏನು ಲಾಭ ಎಂಬ ದಿಕ್ಕಿನಲ್ಲಿ ಜೆಡಿಎಸ್‌ ನಾಯಕರು ಚಿಂತನೆ ನಡೆಸಿದ್ದರು. ಬಿಜೆಪಿಗೆ ಬೆಂಬಲ ನೀಡಿರುವುದರಿಂದ ಉಪಸಭಾಪತಿ ಸ್ಥಾನ ಪಕ್ಷಕ್ಕೆ ಸಿಕ್ಕಿದೆ. ಇದೇ ಸ್ಥಿತಿ ಮುಂದುವರೆದರೆ ಬಿಜೆಪಿಗೆ ನೀಡಿರುವ ಬೆಂಬಲ ಹಿಂಪಡೆದು ಕಾಂಗ್ರೆಸ್ಸಿಗೆ ಯಾಕೆ ನೀಡಬೇಕೆಂಬ ವಾದವನ್ನು ಪಕ್ಷದ ಹಲವು ಶಾಸಕರು ಪ್ರಸ್ತಾಪಿಸಿದ್ದರು. ಹೀಗಾಗಿ, ಸಭಾಪತಿ ಸ್ಥಾನವನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಟ್ಟರೆ ಕಾಂಗ್ರೆಸ್ಸಿಗೆ ಬೆಂಬಲ ನೀಡಬೇಕೆಂಬ ಅಭಿಪ್ರಾಯ ಬಲವಾಗಿ ಕೇಳಿಬಂದಿತ್ತು.

ಬೆಂಗಳೂರು: ಸತತ ಏಳು ವರ್ಷಗಳಿಂದ ವಿಧಾನಪರಿಷತ್ತಿನ ಸಭಾಪತಿ ಸ್ಥಾನ ಅಲಂಕರಿಸಿರುವ ಬಿಜೆಪಿಯ ಡಿ.ಎಚ್‌.ಶಂಕರಮೂರ್ತಿ ಅವರ ಕುರ್ಚಿಗೆ ಎದುರಾಗಿದ್ದ ಕಂಟಕ ನಿವಾರಣೆಯಾಗುವಂತೆ ಕಾಣುತ್ತಿದೆ. ಹಾಗಂತ ಶಂಕರಮೂರ್ತಿ ಅವರು ಸಂಪೂರ್ಣ ಸುರಕ್ಷಿತ ಎನ್ನುವಂತಿಲ್ಲ. ಕೇವಲ ಎರಡು ಮತಗಳ ಅಂತರದಲ್ಲಿ ಸೋಲು-ಗೆಲುವು ನಿರ್ಧರಿತವಾಗಲಿದೆ. ಒಂದು ವೇಳೆ ಅವಿಶ್ವಾಸ ನಿರ್ಣಯದ ಹಿನ್ನೆಲೆಯಲ್ಲಿ ಮತದಾನದ ನಡೆಯುವ ವೇಳೆ ಜೆಡಿಎಸ್‌'ನ ಸದಸ್ಯರು ಗೈರುಹಾಜರಾದರೆ ಅಥವಾ ಪಕ್ಷೇತರ ಸದಸ್ಯರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ಡಿ.ಯು.ಮಲ್ಲಿಕಾರ್ಜುನ ಅವರು ಕಾಂಗ್ರೆಸ್‌ ಕಡೆ ವಾಲಿದಲ್ಲಿ ಶಂಕರಮೂರ್ತಿ ಅವರಿಗೆ ತೊಂದರೆ ನಿಶ್ಚಿತ. ಆದರೆ, ಯತ್ನಾಳ ಮತ್ತು ಮಲ್ಲಿಕಾರ್ಜುನ ಅವರು ಸುಲಭವಾಗಿ ಕಾಂಗ್ರೆಸ್‌ ಕಡೆಗೆ ಹೋಗಲಿಕ್ಕಿಲ್ಲ ಎಂಬ ವಿಶ್ವಾಸ ಬಿಜೆಪಿಯಲ್ಲಿದೆ.

ಮಂಗಳವಾರ ಸಂಜೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಅವರು ಜೆಡಿಎಸ್‌ ವರಿಷ್ಠ ನಾಯಕ ಎಚ್‌.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿ ಬೆಂಬ ಲ ಕೋರಿದರು. ಆದರೆ, ಗೌಡರು ಏನನ್ನೂ ಸ್ಪಷ್ಟವಾಗಿ ಹೇಳದೆ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಮತ್ತು ಶಾಸಕರು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿ ಪರಮೇಶ್ವರ್‌ ಅವರನ್ನು ಬೀಳ್ಕೊಟ್ಟಿದ್ದರು.

ಅದರ ಬೆನ್ನಲ್ಲೇ ರಾತ್ರಿ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ವಿಧಾನಪರಿಷತ್‌ ಸದಸ್ಯರು ಸಭೆ ಸೇರಿ ಸುದೀರ್ಘ ಸಮಾಲೋಚನೆ ನಂತರ ಈಗಿರುವ ವ್ಯವಸ್ಥೆಯಂತೆ ಬಿಜೆಪಿಗೇ ಬೆಂಬಲ ಮುಂದುವರೆಸುವ ಒಲವು ತೋರಿದರು. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಬೆಂಬಲ ಮುಂದುವರೆಯಲಿ ಎಂದು ಸಲಹೆ ನೀಡಿ ದರು. ಆದರೆ ಅಂತಿಮ ನಿರ್ಧಾರವನ್ನು ದೇವೇಗೌಡರ ವಿವೇಚನೆಗೆ ಬೀಡಲು ಸಭೆ ನಿರ್ಧರಿಸಿತು. ಜೆಡಿಎಸ್‌ನ ಈ ನಿಲುವು ಕಾಂಗ್ರೆಸ್ಸಿಗೆ ಆಘಾತವನ್ನುಂಟು ಮಾಡಿದ್ದು, ಸುಮ್ಮನೆ ಕುಳಿತುಕೊಳ್ಳದ ಕಾಂಗ್ರೆಸ್‌ ಪಕ್ಷ ಮತದಾನದ ವರೆಗೂ ತಂತ್ರ ಹೆಣೆಯಲು ಪ್ರಯತ್ನಿಸುತ್ತಿದೆ. ಹೇಗಾದರೂ ಮಾಡಿ ಸಭಾಪತಿ ಶಂಕರಮೂರ್ತಿ ಅವರನ್ನು ಪದಚ್ಯುತಗೊಳಿಸಬೇಕು ಎಂಬ ನಿಲುವಿಗೆ ಬಂದಂತಿದೆ.

ಜೆಡಿಎಸ್‌ ನಿರ್ಧಾರಕ್ಕೆ ಕಾರಣ?: ಈಗಿರುವ ವ್ಯವಸ್ಥೆಯಂತೆ ಕಾಂಗ್ರೆಸ್ಸಿಗೆ ಬೆಂಬಲ ನೀಡುವುದರಿಂದ ಏನು ಲಾಭ ಎಂಬ ದಿಕ್ಕಿನಲ್ಲಿ ಜೆಡಿಎಸ್‌ ನಾಯಕರು ಚಿಂತನೆ ನಡೆಸಿದ್ದರು. ಬಿಜೆಪಿಗೆ ಬೆಂಬಲ ನೀಡಿರುವುದರಿಂದ ಉಪಸಭಾಪತಿ ಸ್ಥಾನ ಪಕ್ಷಕ್ಕೆ ಸಿಕ್ಕಿದೆ. ಇದೇ ಸ್ಥಿತಿ ಮುಂದುವರೆದರೆ ಬಿಜೆಪಿಗೆ ನೀಡಿರುವ ಬೆಂಬಲ ಹಿಂಪಡೆದು ಕಾಂಗ್ರೆಸ್ಸಿಗೆ ಯಾಕೆ ನೀಡಬೇಕೆಂಬ ವಾದವನ್ನು ಪಕ್ಷದ ಹಲವು ಶಾಸಕರು ಪ್ರಸ್ತಾಪಿಸಿದ್ದರು. ಹೀಗಾಗಿ, ಸಭಾಪತಿ ಸ್ಥಾನವನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಟ್ಟರೆ ಕಾಂಗ್ರೆಸ್ಸಿಗೆ ಬೆಂಬಲ ನೀಡಬೇಕೆಂಬ ಅಭಿಪ್ರಾಯ ಬಲವಾಗಿ ಕೇಳಿಬಂದಿತ್ತು. ಒಂದು ಹಂತದಲ್ಲಿ ಕಾಂಗ್ರೆಸ್‌ ಕೂಡ ಇದಕ್ಕೆ ತಾತ್ವಿಕವಾಗಿ ಒಪ್ಪಿಕೊಂಡಿತ್ತು. ಬಿಜೆಪಿಯಿಂದ ಈ ಸ್ಥಾನ ಕಿತ್ತುಕೊಳ್ಳಬೇಕೆಂಬ ಹಟಕ್ಕೆ ಬಿದ್ದ ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ಗೆ ಸಭಾಪತಿ ಸ್ಥಾನ ನೀಡಲು, ಅದರಲ್ಲೂ ಹಿರಿಯ ಸದಸ್ಯ ಬಸವರಾಜ ಹೊರಟ್ಟಿಅವರನ್ನು ಸಭಾಪತಿ ಮಾಡಲು ಸಹಮತವಿದೆ ಎಂಬ ಸಂದೇಶವನ್ನೂ ಜೆಡಿಎಸ್‌ ನಾಯಕರಿಗೆ ರವಾನಿಸಿದ್ದರು. ಆದರೂ ಜೆಡಿಎಸ್‌ ನಾಯಕರು ಕಾಂಗ್ರೆಸ್‌ ನಂಬದೆ ಬಿಜೆಪಿಗೇ ಬೆಂಬಲ ಮುಂದುವರೆಸುವ ತೀರ್ಮಾ ನ ಕೈಗೊಂಡಿರುವುದರಿಂದ ಆತಂಕಕ್ಕೀಡಾಗಿದ್ದ ಬಿಜೆಪಿ ಮತ್ತು ಶಂಕರಮೂರ್ತಿ ಸದ್ಯಕ್ಕೆ ನಿಟ್ಟು ಸಿರು ಬಿಟ್ಟಂತಾಗಿದೆ. ಇನ್ನು ಕಾಂಗ್ರೆಸ್‌ ಹೊಸ ತಂತ್ರ ಹೆಣೆಯದೇ ಇದ್ದಲ್ಲಿ ಶಂಕರಮೂರ್ತಿ ಇನ್ನಾರು ತಿಂಗಳು ನಿರಾತಂಕವಾಗಿ ಸಭಾಪತಿ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ.

ನಿನ್ನೆ ಏನೇನಾಯ್ತು?
ಪರಿಷತ್ತಿನಲ್ಲಿ ಸಭಾಪತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಸದನ ಒಪ್ಪಿಗೆ
ನಿರ್ಣಯ ಮಂಡನೆ, ಚರ್ಚೆಗೆ ಸೂಕ್ತ ಸಮಯ ನಿಗದಿ ಮಾಡುವುದಾಗಿ ಖುದ್ದು ಶಂಕರಮೂರ್ತಿ ಘೋಷಣೆ
ಮಧ್ಯಾಹ್ನ ವಿಧಾನಸೌಧಕ್ಕೆ ಬಂದರೂ ಕಲಾಪಕ್ಕೆ ಆಗಮಿಸದ ಶಂಕರಮೂರ್ತಿ
ಸಂಜೆ ದೇವೇಗೌಡರ ನಿವಾಸಕ್ಕೆ ತೆರಳಿ ಅವಿಶ್ವಾಸಕ್ಕೆ ಬೆಂಬಲ ಕೋರಿದ ಪರಂ
ರಾತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಆ ಪಕ್ಷದ ಪರಿಷತ್‌ ಸದಸ್ಯರ ಸಭೆ
ಅಂತಿಮವಾಗಿ ಈಗಿರುವಂತೆ ಬಿಜೆಪಿಗೇ ಬೆಂಬಲ ಮುಂದುವರೆಸಲು ಒಲವು
ಈ ಸಂಬಂಧ ಅಂತಿಮ ತೀರ್ಮಾನ ವರಿಷ್ಠ ನಾಯಕ ದೇವೇಗೌಡರಿಗೆ ಬಿಡಲು ನಿರ್ಧಾರ. ಇಂದು ಸ್ಪಷ್ಟಚಿತ್ರಣ ಸಾಧ್ಯತೆ

ಜೆಡಿಎಸ್ ನಿಲುವೇನು?
ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್‌'ಗೆ ಬಿಜೆಪಿ ಮತ್ತು ಕಾಂಗ್ರೆಸ್‌ ಎರಡೂ ಒಂದೇ
ಆದರೆ, ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಂಡಲ್ಲಿ ತಪ್ಪು ಸಂದೇಶ ರವಾನೆಯಾಗುವ ಆತಂಕ
ಜೆಡಿಎಸ್‌'ನ ಕೆಲ ಶಾಸಕರಿಂದ ಶಂಕರ ಮೂರ್ತಿ ಮುಂದುವರೆಸಲು ವಿರೋಧ
ಅವಿಶ್ವಾಸ ಪ್ರಸ್ತಾಪ ಮುಂದಿಟ್ಟಿದ್ದೇ ಜೆಡಿಎಸ್‌'ನ ಕೆಲವು ಸದಸ್ಯರು
ಎಚ್‌ಡಿಕೆಗೆ ಈಗಿರುವ ವ್ಯವಸ್ಥೆಯನ್ನು ಮುಂದುವರೆಸಲು ಆಸಕ್ತಿ
ಗಣಿ ಕಪ್ಪ ಹಗರಣಕ್ಕೆ ಮರುಜೀವ ನೀಡಿದ್ದು ಕಾಂಗ್ರೆಸ್ಸೆಂಬ ಕೋಪ ಎಚ್‌'ಡಿಕೆಗೆ
ಸಭಾಪತಿ ಸ್ಥಾನ ಸಿಗುವುದಾದರೆ ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳಬಹುದು ಎಂಬ ಇಂಗಿತ ದೇವೇಗೌಡರದ್ದು

ಕನ್ನಡಪ್ರಭ ವಾರ್ತೆ
epaper.kannadaprabha.in

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಮಾತುಕತೆಗೆಂದು ಕರೆಸಿ ಎಂಜಿನಿಯರಿಂಗ್ ವಿದ್ಯಾರ್ಥಿಯ ಮಸಣಕ್ಕೆ ಅಟ್ಟಿದ ಗರ್ಲ್‌ಫ್ರೆಂಡ್ ಮನೆಯವರು
ಕೆನಡಾದ ಮಹಿಳಾ ವೈದ್ಯರಿಗೆ ತೋರಿಸಬಾರದನ್ನು ತೋರಿಸಿದ ಭಾರತೀಯ ಯುವಕನ ಬಂಧನ