ಇನ್ನೂ ಜೀವಂತವಾಗಿದೆ ದೇವದಾಸಿ ಅನಿಷ್ಠ ಪದ್ಧತಿ: ಹತ್ತು ವರ್ಷದ ಪುಟ್ಟ ಬಾಲಕಿಯ ರಕ್ಷಣೆ

By Suvarna Web DeskFirst Published Jun 17, 2017, 8:51 AM IST
Highlights

ದೇವದಾಸಿಯಂತಹ ಅನಿಷ್ಠ ಪದ್ಧತಿ ಹೋಗಲಾಡಿಸಲು ಸರ್ಕಾರ ಅದೆಷ್ಟೇ ಕ್ರಮಗಳನ್ನು ಕೈಗೊಂಡರೂ ಇನ್ನೂ ನಿರ್ಮೂಲನೆ ಆಗಿಲ್ಲ. ಈ ದೇವದಾಸಿ ಪದ್ಧತಿ ಕಲಬುರಗಿ ಜಿಲ್ಲೆಯಲ್ಲಿ ಇನ್ನೂ ಜೀವಂತವಿದೆ. ತಾಳಿ ಕಟ್ಟಿಕೊಂಡು ದೇವದಾಸಿ ಕೂಪದಲ್ಲಿದ್ದ ಹತ್ತು ವರ್ಷದ ಪುಟ್ಟ ಬಾಲಕಿಯನ್ನು ರಕ್ಷಿಸಲಾಗಿದ್ದು, ಇನ್ನೂ ಹತ್ತಾರು ಬಾಲಕಿಯರು ಈ ಕೂಪದಲ್ಲಿದ್ದಾರೆ ಅಂತ ಅಂದಾಜಿಸಲಾಗಿದೆ.

ಕಲಬುರ್ಗಿ(ಜೂ.17): ದೇವದಾಸಿಯಂತಹ ಅನಿಷ್ಠ ಪದ್ಧತಿ ಹೋಗಲಾಡಿಸಲು ಸರ್ಕಾರ ಅದೆಷ್ಟೇ ಕ್ರಮಗಳನ್ನು ಕೈಗೊಂಡರೂ ಇನ್ನೂ ನಿರ್ಮೂಲನೆ ಆಗಿಲ್ಲ. ಈ ದೇವದಾಸಿ ಪದ್ಧತಿ ಕಲಬುರಗಿ ಜಿಲ್ಲೆಯಲ್ಲಿ ಇನ್ನೂ ಜೀವಂತವಿದೆ. ತಾಳಿ ಕಟ್ಟಿಕೊಂಡು ದೇವದಾಸಿ ಕೂಪದಲ್ಲಿದ್ದ ಹತ್ತು ವರ್ಷದ ಪುಟ್ಟ ಬಾಲಕಿಯನ್ನು ರಕ್ಷಿಸಲಾಗಿದ್ದು, ಇನ್ನೂ ಹತ್ತಾರು ಬಾಲಕಿಯರು ಈ ಕೂಪದಲ್ಲಿದ್ದಾರೆ ಅಂತ ಅಂದಾಜಿಸಲಾಗಿದೆ.

ಹತ್ತು ವರ್ಷದ ಆಕೆ ಎಲ್ಲರಂತೆ ಶಾಲೆಗೆ ಹೋಗುತ್ತಾಳೆ. ಆದರೆ ಟೈ ಇರಬೇಕಾದ ಬಾಲಕಿಯ ಕೊರಳಲ್ಲಿ ತಾಳಿ ಇದೆ. ದೇವದಾಸಿ ಪದ್ಧತಿಯಂತೆ ಐದು ವರ್ಷದವಳಿದ್ದಾಗಲೇ ಹೆತ್ತವರು ಕಟ್ಟಿಸಿರುವ ತಾಳಿ. ದೇವದಾಸಿಯೆಂಬ ಅನಿಷ್ಠ ಕೂಪದಲ್ಲಿ ತಳ್ಳಲ್ಪಟ್ಟಿದ್ದ ಹುಡುಗಿಯನ್ನು  ಮಕ್ಕಳ ಕಲ್ಯಾಣ ಸಮಿತಿಯವರು ರಕ್ಷಣೆ ಮಾಡಿದ್ದಾರೆ. ಈಗಲೂ ಅನಿಷ್ಠ ಪದ್ಧತಿ ಕಂಡು ಬಂದಿರುವುದು ಕಲಬುರಗಿಯ ಚಿತ್ತಾಪೂರ ತಾಲೂಕಿನ ಮಾವಿನಸೂರ ಗ್ರಾಮದಲ್ಲಿ. ತಾಳಿ ಎಂದರೇನು ಗೊತ್ತಾಗದ ವಯಸ್ಸಿಗೆ ಈ ಬಾಲಕಿಯ ಕೊರಳಿಗೆ ತಾಳಿ ಬಿದ್ದಿದೆ.

ಚಿತ್ತಾಪೂರ ತಾಲೂಕಿನ ಮಾವಿನಸೂರು ಗ್ರಾಮದ ದಲಿತ ಕುಟುಂಬವೊಂದು ತನ್ನ ಮಗಳಿಗೆ ಯಾರದೋ ದೈವವಾಣಿ ನಂಬಿಕೊಂಡು ದೇವದಾಸಿಯನ್ನಾಗಿ ಮಾಡಿದ್ದರು. ಈ ದೇವದಾಸಿ ಪರಂಪರೆಯಂತೆ ಬಾಲಕಿ ಐದು ವರ್ಷದವಳಿದ್ದಾಗಲೇ ಮುತ್ತು ಕಟ್ಟಿಸಿದ್ದರು. ಈ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ಬಂದ ಅನಾಮಧೇಯ ದೂರೊಂದನ್ನು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಇದೆಲ್ಲದಕ್ಕೂ ಕಾರಣ ಈ ಗ್ರಾಮದ ಸಾಮವ್ವ ದೇವಸ್ಥಾನದ ಪೂಜಾರಿ ಶರಣಪ್ಪ ಎಂಬಾತನ ಕಿತಾಪತಿಯಂತೆ.

ಮಕ್ಕಳ ಕಲ್ಯಾಣ ಸಮಿತಿಯವರು ನೀಡಿರುವ ದೂರನ್ನು ಆಧರಿಸಿ ಕಾಳಗಿ ಪೊಲೀಸರು ಈ ಬಾಲಕಿಯ ಹೆತ್ತವರು ಮತ್ತು ಇವೆಲ್ಲಕ್ಕೂ ಕಾರಣವಾದ ವಂಚಕ ಪೂಜಾರಿ ಶರಣಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಬಾಲಕಿಯನ್ನು ಕಲಬುರಗಿಯ ಬಾಲಕಿಯರ ಬಾಲ ಭವನದಲ್ಲಿ ಆಶ್ರಯ ನೀಡಲಾಗಿದೆ. ಇಷ್ಟೇ ಅಲ್ಲದೇ ಅಂಗನವಾಡಿ ಕಾರ್ಯಕರ್ತೆ ಮತ್ತು ಈ ಈ ಬಾಲಕಿ ಓದುವ ಸರಕಾರಿ ಶಾಲೆಯ ಮುಖ್ಯ ಗುರುಗಳ ವಿರುದ್ದ ದೂರು ದಾಖಲಿಸಲಾಗಿದೆ. ಈ ಪದ್ಧತಿಗೆ ಸಿಲುಕಿ ಅದೆಷ್ಟು ಮಕ್ಕಳು ಕೂಪದಲ್ಲಿ ಇದ್ದಾರೋ ಎನ್ನುವುದು ಸಮಗ್ರ ತನಿಖೆಯಿಂದ ಮಾತ್ರ ಬೆಳಕಿಗೆ ಬರಬೇಕಾಗಿದೆ.

click me!