ರಾಜ್ಯಾಧ್ಯಕ್ಷ ಹುದ್ದೆ ಬದಲಾವಣೆ: ದೊಡ್ಡ ಗೌಡರು ಹೇಳಿದ್ದೇನು?

First Published Jul 21, 2018, 8:01 PM IST
Highlights

ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ಬದಲಾವಣೆ?

ಜೆಡಿಎಸ್ ವರಿಷ್ಠ ದೇವೆಗೌಡ ಹೇಳೊದೇನು?

ಸಿಎಂ, ರಾಜ್ಯಾಧ್ಯಕ್ಷ ಹುದ್ದೆ ನಿಭಾಯಿಸೋದು ಕಷ್ಟ

ರಾಜ್ಯಾಧ್ಯಕ್ಷ ಹುದ್ದೆಗೆ ಹೊಸಬರ ನೇಮಕಕ್ಕೆ ಒಲವು

ಪದಾಧಿಕಾರಿಗಳ ಬದಲಾವಣೆ ಕೂಡ ನಡೆಯಲಿದೆ

ಬೆಂಗಳೂರು(ಜು.21): ಸಿಎಂ ಕುಮಾರಸ್ವಾಮಿ ಅವರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಜವಾಬ್ದಾರಿಯಿಂದ ಮುಕ್ತಗೊಳಿಸುವ ಮುನ್ಸೂಚನೆಯನ್ನು ಪಕ್ಷದ ವರಿಷ್ಠ ಹೆಚ್.ಡಿ. ದೇವೆಗೌಡ ನೀಡಿದ್ದಾರೆ.

ಬೆಂಗಳೂರಿನಲ್ಲಿ ಇಂದು ನಡೆದ ಜೆಡಿಎಸ್ ಸಭೆ ಸಂಜೆ ಮುಕ್ತಾಯವಾಗಿದೆ. ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ದೇವೆಗೌಡ, ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿರುವುದರಿಂದ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡುವುದು ಕಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷಕ್ಕೆ ನೂತನ ರಾಜ್ಯಾಧ್ಯಕ್ಷರನ್ನು ನೇಮಿಸುವ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಇನ್ನು ಪಕ್ಷದ ರಾಜ್ಯಾಧ್ಯಕ್ಷರ ಜೊತೆಗೆ ಪಕ್ಷದ ಪದಾಧಿಕಾರಿಗಳ ಬದಲಾವಣೆ ಕೂಡ ಆಗಬೇಕಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕಕ್ಕೆ ಸಮಿತಿ‌ ರಚನೆ ಆಗಲಿದೆ ಎಂದು ದೇವೆಗೌಡರು ಮಾಹಿತಿ ನೀಡಿದರು. ಪಕ್ಷದ ನಿಯಮಾವಳಿ ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಸಮಿತಿ ರಚನೆ ಮಾಡುವುದಾಗಿ ಅವರು ಹೇಳಿದರು.

ಇದೇ ವೇಳೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಜೊತೆ ಸೀಟು ಹಂಚಿಕೆ ಕುರಿತು ಯಾವುದೇ ಮಾತುಕತೆಯಾಗಿಲ್ಲ ಎಂದು ದೇವೆಗೌಡರು ಸ್ಪಷ್ಟಪಡಿಸಿದರು. ಈ ಕುರಿತು ಮುಂದಿನ ತಿಂಗಳು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದರು. 

click me!